Raichur | ಅಂಗನವಾಡಿ ನೌಕರರ ಬೇಡಿಕೆ ಈಡೇರಿಸುವಲ್ಲಿ ಸರ್ಕಾರಗಳು ವಿಫಲ : ಶಾಂತ ಘಂಟಿ
ರಾಯಚೂರು: ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಐಸಿಡಿಎಸ್ ಯೋಜನೆಗೆ ನೀಡಲಾಗುತ್ತಿರುವ ಅನುದಾನವನ್ನು ಕಡಿತಗೊಳಿಸುವ ಮೂಲಕ ಯೋಜನೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯಾಧ್ಯಕ್ಷೆ ಶಾಂತ ಘಂಟಿ ಆರೋಪಿಸಿದರು.
ನಗರದ ಕನ್ನಡ ಭವನದಲ್ಲಿ ಮಂಗಳವಾರ ಅಂಗನವಾಡಿ ನೌಕರರ ಸಂಘ (ಸಿಐಟಿಯು) ರಾಯಚೂರು ತಾಲೂಕು ಘಟಕದ 8ನೇ ಸಮ್ಮೇಳನವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗನವಾಡಿ ನೌಕರರಿಗೆ ಗೌರವಧನ ಹೆಚ್ಚಳ ಮಾಡದೆ, ಅವರ ಮೇಲೆ ಅನ್ಯ ಇಲಾಖೆಗಳ ಕೆಲಸಗಳ ಹೊರೆಯನ್ನು ಹೆಚ್ಚಿಸಲಾಗುತ್ತಿದೆ. ಕಡಿಮೆ ಗೌರವಧನದಲ್ಲಿ ಹೆಚ್ಚಿನ ಕೆಲಸ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಜಾರಿಗೊಳಿಸುವುದಾಗಿ ಸರ್ಕಾರ ಹೇಳುತ್ತಿದೆ. ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲಿಯೂ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಅಂಗನವಾಡಿ ಕೇಂದ್ರಗಳನ್ನು ಕ್ರಮೇಣ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು, ಗೌರವಧನ ಹೆಚ್ಚಿಸಬೇಕು ಹಾಗೂ ಐಸಿಡಿಎಸ್ ಯೋಜನೆಯನ್ನು ಬಲಪಡಿಸಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆಯಾಗಿದೆ. ನೌಕರರ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ಮುಂಬರುವ ಫೆಬ್ರವರಿಯಲ್ಲಿ ಮಂಡನೆಯಾಗಲಿರುವ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಅಂಗನವಾಡಿ ನೌಕರರಿಗೆ ವೇತನ ಹೆಚ್ಚಳ ಮಾಡದಿದ್ದರೆ, ಬಜೆಟ್ ಮಂಡನೆಯಾದ ಮರುದಿನದಿಂದಲೇ ಸಂಸದರು ಹಾಗೂ ಶಾಸಕರ ಮನೆಗಳ ಮುಂದೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಈ ಹೋರಾಟದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಐಸಿಡಿಎಸ್ ಯೋಜನೆಯನ್ನು ಉಳಿಸಿ, ಅಂಗನವಾಡಿ ನೌಕರರ ಉದ್ಯೋಗ ಮತ್ತು ಹಕ್ಕುಗಳನ್ನು ರಕ್ಷಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಎಚ್. ಪದ್ಮಾ ವಹಿಸಿದ್ದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಡಿ.ಎಸ್. ಶರಣಬಸವ, ಕರ್ನಾಟಕ ಪ್ರಾಂತ ರೈತ ಸಂಘದ ಕೆ.ಜಿ. ವೀರೇಶ್, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಖಜಾಂಚಿ ವರಲಕ್ಷ್ಮೀ, ಎಸ್. ಗಂಗಮ್ಮ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮ್ಮೇಳನಕ್ಕೂ ಮುನ್ನ ಸಂಘಟನೆಯ ಧ್ವಜಾರೋಹಣವನ್ನು ಎಚ್. ಪದ್ಮಾ ನೆರವೇರಿಸಿದರು. ಬಳಿಕ ವಿವಿಧ ಬೇಡಿಕೆಗಳು, ಸಂಘಟನೆಯ ಮುಂದಿನ ಹೋರಾಟಗಳು ಹಾಗೂ ಅಂಗನವಾಡಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಯಿತು.