Raichur | SIR ಪ್ರಕ್ರಿಯೆ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ : ಜನಜಾಗೃತಿ ಸಮಾವೇಶ
ರಾಯಚೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎಸ್‌ಡಿಪಿಐ ವತಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಮಹಿಳಾ ಸಮಾಜದ ಮೈದಾನದಲ್ಲಿ ಬೃಹತ್ ಜನಜಾಗೃತಿ ಸಮಾವೇಶ ಆಯೋಜಿಸಲಾಯಿತು.
ನಗರದ ಟಿಪ್ಪುಸುಲ್ತಾನ್ ಉದ್ಯಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳಿಕ ಮಹಿಳಾ ಸಮಾಜದ ಮೈದಾನದಲ್ಲಿ ಸಮಾವೇಶಗೊಂಡಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಮಾತನಾಡಿ, SIR ಪ್ರಕ್ರಿಯೆಯ ಕುರಿತು ಸಮರ್ಪಕ ಮಾಹಿತಿ ಇಲ್ಲದಿದ್ದರೆ ಅನೇಕ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
SIR ಎನ್ಯೂಮರೇಷನ್ ಪ್ರಕ್ರಿಯೆಯಲ್ಲಿ ಅರ್ಜಿಗಳನ್ನು ಸರಿಯಾಗಿ ಭರ್ತಿ ಮಾಡುವುದು, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಹಾಗೂ ತಾಂತ್ರಿಕ ಅರಿವು ಹೊಂದುವುದು ಅಗತ್ಯವಾಗಿದೆ. ಕಾರ್ಯಕರ್ತರು ಮತ್ತು ಸಮಾಜದ ಮುಖಂಡರು ಮನೆಮನೆಗೆ ತೆರಳಿ ಜನರಿಗೆ ನೆರವಾಗಬೇಕು ಎಂದು ಅವರು ಮನವಿ ಮಾಡಿದರು.
SIR ಪ್ರಕ್ರಿಯೆಯ ಮೂಲಕ ಮತದಾರರ ಹಕ್ಕುಗಳಿಗೆ ಧಕ್ಕೆಯಾಗುವ ಸಾಧ್ಯತೆಯಿದೆ. ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ ಎಂಬ ಅಂಶದ ಆಧಾರದ ಮೇಲೆ ಮತದಾರರು ಪಟ್ಟಿಯಿಂದ ಹೊರಗುಳಿಯುವ ಆತಂಕವಿದೆ ಎಂದು ತಿಳಿಸಿದರು.
ದೇಶದಲ್ಲಿ ಅನಕ್ಷರಸ್ಥರ ಪ್ರಮಾಣ ಇನ್ನೂ ಹೆಚ್ಚಿರುವ ಹಿನ್ನೆಲೆಯಲ್ಲಿ ಎಐ ಆಧಾರಿತ ವಿಧಾನಗಳ ಬಳಕೆಯಿಂದ ಹಲವರು ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟ ಅವರು, ಕರ್ನಾಟಕ ಸರ್ಕಾರವು ಮಧ್ಯಪ್ರವೇಶಿಸಿ ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ ಅಂಶವನ್ನು ಕೈಬಿಡುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಪಿಐ ರಾಯಚೂರು ಜಿಲ್ಲಾಧ್ಯಕ್ಷ ಖಾದರ್ ಪಾಷಾ ವಹಿಸಿದ್ದರು.
ಈ ಸಂದರ್ಭದಲ್ಲಿ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ, ಸೈಯದ್ ಮುರ್ಷದ್ ಜಾನಿ ಸಾಹೇಬ್, ಮೋತಿ ಮಸೀದಿಯ ಇಮಾಮ್ ಹಾಫಿಜ್ ಯೂಸುಫ್ ಖಾದ್ರಿ ಸೇರಿದಂತೆ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಸಾವಿರಾರು ಸಾರ್ವಜನಿಕರು ಭಾಗವಹಿಸಿದ್ದರು.