ಇನಾಂ ವೀರಾಪುರ ಗ್ರಾಮದಲ್ಲಿ ಮರ್ಯಾದೆ ಹತ್ಯೆ ಪ್ರಕರಣ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಿಪಿಐ(ಎಂಎಲ್) ಆಗ್ರಹ
ರಾಯಚೂರು: ಧಾರವಾಡ ಜಿಲ್ಲೆಯ ಇನಾಂ ವೀರಾಪುರ ಗ್ರಾಮದಲ್ಲಿ ಪೀತಿಸಿ ವಿವಾಹವಾಗಿದ್ದ ದಂಪತಿಗಳ ಕೊಲೆಗೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಿಪಿಐ(ಎಂಎಲ್) ಲಿಬರೇಶನ್ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್, “ಈ ದುಷ್ಕೃತ್ಯವು ಆಘಾತಕಾರಿಯಾಗಿದೆ. ಅನ್ಯ ಜಾತಿ ಯುವಕನನ್ನು ಮದುವೆಯಾಗಿದ್ದಾಳೆಂಬ ಕಾರಣಕ್ಕೆ ಗರ್ಭಿಣಿ ಮಗಳನ್ನು ಕೊಲೆಗೈದು, ಯುವಕನ ಮನೆಯವರ ಮೇಲೆ ದಾಳಿ ನಡೆಸಿದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಸಂವಿಧಾನ ದೇಶವನ್ನು ಜಾತ್ಯಾತೀತ ರಾಷ್ಟ್ರವೆಂದು ಘೋಷಿಸಿದೆ. ದೇಶ ಸ್ವಾತಂತ್ರ‍್ಯ ಗಳಿಸಿ 78 ವರ್ಷಗಳ ನಂತರವೂ ಹಲವರು ಜಾತಿ ಸಂಕುಚಿತತೆಯಿಂದ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಪರಸ್ಪರ ಪ್ರೀತಿಸಿ ವಿವಾಹವಾಗಿ ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತಿದ್ದ ಮುಗ್ಧ ದಂಪತಿಯ ಮೇಲೆ ಕುಟುಂಬದವರ ಈ ವರ್ತನೆ ಪ್ರಾಣಿಗಳಿಗಿಂತಲೂ ಕ್ರೂರವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಶಾಂತಿ-ಸುವ್ಯವಸ್ಥೆ ಕಾಪಾಡಬೇಕೆಂದು” ನಾಗರಾಜ ಪೂಜಾರ್ ಆಗ್ರಹಿಸಿದ್ದಾರೆ.