ಎಸ್‌ಐಆರ್ ರದ್ದುಪಡಿಸಲು ಆಗ್ರಹಿಸಿ ಸೆ.9ರಂದು ರಾಯಚೂರಿನಲ್ಲಿ ಪ್ರತಿಭಟನೆ : ಕೆ.ಶಾಂತಪ್ಪ
ರಾಯಚೂರು: ಸ್ವತಂತ್ರ ಸಂವಿಧಾನಿಕ ಸಂಸ್ಥೆಯಾಗಿರುವ ಚುನಾವಣಾ ಆಯೋಗ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಹಾಗೂ ಎಸ್‌ಐಆರ್ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ಸೆ.9ರಂದು ಇಂಡಿಯಾ ಒಕ್ಕೂಟ ಹಾಗೂ ಮತ ಕಾವಲು ಸಮಿತಿಯಿಂದ ರಾಯಚೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಶಾಂತಪ್ಪ ತಿಳಿಸಿದರು.
ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಇಂಡಿಯಾ ಒಕ್ಕೂಟ, ಮತ ಕಾವಲು ಸಮಿತಿ ಹಾಗೂ ಪ್ರಗತಿಪರ ಮತ್ತು ಎಡಪಕ್ಷಗಳನ್ನು ಒಳಗೊಂಡ ಸಮಿತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಒಂದು ಸಮುದಾಯ ಹಾಗೂ ನಿರ್ದಿಷ್ಟ ಜನರನ್ನು ಗುರಿಯಾಗಿಸಿಕೊಂಡು ಕೇಂದ್ರೀಕೃತ ವ್ಯವಸ್ಥೆಯ ಮೂಲಕ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಈ ಕುರಿತು ಈಗಾಗಲೇ ಹಲವು ತನಿಖಾ ವರದಿಗಳಿಂದ ವಿಷಯ ಬಹಿರಂಗವಾಗಿದೆ ಎಂದು ಹೇಳಿದ ಅವರು, ಸ್ವತಂತ್ರ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗ ಪಕ್ಷಪಾತದಿಂದ ನಡೆದುಕೊಳ್ಳುತ್ತಿದೆ. ಮುಸ್ಲಿಮರು, ದಲಿತರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಮಾನ ಅಧಿಕಾರ ಹೊಂದಿರುವ ಆಯುಕ್ತರಲ್ಲಿಯೇ ಅಸಮಾನತೆ ಹಾಗೂ ಭಿನ್ನಮತ ಸ್ಫೋಟಗೊಂಡಿದೆ. ಮತದಾರರ ನಂಬಿಕೆ ಕಳೆದುಕೊಂಡಿರುವ ಆಯುಕ್ತರನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಸೆ.9ರಂದು ನಗರದ ನೇತಾಜಿ ವೃತ್ತದಿಂದ ತೀನ್ ಖಂದಿಲ್ ಮಾರ್ಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಹೋರಾಟ ರ್ಯಾಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮತ ಕಾವಲು ಸಮಿತಿಯ ಮುಖಂಡ ಮಾರೆಪ್ಪ ಹರವಿ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯನ್ನು ಆರಂಭದಿಂದಲೂ ನಾಗರಿಕ ಹಾಗೂ ಪ್ರಗತಿಪರ ಸಂಘಟನೆಗಳು ವಿರೋಧಿಸುತ್ತಿದ್ದರೂ ಕೇಂದ್ರ ಚುನಾವಣಾ ಆಯೋಗ ಯಾವುದೇ ಪೂರ್ವತಯಾರಿ ಇಲ್ಲದೆ ಪ್ರಕ್ರಿಯೆ ಕೈಗೊಂಡಿದೆ ಎಂದು ಆರೋಪಿಸಿದರು.
ಎಸ್‌ಐಆರ್ ಒಂದು ಪಕ್ಷದ ಪರವಾಗಿದೆ. ಅರ್ಹ ಮತದಾರರ ಸಂಖ್ಯೆಯನ್ನು ಕಡಿಮೆ ಮಾಡಿ ಒಂದು ಪಕ್ಷವನ್ನು ಅಧಿಕಾರಕ್ಕೆ ತರಲು ಹುನ್ನಾರ ನಡೆಸಲಾಗುತ್ತಿದೆ. ಈ ಕುರಿತು ಹಲವು ಬಾರಿ ದೂರು ನೀಡಿದರೂ ಚುನಾವಣಾ ಆಯೋಗ ಸ್ಪಂದಿಸದಿರುವುದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಹಿರಿಯ ಸದಸ್ಯ ಜಯಣ್ಣ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮೊಹಮ್ಮದ್ ಶಾಲಂ, ಮತ ಕಾವಲು ಸಮಿತಿಯ ಮುಖಂಡರಾದ ಎಂ.ಆರ್. ಭೇರಿ, ಮುಶ್ತಾಕ್ ಅಹ್ಮದ್, ಜಮಾತೆ ಇಸ್ಲಾಂ ಹಿಂದ್ ಸ್ಥಾನಿಕ ಅಧ್ಯಕ್ಷ ಅಸೀಮುದ್ದೀನ್ ಅಖ್ತರ್, ಖಾಜಾ ಅಸ್ಲಂ ಅಹ್ಮದ್, ಆಂಜನೇಯ ಕುರುಬದೊಡ್ಡಿ, ಎನ್. ಶ್ರೀನಿವಾಸರೆಡ್ಡಿ, ಕೆ.ಜಿ. ವೀರೇಶ, ಜಯವಂತರಾವ್ ಪತಂಗೆ, ನರಸಿಂಹಲು ಮಾಡಗಿರಿ, ಅಮರೇಗೌಡ ಹಂಚಿನಾಳ, ಜಾನ್ ವೆಸ್ಲಿ, ತಾಯಣ್ಣ, ಜಿ. ಶಿವಮೂರ್ತಿ, ಬಸವರಾಜ, ಶರಣಕುಮಾರ ಮುದ್ದಮಗುಡ್ಡಿ ಮತ್ತಿತರರು ಉಪಸ್ಥಿತರಿದ್ದರು.