Raichur | ರಂಗಭೂಮಿಯಲ್ಲಿ ಪಂಚತಂತ್ರದ ಆಶಯಗಳ ಮರುಸೃಷ್ಟಿ ಸಂತಸದ ವಿಚಾರ: ಡಾ.ನಾಗವೇಣಿ ಪಾಟೀಲ್
ರಾಯಚೂರು: ಪಂಚತಂತ್ರ ಎಂದಾಕ್ಷಣ ನಮ್ಮ ನೆನಪಿಗೆ ಬರುವುದು ನೀತಿ, ಜೀವನ ಮೌಲ್ಯ ಹಾಗೂ ಮಾನವೀಯ ಸಂಬಂಧಗಳನ್ನು ತಿಳಿಸಿಕೊಡುವ ಕಥೆಗಳು. ಅಂತಹ ಪಂಚತಂತ್ರದ ಕಥೆಗಳ ಆಶಯವನ್ನು ಆಧರಿಸಿ ರಂಗಭೂಮಿಯಲ್ಲಿ ರಂಗಪ್ರಯೋಗ ನಡೆಸುತ್ತಿರುವುದು ಸಂತಸದ ವಿಚಾರ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ನಾಗವೇಣಿ ಎಸ್. ಪಾಟೀಲ್ ಹೇಳಿದರು.
ನಗರದಲ್ಲಿ ಸೋಮವಾರ ಸಂಜೆ 6.30ಕ್ಕೆ ರಂಗ ಕನಸು ರಂಗ ಕೇಂದ್ರ (ರಿ.), ಮಂಡಲಗೇರಾ ಆಯೋಜಿಸಿದ್ದ ಹಾಗೂ ನಿರ್ದಿಗಂತ ಪ್ರಸ್ತುತಪಡಿಸಿದ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂಚತಂತ್ರದ ಕಥೆಗಳು ಕೇವಲ ಮನರಂಜನೆಗೆ ಸೀಮಿತವಾಗಿರದೆ, ಬದುಕಿನ ಮೌಲ್ಯಗಳು, ಬುದ್ಧಿವಂತಿಕೆ, ನೀತಿ, ಸ್ನೇಹ, ಸಂಬಂಧಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ಮೌಲ್ಯಯುತ ಸಂದೇಶವನ್ನು ನೀಡುತ್ತವೆ. ಹಿಂದಿನ ಕಾಲದಲ್ಲಿ ಮಕ್ಕಳು ಇಂತಹ ಕಥೆಗಳನ್ನು ಕೇಳುತ್ತಾ, ಓದುತ್ತಾ ಬೆಳೆದಿದ್ದರು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಹುತೇಕ ಎಲ್ಲರೂ ಅಂತರ್ಜಾಲದ ಜಗತ್ತಿನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ವಿಷಾದಿಸಿದರು.
ಇಂದು ನಾವು ಭೂಮಿಯ ಮೇಲೆ ಬದುಕುತ್ತಿದ್ದರೂ ಬಹುತೇಕ ಸಮಯವನ್ನು ಅಂತರ್ಜಾಲದ ಜಗತ್ತಿನಲ್ಲಿ ಕಳೆಯುತ್ತಿದ್ದೇವೆ. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ನಮ್ಮ ನೆಲದ ಸಂಸ್ಕೃತಿ, ಕಥೆಗಳು ಹಾಗೂ ಜೀವನ ಮೌಲ್ಯಗಳನ್ನು ರಂಗಭೂಮಿಯ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಶ್ಲಾಘನೀಯ. ಲಕ್ಷ್ಮಣ ಮಂಡಲಗೇರಾ ನೇತೃತ್ವದ ರಂಗ ಕನಸು ರಂಗ ಕೇಂದ್ರವು ಪಂಚತಂತ್ರದಂತಹ ಸಾರ್ವಕಾಲಿಕ ಕಥೆಗಳನ್ನು ಸಮಕಾಲೀನ ರಂಗಭಾಷೆಯಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.
ರಂಗಭೂಮಿ ಸಮಾಜದ ಪ್ರತಿಬಿಂಬವಾಗಿದ್ದು, ಜನರಲ್ಲಿ ಚಿಂತನೆ ಮೂಡಿಸುವ ಶಕ್ತಿಯನ್ನು ಹೊಂದಿದೆ. ಕಲೆ ಮತ್ತು ಸಾಹಿತ್ಯದ ಮೂಲಕ ಸಮಾಜದ ಸಮಸ್ಯೆಗಳು, ಜೀವನ ಮೌಲ್ಯಗಳು ಹಾಗೂ ಮಾನವೀಯ ಸಂದೇಶಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬಹುದು. ಈ ನಿಟ್ಟಿನಲ್ಲಿ ರಂಗ ಕನಸು ರಂಗ ಕೇಂದ್ರ, ಮಂಡಲಗೇರಾ ಹಾಗೂ ನಿರ್ದಿಗಂತ ತಂಡದ ಪ್ರಯತ್ನ ಅಭಿನಂದನಾರ್ಹ ಎಂದು ಹೇಳಿದರು.
ನಂತರ ಮಾತನಾಡಿದ ಪ್ರವೀಣ ರೆಡ್ಡಿ, ಇತ್ತೀಚೆಗೆ ನಮ್ಮನ್ನಗಲಿದ ರಂಗ ದಿಗ್ಗಜ ಚಿದಂಬರ ರಾವ್ ಜಂಬೆ ಅವರನ್ನು ಸ್ಮರಿಸಿ ಈ ನಾಟಕ ಪ್ರದರ್ಶನ ಆಯೋಜಿಸಿರುವುದಕ್ಕಾಗಿ ಲಕ್ಷ್ಮಣ ಮಂಡಲಗೇರಾ ಅವರಿಗೆ ಅಭಿನಂದನೆ ಸಲ್ಲಿಸಿದರು. ಜಂಬೆ ಅವರು ಭಾರತೀಯ ರಂಗಭೂಮಿಯ ಪ್ರಸಿದ್ಧ ರಂಗ ನಿರ್ದೇಶಕರಾಗಿದ್ದರು. ಕರ್ನಾಟಕದಲ್ಲಿರುವ ಹಲವು ರಂಗಶಾಲೆಗಳಲ್ಲಿ ಕೆಲಸ ಮಾಡಿದ್ದ ಅವರು ನಾಡಿನಾದ್ಯಂತ ಶಿಷ್ಯ ಬಳಗವನ್ನು ಸೃಷ್ಟಿಸಿದ್ದರು. ‘ನಮ್ಮೊಳಗೊಬ್ಬ ಗಾಂಧಿ’, ‘ಪಾರ್ಟಿ’ ಹಾಗೂ ಉಮಾಶ್ರೀ ಅಭಿನಯದ ‘ಶರ್ಮಿಷ್ಠೆ’ ನಾಟಕಗಳನ್ನು ನಿರ್ದೇಶಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಕಾಂಗ್ರೆಸ್ ಮುಖಂಡ ರವಿ ಪಾಟೀಲ್, ಚಂದ್ರಶೇಖರ ಪಾಟೀಲ ಮಿರ್ಜಾಪುರ, ಹಿರಿಯ ರಂಗಭೂಮಿ ಕಲಾವಿದರಾದ ವಿ.ಎನ್. ಅಕ್ಕಿ, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ವಿಜಯಗೌಡ ವಡ್ಲಂದೊಡ್ಡಿ, ಗ್ರಾಮೀಣ ಕಾಂಗ್ರೆಸ್ ಮುಖಂಡ ಚಂದ್ರಶೇಖರ ಮುರಾನ್‌ಪುರ, ಸರ್ಕಾರಿ ಎಸ್‌ಸಿ-ಎಸ್‌ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಸೇರಿದಂತೆ ರಂಗಭೂಮಿ ಹಾಗೂ ಕಲಾಕ್ಷೇತ್ರದ ಗಣ್ಯರು, ಕಲಾವಿದರು, ಸಂಘಟಕರು ಮತ್ತು ರಂಗಾಸಕ್ತರು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಗಮನ ಸೆಳೆಯಿತು.