ರಾಯಚೂರು: ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ರೈತರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ಸರ್ಕಾರ ನೆರವು ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘದ ವತಿಯಿಂದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಆಹೋರಾತ್ರಿ ದರಣಿ ನಡೆಸಲಾಯಿತು.

ಜಿಲ್ಲೆಯಲ್ಲಿ ಭೀಕರ ಬರದಿಂದ ರೈತರು, ಕೃಷಿ ಕಾರ್ಮಿಕರು ತತ್ತರಿಸಿದ್ದಾರೆ. ರಾಜ್ಯ ಸರ್ಕಾರದ ವರದಿ ಹಾಗೂ ಶಿಫಾರಸಿನಂತೆ ಕೇಂದ್ರ ಸರ್ಕಾರದಿಂದ ರೂ.7142 ಕೋಟಿ ಬರ ಪರಿಹಾರ ಬಿಡುಗಡೆ ಮಾಡಿಸಲು ರಾಜ್ಯದ ಎಲ್ಲ ಪಕ್ಷಗಳ ಶಾಸಕರು ದಿಲ್ಲಿಗೆ ತೆರಳಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ಮಾರ್ಗಸೂಚಿ ಹಾಗೂ ಮಾನದಂಡಗಳನ್ನು ಪರಿಷ್ಕರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಬೆಳೆ‌ನಷ್ಟಕ್ಕೆ ರೈತರಿಗೆ ಪ್ರತಿ ಎಕರೆ ಖುಷ್ಕಿ ಭೂಮಿಗೆ 30 ಸಾವಿರ ಹಾಗೂ ನೀರಾವರಿ ಮತ್ತು ತೋಟಗಾರಿಕೆ ಭೂಮಿಗೆ ರೂ.50 ಸಾವಿರ ಪರಿಹಾರ ನೀಡಬೇಕು. ಬಡವರು ಹಾಗೂ ಕೂಲಿಕಾರರಿಗೆ ವರ್ಷಪೂರ್ತಿ ಉಚಿತ ಆಹಾರ ಧಾನ್ಯ ವಿತರಿಸಬೇಕು. ರಾಜ್ಯ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡಿ, ಬ್ಯಾಂಕ್ ಅಧಿಕಾರಿಗಳ ಕಿರುಕುಳ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ರೈತರು, ಬಡವರು, ಕೂಲಿಕಾರರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಮೈಕ್ರೋ ಫೈನಾನ್ಸ್ ಸಾಲಗಳನ್ನು ಮನ್ನಾ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷಪೂರ್ತಿ ಕೆಲಸ ನೀಡಬೇಕು. ವಿ.ಬಿ. ರಾಮಜಿ ಯೋಜನೆಯ ಎಲ್ಲ ನಿಯಮಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ತೀವ್ರ ಬರದಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ಪ್ರತಿ ಗ್ರಾಮ ಪಂಚಾಯಿತಿಗೆ ಉಸ್ತುವಾರಿ ಸಮಿತಿ ರಚಿಸಬೇಕು. ಸಮಿತಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರು, ರೈತರು, ಕಾರ್ಮಿಕರು, ಯುವಕರು ಹಾಗೂ ಮಹಿಳಾ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಳ್ಳಬೇಕು. ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಯುಕೆಎಸ್ ರಾಷ್ಟ್ರೀಯ ಉಪಾಧ್ಯಕ್ಷ ಡಿ.ಹೆಚ್. ಪೂಜಾರ, ಜಿಲ್ಲಾಧ್ಯಕ್ಷ ಅಶೋಕ ನೀಲಗಲ್, ರಾಜ್ಯ ಉಪಾಧ್ಯಕ್ಷ ಶೇಖರಯ್ಯ ಗೆಜ್ಜಲಗಟ್ಟ, ರಮೇಶ್ ಪಾಟೀಲ್ ಬೇರಗಿ, ಚಿಟ್ಟಿಬಾಬು, ಬಿ.ಎನ್. ಯರದಿಹಾಳ, ಹುಲಿಗಪ್ಪ ಶಿರವಾರ, ದುರುಗಪ್ಪ ಗಲಗ್, ಗೌಸ್‌ಖಾನ್ ಗುಂತಗೋಳ್, ಶಿವರಾಜ್ ಕೊನ್ನಾಪುರ ಪೇಟೆ, ವೀರೇಶ ನಾಯಕ, ಯಲ್ಲಪ್ಪ ರಾಯದುರ್ಗ, ನಾಗರಾಜ ಸಿರವಾರ, ಹನುಮಂತ ಸಿರವಾರ ಸೇರಿದಂತೆ ವಿವಿಧ ತಾಲೂಕುಗಳ ರೈತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor