Raichur | ಡಾ.ಪುನೀತ್ ರಾಜಕುಮಾರ್ ಚಾರಿಟೇಬಲ್ ಟ್ರಸ್ಟ್‌ನಿಂದ ಅನ್ನಸಂತರ್ಪಣೆ
ರಾಯಚೂರು: ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಅವರೊಂದಿಗೆ ಇದ್ದ ಸಂಬಂಧಿಕರಿಗೆ ಡಾ. ಪುನೀತ್ ರಾಜಕುಮಾರ್ (ಅಪ್ಪು) ಚಾರಿಟೇಬಲ್ ಟ್ರಸ್ಟ್, ರಾಯಚೂರು ಹಾಗೂ ಪ್ರಕೃತಿ ಹೋಂಸ್ ಡೆವಲಪರ್ಸ್ ವತಿಯಿಂದ ಸುಮಾರು ಸಾವಿರಕ್ಕೂ ಹೆಚ್ಚು ಜನರಿಗೆ ಮೃಷ್ಟಾನ್ನ ಭೋಜನ ಏರ್ಪಡಿಸಲಾಯಿತು.
ಚಿತ್ರಾನ್ನ, ಕರಿಬೇವು ರೈಸ್, ಬಿಳಿ ಅನ್ನ, ಸಾಂಬಾರ್, ಬಜ್ಜಿ, ಅಪ್ಪಳ ಹಾಗೂ ಬಾಳೆಹಣ್ಣು ಒಳಗೊಂಡ ಮದುವೆ ಸಮಾರಂಭದ ಮಾದರಿಯ ಸಾಂಪ್ರದಾಯಿಕ ಭೋಜನವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ವಿತರಿಸಲಾಯಿತು.
ಕಾರ್ಯಕ್ರಮವನ್ನು ಶ್ರೀ ಸಾಯಿ ಕಿರಣ್ ಆದೋನಿ ಗುರೂಜಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ. ಅಸ್ಲಾಂ ಪಾಶಾ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಾಯಿ ಕಿರಣ್ ಆದೋನಿ ಗುರೂಜಿ, ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸಾವಿರಾರು ನಿರ್ಗತಿಕರು, ಬಡವರು ಹಾಗೂ ಅಗತ್ಯವಿದ್ದವರಿಗೆ ನಿರಂತರವಾಗಿ ಆಹಾರ ವಿತರಿಸುವ ಮೂಲಕ ಸಾದಿಕ್ ಖಾನ್ ಮಾನವೀಯ ಸೇವೆಯ ಅಪರೂಪದ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಸಾಮಾನ್ಯವಾಗಿ ಸಿನಿಮಾ ನಟರ ಮೇಲಿನ ಅಭಿಮಾನವು ಅವರ ಚಿತ್ರಗಳನ್ನು ನೋಡುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಡಾ. ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ನಿಸ್ವಾರ್ಥ ಸೇವೆಯ ಪ್ರತೀಕವಾಗಿದೆ ಎಂದು ಅವರು ಹೇಳಿದರು.
ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಮದುವೆ ಸಮಾರಂಭಗಳಲ್ಲಿ ಬಡಿಸುವ ರೀತಿಯ ಮೃಷ್ಟಾನ್ನ ಭೋಜನವನ್ನು ಪ್ರೀತಿಯಿಂದ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದ್ದು, ಇಂತಹ ಸೇವೆಗಳು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಲಪಡಿಸುವುದರ ಜೊತೆಗೆ ಯುವಜನತೆಗೆ ಪ್ರೇರಣೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಭಗವಂತನಲ್ಲಿ ಲೀನರಾಗಿರುವ ಡಾ. ಪುನೀತ್ ರಾಜಕುಮಾರ್ ಅವರ ಆಶೀರ್ವಾದ ಇಂತಹ ಸಮಾಜಮುಖಿ ಕಾರ್ಯಗಳಿಗೆ ಸದಾ ಇರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯದಾದ್ಯಂತ ಅಭಿಮಾನಿಗಳು ಸಾದಿಕ್ ಖಾನ್ ಅವರಂತಹ ಸಮಾಜಸೇವಕರಿಂದ ಪ್ರೇರಣೆ ಪಡೆದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಡಾ. ಪುನೀತ್ ರಾಜಕುಮಾರ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಾದಿಕ್ ಖಾನ್ ಅವರ ನೇತೃತ್ವದಲ್ಲಿ ಕಳೆದ ಆರು ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿ ತಿಂಗಳು ರಿಮ್ಸ್ ಆಸ್ಪತ್ರೆಯಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಪ್ರಕೃತಿ ಹೋಂಸ್ ಡೆವಲಪರ್ಸ್ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ್ ರೆಡ್ಡಿ, ಮಹಮ್ಮದ್ ರಿಯಾಜ್, ನದೀನ್ ಯರಗೇರ, ಮುಬೀನ್, ಫೇರೋಜ್ ಅಹ್ಮದ್, ಫಾರೂಕ್ ಹುಸೇನ್, ಉಸ್ಮಾನ್, ಅಜ್ಜು, ಹೊಸೂರು ಬಸವರಾಜ್, ಹೊಸೂರು ನಾಸೀರ್, ವಿಕಾಸ್, ಸಾಗರ್, ಮೌಲಾ, ರೆಡಮ್ಮ, ಮೈಬೂಬ್, ರೆಹನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.