ರಾಯಚೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳದ ತೀರ್ಮಾನವನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ್ದು ಈ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಾದ ಮಂಡಿಸಲು, ನ್ಯಾಯಾಲಯಕ್ಕೆ ಮನವರಿಕೆ ಮಾಡಲು ವಿಫಲವಾಗಿದ್ದು ಉದ್ದೇಶ ಪೂರ್ವಕವಾಗಿ ದಲಿತ ವಿರೋಧಿ‌ ನೀತಿ ಅನುಸರಿಸಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.

ಮಂಗಳವಾರ‌ ರಾಯಚೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಕ್ರಮವಾಗಿ ಶೇ 15ರಿಂದ ಶೇ 17 ಹಾಗೂ ಶೇ 3ರಿಂದ 7ಕ್ಕೆ ಹೆಚ್ಚಿಸಲು ತೀರ್ಮಾನಿಸಿದ್ದರು. ಆದರೆ ಇದನ್ನು ವಿರೋಧಿಸಿ ಕೋರ್ಟ್ ನಲ್ಲಿ ದಾವೆ ಹೂಡಿದಾಗ ರಾಜ್ಯ ಸರ್ಕಾರ ಸರಿಯಾಗಿ ಮನವರಿಕೆ ಮಾಡಿಲ್ಲ. ಹೈಕೋರ್ಟ್ ಮೀಸಲಾತಿ ಶೇ. 50 ದಾಟಬಾರದು ಎಂಬ ತೀರ್ಪಿನ ಆಧಾರದ ಮೇಲೆ ಅರ್ಜಿ ತಿರಸ್ಕಾರವಾಗಿದೆ. ನಾವು ಹೈಕೋರ್ಟ್ ಆದೇಶಕ್ಕೆ‌ ಪ್ರಶ್ನೆಮಾಡಲ್ಲ. ಆದರೆ ರಾಜ್ಯ ಸರ್ಕಾರ ಸರಿಯಾಗಿ ವಾದ ಮಾಡಿಲ್ಲ, ಇದು ದಲಿತ ವಿರೋಧಿ ನೀತಿಯಾಗಿದೆ. ಈಗ ಸುಪ್ರೀಂಕೋರ್ಟ್ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ಬದ್ಧತೆ ಪ್ರದರ್ಶಿಸಬೇಕು. ಇಲ್ಲದಿದ್ದರೆ ಬಿಜೆಪಿ ಪಕ್ಷದಿಂದ ಮೇಲ್ಮನವಿ ಅರ್ಜಿ ಸಲ್ಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮೀಸಲಾತಿಯಿಂದ ದೇಶ ನಾಶವಾಗುತ್ತೆ. ಅಭಿವೃದ್ಧಿ ಆಗಲ್ಲ ಅಂತ 1950 ರಲ್ಲಿಯೇ ಜವಾಹರಲಾಲ್ ನೆಹರು ಅವರು ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಸ್ವಾತಂತ್ರ್ಯ ಪೂರ್ವ ಭಾರತದಿಂದಲೂ ಮೀಸಲಾತಿ‌ ವಿರೋಧಿಗಳು ಈಗಲೂ ಅದೇ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿ ಎಸ್ ಐ ಆರ್ ವಿಷಯ ಇಟ್ಟುಕೊಂಡು ಕಾಕ್ರೋಚ್ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಭದ್ರತೆ ಸೃಷ್ಟಿ ಮಾಡುತ್ತಿದ್ದಾರೆ. ಮತಪಟ್ಟಿಯಿಂದ ಹೆಸರು ಕೈಬಿಟ್ಟಿರುವ ವಿಚಾರದಲ್ಲಿ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸದೇ ಪೊಲೀಸ್ ಠಾಣೆಗೆ ಹೋಗುತ್ತಿದ್ದಾರೆ. ಇವರ ಉದ್ದೇಶ ಜನಪರವಾಗಿಲ್ಲ, ರಾಜಕೀಯಮಾಡುತ್ತಿದ್ದಾರೆ ಎಂದರು.

ವಿಧಾನ ಪರಿಷತ್‌ನ ಶಿಕ್ಷಕರು ಹಾಗೂ ಪದವೀಧರರ ತಲಾ ಎರಡು ಕ್ಷೇತ್ರಗಳಿಗೆ ಅ.23ರಂದು ಚುನಾವಣೆ ನಡೆಯಲಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ 4 ಕ್ಷೇತ್ರದಲ್ಲಿ 3 ಕಡೆ ಬಿಜೆಪಿ ಅಧಿಕಾರದಲ್ಲಿದ್ದು, 1 ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಈ ಬಾರಿ 4 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಭರವಸೆ ಇದೆ ಎಂದರು.

ಬಿಜೆಪಿ ನಾಯಕ ಶಶೀಲ್ ಜಿ. ನಮೋಶಿ ಅವರು ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದು ಅವರ ಪರವಾಗಿ ಪ್ರಚಾರ ನಡೆಸಲಾಗುತ್ತಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ ಪುಟ್ಟಣ್ಣಯ್ಯ ಅವರು ಚುನಾವಣೆಯಲ್ಲಿ ಗೆಲ್ಲಲು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಉಡುಗೊರೆ ನೀಡುವುದು, ಹಣ ನೀಡುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು. ಈ ಚುನಾವಣೆ ಪ್ರಬುದ್ಧರ ಚುನಾವಣೆ ಆಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮಾಜಿ ಶಾಸಕ ತಿಪ್ಪರಾಜ ಹವಾಲ್ದಾರ್, ರವೀಂದ್ರ ಜಲ್ದಾರ್, ಸಿದ್ದನಗೌಡ ನೆಲಹಾಳ, ಡಾ.ನಾಗರಾಜ ಬಾಲ್ಕಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor