ಬಸವಣ್ಣನವರ ಕುರಿತು ಆಕ್ಷೇಪಾರ್ಹ ಬರಹ : ರವಿ ಹಂಜ್ ವಿರುದ್ಧ ಮಾನ್ವಿಯಲ್ಲಿ ಪ್ರತಿಭಟನೆ
ಮಾನ್ವಿ: ಲೇಖಕ ರವಿ ಹಂಜ್ ಅವರು ಬಸವಣ್ಣನವರ ಕುರಿತು ‘ಬಸವ ಮಂಟಪ’ ಕೃತಿ ರಚಿಸುವ ಮೂಲಕ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ, ಮಾನ್ವಿಯ ಬಸವ ಕೇಂದ್ರ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಪ್ರಗತಿಪರರು ಸೋಮವಾರ ಪಟ್ಟಣದ ಬಸವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ರವಿ ಹಂಜ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವಗುರು ಬಸವೇಶ್ವರರು ಧಾರ್ಮಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಬದಲಾವಣೆ ತಂದು ಜನರಿಗೆ ಸನ್ಮಾರ್ಗ ತೋರಿಸಿದವರು. ಆಗಿನ ಧಾರ್ಮಿಕ ಕಟ್ಟಳೆಗಳನ್ನು ಧಿಕ್ಕರಿಸಿ, ರಾಜಸತ್ತೆಯ ಹಂಗು ತೊರೆದು ಆದರ್ಶ ಸಮಾಜ ಕಟ್ಟಿದ ಬಸವೇಶ್ವರರ ವಿರುದ್ಧ ರವಿ ಹಂಜ್ ಅವರು ಆಕ್ಷೇಪಾರ್ಹ ಲೇಖನ ಹಾಗೂ ವಿಡಿಯೊಗಳನ್ನು ಹರಿಬಿಡುವ ಮೂಲಕ ಸಮಾಜದ ಶಾಂತಿಗೆ ಭಂಗ ತಂದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರವಿ ಹಂಜ್ ಅವರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದು ಹಾಗೂ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದನ್ನು ಸ್ವಾಗತಿಸಿದ ಪ್ರತಿಭಟನಾಕಾರರು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅವರ ಹಿಂದೆ ಇರುವವರನ್ನು ಪತ್ತೆಹಚ್ಚಿ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಜಿ. ಹಂಪಯ್ಯ ನಾಯಕ ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಧರಣಿಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಲೇಖಕ ರವಿ ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ವಿಕೃತ ಬರಹಗಳ ಹಿಂದೆ ಪ್ರಚೋದನೆ ನೀಡಿರುವ ವ್ಯಕ್ತಿಗಳು ಹಾಗೂ ಸಂಘ-ಸಂಸ್ಥೆಗಳನ್ನು ಪತ್ತೆಹಚ್ಚಿ ಅವುಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಾಹಿತಿ ಬಸವಪ್ರಭು ಪಾಟೀಲ ಬೆಟ್ಟದೂರು, ಬಸವ ಕೇಂದ್ರದ ಅಧ್ಯಕ್ಷ ಬೆಟ್ಟದೂರು ಶರಣಬಸವ ಪಾಟೀಲ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಅರುಣ್ ಚಙದಾ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಚಿಮ್ಲಾಪುರ, ಮುಖಂಡರಾದ ಎ. ಬಾಲಸ್ವಾಮಿ ಕೊಡ್ಲಿ, ಸೈಯದ್ ಖಾಲೀದ್ ಖಾದ್ರಿ, ಎಸ್. ತಿಮ್ಮಾರೆಡ್ಡಿ ಭೋಗಾವತಿ, ಶೇಖರಪ್ಪ ವಕೀಲ, ಸಿದ್ದಲಿಂಗಪ್ಪ ವಕೀಲ, ಶ್ರೀಧರ ಸ್ವಾಮಿ, ಜಿಶಾನ್ ಅಖಿಲ್ ಸಿದ್ದಿಕಿ, ಡಿ.ಜಿ. ಕರ್ಕಿಹಳ್ಳಿ, ಶ್ರೀಶೈಲಗೌಡ, ಬಿ. ನಾಗರತ್ನಮ್ಮ ಪಾಟೀಲ, ಜಯಲಕ್ಷ್ಮಿ ಪಾಟೀಲ, ತಿಪ್ಪಣ್ಣ ಎಂ. ಹೊಸಮನಿ, ಬಿ.ವಿ. ರೆಡ್ಡಿ, ಮೂಕಪ್ಪ ಕಟ್ಟಿಮನಿ, ಶಂಭನಗೌಡ ಹರವಿ, ಜಿ.ಎಂ. ರಂಗಪ್ಪ, ಮುಹಮ್ಮದ್ ಮುಜೀಬ್, ನಾಗರಾಜ ಬಳಿಗಾರ, ವೈ. ಸುರೇಶ ಪಾಟೀಲ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.