ಲಿಂಗಸುಗೂರು | ಅಪಘಾತ ಸಂತ್ರಸ್ತನಿಗೆ ಪರಿಹಾರ ಪಾವತಿಸಲು ವಿಳಂಬ: ಕೆಕೆಆರ್‌ಟಿಸಿ ಬಸ್ ಜಪ್ತಿ
ಲಿಂಗಸುಗೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಗೆ ನ್ಯಾಯಾಲಯ ಆದೇಶಿಸಿದ ಪರಿಹಾರವನ್ನು ಪಾವತಿಸದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ ಕೆಕೆಆರ್‌ಟಿಸಿ ಬಸ್‌ನ್ನು ಜಪ್ತಿ ಮಾಡಲಾಗಿದೆ.
ಚಿಕ್ಕಹಣಗಿ ಗ್ರಾಮದ ಬಸವರಾಜ ಶೆಟ್ಟಿ ಅವರ ಪುತ್ರ ವಿನೋದ್ ಅವರು ಹಿರೇಹಣಗಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ನಿಂತಿದ್ದಾಗ, ಕೆಎ-36 ಎಫ್ 1377 ನೋಂದಣಿ ಸಂಖ್ಯೆಯ ಕೆಕೆಆರ್‌ಟಿಸಿ ಬಸ್ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬಂದು ಡಿಕ್ಕಿ ಹೊಡೆದಿತ್ತು. ಪರಿಣಾಮ ವಿನೋದ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮೊದಲು ರಾಯಚೂರಿನ ಬಾಲಂಕು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕರೆದೊಯ್ಯಲಾಗಿತ್ತು.
ಈ ಅಪಘಾತಕ್ಕೆ ಸಂಬಂಧಿಸಿದಂತೆ ವಿನೋದ್ ಅವರು ಎಂವಿಸಿ 296/2023ರ ಅಡಿಯಲ್ಲಿ ಕೆಕೆಆರ್‌ಟಿಸಿ ರಾಯಚೂರು ವಿಭಾಗದ ವಿಭಾಗೀಯ ಸಂಚಾರ ನಿಯಂತ್ರಕರ ವಿರುದ್ಧ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು 2024ರ ಏಪ್ರಿಲ್ 5ರಂದು ಪರಿಹಾರ ಪಾವತಿಸುವಂತೆ ಆದೇಶಿಸಿತ್ತು. ಆದರೆ, ಪರಿಹಾರ ಪಾವತಿಯಾಗದ ಹಿನ್ನೆಲೆಯಲ್ಲಿ ಅರ್ಜಿದಾರರು ತೊಂದರೆ ಅನುಭವಿಸುವಂತಾಗಿತ್ತು.
ಈ ಹಿನ್ನೆಲೆಯಲ್ಲಿ 2026ರ ಜನವರಿ 13ರಂದು ನ್ಯಾಯಾಲಯವು ಬಸ್ ಜಪ್ತಿ ಮಾಡಲು ಆದೇಶಿಸಿತ್ತು. ಅದರಂತೆ ನ್ಯಾಯಾಲಯದ ಬೇಲಿಫ್‌ಗಳಾದ ಮಾನಪ್ಪ ಹಾಗೂ ಸಾಬಣ್ಣ ಅವರು ಬಸ್‌ನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಸಂದರ್ಭದಲ್ಲಿ ವಕೀಲರಾದ ಅರುಣಕುಮಾರ, ಕರಿಯಪ್ಪ ಹಾಗೂ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.