×
Ad

RAICHURU | ವಿಬಿ-ಜಿ ರಾಮ್ ಜಿ ಮಸೂದೆ ವಾಪಸ್ ಪಡೆಯಲು ಆಗ್ರಹಿಸಿ ಸಿಪಿಐ(ಎಂಎಲ್) ಲಿಬರೇಶನ್ ಧರಣಿ

Update: 2025-12-22 10:24 IST

ರಾಯಚೂರು, ಡಿ.21: ಕೇಂದ್ರದ ಬಿಜೆಪಿ ಸರಕಾರ ಜಾರಿಗೆ ತಂದಿರುವ ವಿಕಸಿತ ಭಾರತ ರೋಜ್ ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ-2025ನ್ನು ಹಿಂಪಡೆಯುವಂತೆ ಹಾಗೂ ಈ ಹಿಂದೆ ಇದ್ದಂತೆ ಎಂನರೇಗಾ ಯೋಜನೆಯನ್ನು ಮುಂದುವರಿಸುವಂತೆ ಒತ್ತಾಯಿಸಿ, ಸಿಪಿಐ(ಎಂಎಲ್) ಲಿಬರೇಶನ್ ಹಾಗೂ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ವತಿಯಿಂದ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ರವಿವಾರ ಧರಣಿ ನಡೆಯಿತು.

ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್ ಮಾತನಾಡಿ, 'ಕೇಂದ್ರದ ಬಿಜೆಪಿ ಸರಕಾರ ಎಂಎನ್ ಪಿ(ನ್ಯಾಶನಲ್ ಮಾನಿಟೈಜೇಶನ್ ಪೈಪ್ಲೈನ್) ಮೂಲಕ ಸಾರ್ವಜನಿಕ ಉದ್ದಿಮೆ, ಸಂಸ್ಥೆಗಳನ್ನು ಬಂಡವಾಳಿಗರಿಗೆ ಹರಾಜು ಹಾಕಿ ಜನರ ಸೊತ್ತನ್ನು ದೋಚಿದೆ. ಈಗ ದೇಶದ ಬಡವರು, ಮಧ್ಯಮ ವರ್ಗದವರಿಗೆ ಆಸರೆಯಾಗಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಿಸಿ, ವಿಬಿ-ಜಿ ರಾಮ್ ಜಿ ಮಸೂದೆಯನ್ನು ಜಾರಿಗೆ ತರುವ ಮೂಲಕ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ. ಡಿಸೆಂಬರ್ 18ರಂದು ಲೋಕಸಭೆಯಲ್ಲಿ ಮಂಡನೆಯಾಗಿದ್ದ ಈ ಮಸೂದೆಯನ್ನು ಡಿಸೆಂಬರ್ 21ರ ಮಧ್ಯರಾತ್ರಿ ರಾಜ್ಯಸಭೆಯಲ್ಲಿ ಮಂಡಿಸುವ ಮೂಲಕ ಅನುಮೋದನೆ ನೀಡಿರುವುದು ದುಡಿಯುವ ಜನರಿಗೆ ಕರಾಳ ದಿನವಾಗಿದೆ. ಈ ಹಿಂದೆ ಇದ್ದ ರಾಜ್ಯಗಳಿಗೆ ವೆಚ್ಚದ ಹಂಚಿಕೆ ಕೇಂದ್ರದ ಶೇ.90, ರಾಜ್ಯದ ಶೇ.10ರ ಅನುಪಾತವನ್ನು ಬದಲಿಸಿ, ಶೇ.60:40 ನಿಗದಿಪಡಿಸಿದ್ದು, ಇದು ರಾಜ್ಯ ಸರಕಾರಗಳ ಮೇಲೆ ಹಣದ ಹೊರೆ ಹೊರಿಸುವುದಲ್ಲದೇ, ಕೇಂದ್ರದ ಸರ್ವಾಧಿಕಾರ ನೀತಿಗೆ ಸಾಕ್ಷಿಯಾಗಿದೆ. ಸಂಘ ಪರಿವಾರದ ಮನಸ್ಥಿತಿಯ ಬಿಜೆಪಿ ಕೇವಲ ಹೆಸರನ್ನಷ್ಟೇ ಅಲ್ಲ, ಇಡೀ ಯೋಜನೆಯನ್ನೇ ನಾಮಾವಶೇಷ ಮಾಡಲು ಹೊರಟಿದೆ”ಎಂದು ಕಿಡಿಕಾರಿದರು.

ಜಿಲ್ಲಾ ಮುಖಂಡ ಅಝೀಝ್ ಜಾಗೀರದಾರ್ ಮಾತನಾಡಿ, ಕೂಲಿ ಕಾರ್ಮಿಕರು ಬಹುಕಾಲ ಹೋರಾಡಿ ಗೆದ್ದು ಪಡೆದುಕೊಂಡಿರುವ ಕಾನೂನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಾಗಿದೆ. ಅದರಲ್ಲಿ ಸುಧಾರಣೆ ತರುತ್ತೇವೆ ಎಂದು ಸುಳ್ಳು ಭರವಸೆ ನೀಡಿ, ಯೋಜನೆಯ ಎಲ್ಲ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಅಂಶಗಳನ್ನು ತೆಗೆದುಹಾಕುವ ಮೂಲಕ ಕೇಂದ್ರ ಸರಕಾರ ಬಡವರ ಮೇಲೆ ಬಹಿರಂಗವಾಗಿ ದಾಳಿ ನಡೆಸಿದೆ ಎಂದು ಹೇಳಿದರು.

ಧರಣಿಯ ಬಳಿಕ ರಾಷ್ಟ್ರಪತಿಗೆ ಮನವಿ ಪತ್ರ ರವಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಆರ್.ಎಚ್ ಕಲಮಂಗಿ, ಶ್ರೀನಿವಾಸ ಬುಕ್ಕನಟ್ಟಿ, ಪಂಪಾಪತಿ, ಬೇಳಗುರ್ಕಿ, ಹುಸೇನಪ್ಪ ಅರಳಹಳ್ಳಿ, ನಿಸಾರ್ ಅಹ್ಮದ್, ಜಗದೀಶ್, ಜಲಾಲ್ ಪಾಷಾ, ಹನುಮಂತರಾಯ, ಯಲ್ಲಪ್ಪ, ಹನೀಫ್ ಅಬಕಾರಿ, ಮಹೇಶ್ ನಾಯಕ್, ಜೀಲಾನಿ ಯರಗೇರಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News