×
Ad

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ : ಕಥೆ–ಕವನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಘೋಷಣೆ

Update: 2026-06-29 19:42 IST

ರಾಯಚೂರು: ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಬೆಳ್ಳಿ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಪತ್ರಕರ್ತರ ಕಥೆ ಹಾಗೂ ಕವನ ಸ್ಪರ್ಧೆಯ ಫಲಿತಾಂಶವನ್ನು ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಪ್ರಕಟಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳ ಪತ್ರಕರ್ತರಿಂದ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಆಯ್ಕೆಯಾದ ಕೃತಿಗಳು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಸೃಜನಶೀಲತೆಯನ್ನು ಅನಾವರಣಗೊಳಿಸಿವೆ ಎಂದು ತಿಳಿಸಿದರು.

ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಚಿತ್ರದುರ್ಗದ ಪ್ರಜಾವಾಣಿ ಪತ್ರಿಕೆಯ ಸಹಾಯಕ ವರದಿಗಾರ ಕೆ.ಪಿ. ಓಂಕಾರಮೂರ್ತಿ ಅವರ “ಡೆಡ್ ಲೈನ್” ಕಥೆ ಪ್ರಥಮ ಸ್ಥಾನ ಪಡೆದಿದೆ. ಮೈಸೂರಿನ ದಿ ಟೈಮ್ಸ್ ಆಫ್ ಇಂಡಿಯಾ ವಿಶೇಷ ವರದಿಗಾರ ಶ್ರೀನಿವಾಸ ಎಂ. ಅವರ “ನಿಧನ ವಾರ್ತೆ” ಕಥೆಗೆ ದ್ವಿತೀಯ ಹಾಗೂ ಉದಯವಾಣಿ ರಾಯಚೂರು ಹಿರಿಯ ಜಿಲ್ಲಾ ವರದಿಗಾರ ಸಿದ್ದಯ್ಯಸ್ವಾಮಿ ಕುಕನೂರು ಅವರ “ಪ್ರೆಸಿಡೆಂಟ್ ಶಂಕ್ರ” ಕಥೆಗೆ ತೃತೀಯ ಸ್ಥಾನ ಲಭಿಸಿದೆ.

ತೀರ್ಪುಗಾರರ ವಿಶೇಷ ಮೆಚ್ಚುಗೆಗೆ ಪ್ರಜಾವಾಣಿಯ ಡಾ. ಶರಣಪ್ಪ ಅನಾಹೊಸೂರು ಅವರ “ನಮ್ಮ ಹುಡು”, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ನ ಬಸವರಾಜ ಭೋಗಾವತಿ ಅವರ “ಕಪ್ಪು ಬಣ್ಣದ ಬೂಟು” ಹಾಗೂ ಉದಯವಾಣಿಯ ಹಿರಿಯ ಉಪಸಂಪಾದಕ ಅನಿಲ್ ಕುಮಾರ ಕೈರಂಗಳ ಅವರ “ಹಪ್ಪಳ ಸ್ವಾಮಿ” ಕಥೆಗಳು ಪಾತ್ರವಾಗಿವೆ.

ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಶ್ರೀನಿವಾಸ ಎಂ. ಅವರ “ಮುಸ್ಸಂಜೆಯ ಕಥೆಗಳು” ಕವನ ಪ್ರಥಮ ಸ್ಥಾನ ಪಡೆದಿದೆ. ಹಿರಿಯ ಪತ್ರಕರ್ತ ಶಂಕರ ಪಾಗೋಜಿ ಅವರ “ಧರ್ಮ ಧಳ್ಳುರಿ” ಹಾಗೂ ಬಿಟಿವಿ ರಾಯಚೂರು ಜಿಲ್ಲಾ ವರದಿಗಾರ ಚಂದಪ್ಪ ದೊರನಹಳ್ಳಿ ಅವರ “ಹೆತ್ತವ್ವನ ಸೆರಗಿನ ಚಪ್ಪರ” ಕವನಗಳು ಜಂಟಿಯಾಗಿ ದ್ವಿತೀಯ ಸ್ಥಾನ ಪಡೆದಿವೆ. ಕೊಪ್ಪಳ ಜಿಲ್ಲೆಯ ಉಮಾಶಂಕರ ಹಿರೇಮಠ ಯಲಬುರ್ಗಾ ಅವರ “ಅಂಧಭಕ್ತರು” ಕವನ ತೃತೀಯ ಸ್ಥಾನ ಗಳಿಸಿದೆ.

ಕವನ ವಿಭಾಗದಲ್ಲಿ ಭೀಮಸೇನರಾವ್ ಕೆ. ಕುಲಕರ್ಣಿ ವಾರ್ ಅವರ “ನಾಡದೇವಿ ನಿನ್ನ ನೆನೆದು”, ಅನಿಲ್ ಕುಮಾರ ಕೈರಂಗಳ ಅವರ “ಭಾವುಕರಾಗುವ ಮುನ್ನ” ಹಾಗೂ ಬಸವರಾಜ ಕೆ.ಜಿ. ದಾವಣಗೆರೆ ಅವರ “ಸಾವೇ ಇಲ್ಲದ ಪ್ರೀತಿಗಾಗಿ” ಕವನಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ.

ಕಥಾ ಸ್ಪರ್ಧೆಯ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳು ಕ್ರಮವಾಗಿ ₹10,000, ₹7,000 ಹಾಗೂ ₹3,000 ಆಗಿದ್ದು, ಕವನ ಸ್ಪರ್ಧೆಯ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳು ಕ್ರಮವಾಗಿ ₹5,000, ₹3,000 ಹಾಗೂ ₹2,000 ನಿಗದಿಪಡಿಸಲಾಗಿದೆ. ತೀರ್ಪುಗಾರರ ಮೆಚ್ಚುಗೆ ಪಡೆದ ಪ್ರತಿಯೊಂದು ಕಥೆ ಹಾಗೂ ಕವನಕ್ಕೂ ₹1,000 ನಗದು ಬಹುಮಾನ ನೀಡಲಾಗುವುದು ಎಂದು ವಿಜಯ ಜಾಗಟಗಲ್ ತಿಳಿಸಿದರು.

ಖ್ಯಾತ ಕಥೆಗಾರ ಮಹಾಂತೇಶ ನವಲಕಲ್ ಕಥಾ ವಿಭಾಗದ ತೀರ್ಪುಗಾರರಾಗಿ ಹಾಗೂ ಹಿರಿಯ ಪತ್ರಕರ್ತ-ಕವಿ ತುರುವೀಹಾಳ ಚಂದ್ರು ಕವನ ವಿಭಾಗದ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಸ್ಪರ್ಧೆಯ ವಿಜೇತರಿಗೆ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಬಹುಮಾನ ಪ್ರದಾನ ಮಾಡಿ ಗೌರವಿಸಲಾಗುವುದು. ಅಲ್ಲದೆ, ಪ್ರಶಸ್ತಿ ವಿಜೇತ ಹಾಗೂ ಆಯ್ಕೆಯಾದ ಇತರೆ ಉತ್ತಮ ಕಥೆ-ಕವನಗಳನ್ನು ಸಂಕಲಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೊಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹೂಗಾರ್, ಜಂಟಿ ಕಾರ್ಯದರ್ಶಿ ಶ್ರೀಕಾಂತ್ ಸಾವೂರ್, ಕಾರ್ಯಕರ್ಣಿ ಸದ್ಯಸರಾದ ಚನ್ನಬಸವ ಬಾಗಲವಾಡ, ಖಾನ್ ಸಾಬ್ ಮೊಮೀನ್, ಆನಂದ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News