×
Ad

ರಾಯಚೂರು ತಾಲೂಕು ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹ

ಸಿಪಿಐ(ಎಂಎಲ್) ಲಿಬರೇಶನ್ ತಂಡದಿಂದ ಬೆಳೆ ಹಾನಿ ಪರಿಶೀಲನೆ

Update: 2026-07-15 19:31 IST

ರಾಯಚೂರು, ಜು.16: ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ತಾಲೂಕು ಸಮಿತಿಯು ಬುಧವಾರ ಅರಳಿಬೆಂಚಿ ಹಾಗೂ ಆಶಾಪುರ್ ಗ್ರಾಮಗಳಿಗೆ ಭೇಟಿ ನೀಡಿ ಬರದಿಂದ ಹಾನಿಗೊಳಗಾದ ಬೆಳೆಗಳ ಸ್ಥಿತಿಯನ್ನು ಪರಿಶೀಲಿಸಿತು.

ತಾಲೂಕು ಕಾರ್ಯದರ್ಶಿ ಅಜೀಜ್ ಜಾಗೀರದಾರ್ ನೇತೃತ್ವದ ತಂಡವು ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಗಳನ್ನು ವೀಕ್ಷಿಸಿ, ರೈತರೊಂದಿಗೆ ಮಾತುಕತೆ ನಡೆಸಿ ವಾಸ್ತವ ಮಾಹಿತಿ ಸಂಗ್ರಹಿಸಿತು.

ಈ ವೇಳೆ ಮಾತನಾಡಿದ ಅಜೀಜ್ ಜಾಗೀರದಾರ್, ತಾಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸರ್ಕಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿಲ್ಲ. ಜನಪ್ರತಿನಿಧಿಗಳೂ ರೈತರ ಸಂಕಷ್ಟ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ರಾಯಚೂರು ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಎಕರೆಗೆ ₹50 ಸಾವಿರ ಬೆಳೆ ನಷ್ಟ ಪರಿಹಾರ ನೀಡಬೇಕು. ಬೆಳೆ ಹಾನಿಯ ಸಮಗ್ರ ಸಮೀಕ್ಷೆ ನಡೆಸಿ ಪರಿಹಾರ ವಿತರಿಸಬೇಕು ಹಾಗೂ ಉದ್ಯೋಗ ಖಾತರಿ ಯೋಜನೆಯಡಿ ಕೃಷಿ ಕಾರ್ಮಿಕರಿಗೆ ಹೆಚ್ಚಿನ ಕೆಲಸದ ದಿನಗಳನ್ನು ಕಲ್ಪಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೆ. ಯಲ್ಲಪ್ಪ, ಎಂ.ಎಸ್. ಮಹೇಂದ್ರ, ಜಿಲಾನಿ ಯರಗೇರಾ, ನರಸಪ್ಪ, ವೀರೇಶ, ದೊಡ್ಡ ನರಸಪ್ಪ, ದೊಡ್ಡಸಾಬಣ್ಣ, ಮಹೇಶ್, ಭೀಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News