ಬಾದ್ಯಾಪುರದಲ್ಲಿ ಅದ್ದೂರಿಯಾಗಿ ಕಾರ ಹುಣ್ಣಿಮೆ ಆಚರಣೆ
ಸುರಪುರ: ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಸೋಮವಾರ ಕಾರ ಹುಣ್ಣಿಮೆಯನ್ನು ಸಾಂಪ್ರದಾಯಿಕವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರೈತರು ತಮ್ಮ ಎತ್ತುಗಳಿಗೆ ಸ್ನಾನ ಮಾಡಿಸಿ, ಮೈಗೆ ವಿವಿಧ ಬಣ್ಣಗಳಿಂದ ಚಿತ್ತಾರ ಬಿಡಿಸಿ ಸಿಂಗರಿಸಿದರು. ಬಳಿಕ ವಿನ್ಯಾಸಗೊಳಿಸಿದ ವಸ್ತ್ರಗಳನ್ನು ತೊಡಿಸಿ, ಕೊಂಬುಗಳನ್ನು ಅಲಂಕರಿಸಿ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಅದ್ಧೂರಿ ಮೆರವಣಿಗೆ ನಡೆಸಿದರು.
ಗ್ರಾಮದ ಹನುಮಾನ ದೇವಸ್ಥಾನ ಹಾಗೂ ಗ್ರಾಮದೇವತೆಯ ದೇವಸ್ಥಾನದವರೆಗೆ ನಡೆದ ಮೆರವಣಿಗೆಯಲ್ಲಿ ಅನೇಕ ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಮೆರವಣಿಗೆಯ ವೇಳೆ ರೈತರು ಮತ್ತು ಮಕ್ಕಳು ಕೇಕೆ ಹಾಕಿ ಸಂಭ್ರಮಿಸಿದರು.
ಸಂಜೆ ವೇಳೆಗೆ ಗ್ರಾಮದ ವತನದಾರರು ಹಾಗೂ ಸಾರ್ವಜನಿಕರು ಕಳಸ ಕುಂಭಗಳೊಂದಿಗೆ ದೇವಸ್ಥಾನಗಳಿಗೆ ತೆರಳಿ ಕಾಯಿ-ಕರ್ಪೂರ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮೀಣ ಸಂಸ್ಕೃತಿ ಮತ್ತು ಕೃಷಿ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಕಾರ ಹುಣ್ಣಿಮೆ ಆಚರಣೆ ಗ್ರಾಮದಲ್ಲಿ ಸಂಭ್ರಮದಿಂದ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನಗೌಡ ಪೊಲೀಸ್ ಪಾಟೀಲ, ಸಂಗನಗೌಡ ಪೊಲೀಸ್ ಪಾಟೀಲ, ಹಣಮಂತ್ರಾಯಗೌಡ ಮಾಲಿ ಪಾಟೀಲ, ಭೀಮಣ್ಣ ಗೌಡ ಮಾಲಿ ಪಾಟೀಲ ಸೇರಿದಂತೆ ಗ್ರಾಮದ ನೂರಾರು ಜನ ಭಾಗವಹಿಸಿದ್ದರು.