Raichur | ಕೃಷಿ ಇಲಾಖೆ ನೇಮಕಾತಿ, ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
ರಾಯಚೂರು : ಕೃಷಿ ಇಲಾಖೆಯಲ್ಲಿನ ಅವೈಜ್ಞಾನಿಕ ನೇಮಕಾತಿ ಕ್ರಮಗಳನ್ನು ರದ್ದುಪಡಿಸುವುದು ಹಾಗೂ ಕೃಷಿ ಶಿಕ್ಷಣದ ಖಾಸಗೀಕರಣವನ್ನು ತಡೆಯಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಬುಧವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಮಾತನಾಡಿ, ಸುಪ್ರೀಂ ಕೋರ್ಟ್ 2025ರ ಏಪ್ರಿಲ್ 10ರ ತೀರ್ಪಿನ ಪ್ರಕಾರ ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ಅರ್ಹತಾ ಮಾನದಂಡಗಳನ್ನು ಬದಲಾಯಿಸಲು ಅವಕಾಶವಿಲ್ಲ. ಆದರೂ ಕೃಷಿ ಅಧಿಕಾರಿ (ಎಒ) ಹಾಗೂ ಸಹಾಯಕ ಕೃಷಿ ಅಧಿಕಾರಿ (ಎಎಒ) ಹುದ್ದೆಗಳ ನೇಮಕಾತಿಯಲ್ಲಿ ಕೊನೆಯ ಕ್ಷಣದಲ್ಲಿ ಐಸಿಎಆರ್ ಮಾನ್ಯತೆ ಇಲ್ಲದ ಖಾಸಗಿ ರೈ ಟೆಕ್ನಾಲಜಿ (Rai Technology) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೆಇಎ ಪರೀಕ್ಷೆಗೆ ಅವಕಾಶ ನೀಡಿರುವುದು ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ರಾಜ್ಯದ ಸರ್ಕಾರಿ ಕೃಷಿ ವಿಶ್ವವಿದ್ಯಾಲಯಗಳಿಗೆ ಸಂಯೋಜಿತವಾಗಿರುವ ಖಾಸಗಿ ಕೃಷಿ ಕಾಲೇಜುಗಳ ಪ್ರವೇಶಾತಿಯನ್ನು ಈ ಶೈಕ್ಷಣಿಕ ವರ್ಷದಿಂದಲೇ ಸ್ಥಗಿತಗೊಳಿಸಬೇಕು. ಕೃಷಿ ಇಲಾಖೆಯ ಎಒ ಮತ್ತು ಎಎಒ ಹುದ್ದೆಗಳಿಗೆ ಬಿ.ಇ. ಬಯೋಟೆಕ್ ಪದವೀಧರರಿಗೆ ಅವಕಾಶ ನೀಡಿರುವ ನಿರ್ಧಾರವನ್ನೂ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
‘ದೇಸಿ’ ಕೋರ್ಸ್ ಮೂಲಕ ಅರ್ಹತೆ ಇಲ್ಲದವರಿಗೆ ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟದ ಪರವಾನಗಿ ನೀಡುತ್ತಿರುವುದು ರೈತರ ಹಿತಕ್ಕೆ ವಿರುದ್ಧವಾಗಿದ್ದು, ಆ ಕೋರ್ಸ್ ಅನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ವರ್ಷ ಕೃಷಿ ಇಲಾಖೆಯಲ್ಲಿ ನೇಮಕಾತಿ ನಡೆಸಬೇಕು. ಪ್ರಸ್ತುತ ಎಒ ಹಾಗೂ ಎಎಒ ನೇಮಕಾತಿಯಲ್ಲಿ ಶೇ.2ರಷ್ಟು ಕ್ರೀಡಾ ಮೀಸಲಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ವಿದ್ಯಾರ್ಥಿಗಳು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಅಂಕೇಶ, ಶಿವಪ್ಪ, ಮಲ್ಲಿಕಾರ್ಜುನ, ಶ್ರೀಧರ್, ಸನತ್ ಕುಲಕರ್ಣಿ, ಕಿರಣ ಪಾಟೀಲ, ಯುವರಾಜ್, ಅರ್ಪಿತಾ, ನಿಶ್ಚಿತ, ನಂದಿನಿ, ನರ್ಮದಾ, ರೋಹನ್ ಎಸ್.ಕವಲಗಿ, ಸತೀಶ, ಪ್ರದೀಪ, ಭೀಮಮ್ಮ, ಭವ್ಯ, ಸುಕನ್ಯಾ, ರಾಘವೇಂದ್ರ, ಗಣೇಶ, ಉಮೇಶ, ಆಕಾಶ, ನೀಲಪ್ಪ, ಮೌನೇಶ, ಮೋನಿಕಾ, ಪ್ರಧೀಪ್, ಚೇತನ್, ಸಂಗೀತ, ಮನೋಜ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.