Raichur | ಬಿಚ್ಚಾಲಿ ಗ್ರಾಮದ 188 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
ರಾಯಚೂರು: ರಾಯಚೂರು ತಾಲೂಕಿನ ಬಿಚ್ಚಾಲಿ ಗ್ರಾಮದ 188 ಕುಟುಂಬಗಳಿಗೆ ಸೋಮವಾರ ಶಾಸಕ ಬಸನಗೌಡ ದದ್ದಲ್ ಅವರು ಹಕ್ಕುಪತ್ರಗಳನ್ನು ವಿತರಿಸಿದರು.
ಸುಮಾರು 35 ವರ್ಷಗಳಿಂದ ಬಿಚ್ಚಾಲಿ ಗ್ರಾಮದ ಜನರು ತಮ್ಮ ಮನೆಗಳ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದರು. ಎರಡು ಬಾರಿ ಸಂಭವಿಸಿದ ಭೀಕರ ಪ್ರವಾಹದಿಂದ ಅನೇಕ ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದವು. ಮನೆ ಕಳೆದುಕೊಂಡ ನೋವಿನ ಜೊತೆಗೆ, ತಾವು ವಾಸಿಸುತ್ತಿದ್ದ ಸ್ಥಳದ ಅಧಿಕೃತ ಹಕ್ಕುಪತ್ರವೂ ಇಲ್ಲದೆ ಹಲವು ವರ್ಷಗಳಿಂದ ಅನಿಶ್ಚಿತತೆಯಲ್ಲಿ ಜೀವನ ಸಾಗಿಸುತ್ತಿದ್ದರು.
ಗ್ರಾಮಸ್ಥರ ಈ ದೀರ್ಘಕಾಲದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಬಸನಗೌಡ ದದ್ದಲ್ ಅವರು ಸರ್ಕಾರದ ಗಮನಕ್ಕೆ ತಂದು, ಹಕ್ಕುಪತ್ರ ಕೊಡಿಸುವ ಭರವಸೆ ನೀಡಿದ್ದರು. ಇದೀಗ ಅವರ ಭರವಸೆಯಂತೆ ಬೇಡಿಕೆ ಈಡೇರಿರುವುದಕ್ಕೆ ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದರು.