ರಾಯಚೂರು: ನಗರದ ಕೊತ್ತಪೇಟೆ ಪ್ರದೇಶದ ಕೊರವರ ಓಣಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 450 ಕೆ.ಜಿ. ಸರ್ಕಾರಿ ಪಡಿತರ ಅಕ್ಕಿಯನ್ನು ನೇತಾಜಿ ನಗರ ಠಾಣೆಯ ಪೊಲೀಸರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.

ದೊರೆತ ಖಚಿತ ಮಾಹಿತಿಯನ್ವಯ ನ.23ರಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಗರ ನಿರೀಕ್ಷಕ ಶ್ರೀಹರಿ ಅವರು ನೇತಾಜಿ ನಗರ ಪೊಲೀಸ್ ಠಾಣೆಯ ಪಿಎಸ್ಸೈ ಬಸವರಾಜ್ ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದರು. ಈ ವೇಳೆ ಕೊತ್ತಪೇಟೆಯ ಕೊರವರ ಓಣಿಯ ನಿವಾಸಿ ಮಹೇಂದ್ರ (27) ಎಂಬಾತನು ಸರಕಾರಿ ಯೋಜನೆಗಳಡಿ ವಿತರಣೆಗಾಗಿ ಬಿಡುಗಡೆ ಮಾಡಲಾದ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿತನ ಮನೆಯ ಮುಂದೆ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟಿದ್ದ ತಲಾ 30 ಕೆ.ಜಿ. ತೂಕದ 15 ಚೀಲಗಳಲ್ಲಿದ್ದ ಒಟ್ಟು 450 ಕೆ.ಜಿ. ಅಕ್ಕಿಯನ್ನು ಅಧಿಕಾರಿಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದಾರೆ. ಜಪ್ತಿ ಮಾಡಿದ ಅಕ್ಕಿಯ ಅಂದಾಜು ಮೌಲ್ಯ 12,600 ರೂ. ಎಂದು ತಿಳಿದುಬಂದಿದೆ. ಪರಿಶೀಲನೆಗಾಗಿ ಸುಮಾರು 5 ಕೆ.ಜಿ. ಅಕ್ಕಿಯನ್ನು ಮಾದರಿಯಾಗಿ ಸಂಗ್ರಹಿಸಿ ಸೀಲ್ ಮಾಡಲಾಗಿದೆ.

ಈ ಸಂಬಂಧ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಿಬ್ಬಂದಿಯಾದ, ಮಲ್ಲಪ್ಪ, ಚಂದ್ರಕಾಂತ್, ರಾಮಣ್ಣ ದಾಳಿಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ ರಾಯಚೂರು/ವಾರ್ತಾಭಾರತಿ

ರಾಯಚೂರು ಜಿಲ್ಲಾ ವರದಿಗಾರರು

ಬಾವಸಲಿ ಅವರು 2013ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಬಿ.ಎ ಪದವಿ ಹಾಗೂ 2017ರಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, ಪ್ರಾದೇಶಿಕ ಹಾಗೂ ರಾಜ್ಯಮಟ್ಟದ ಪ್ರತಿಷ್ಠಿತ ಪತ್ರಿಕೆಗಳು, ವೆಬ್‌ಸೈಟ್‌ಗಳು ಮತ್ತು ವೆಬ್ ಪೋರ್ಟಲ್‌ಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ವಾರ್ತಾಭಾರತಿಯಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ