Raichur | ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ : ಅಮಾಯಕರ ಹೆಸರನ್ನು ಎಫ್‌ಐಆರ್‌ನಿಂದ ಕೈಬಿಡಲು ವಾಲ್ಮೀಕಿ ನಾಯಕ ಸಂಘ ಆಗ್ರಹ
ರಾಯಚೂರು: ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಅಮಾಯಕ ವ್ಯಕ್ತಿಗಳ ಹೆಸರನ್ನು ಆರೋಪಿಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಪಿಸಿ, ಅವರ ಹೆಸರನ್ನು ಪ್ರಕರಣದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರಣಾಂಗ್ಷು ಗಿರಿ ಅವರಿಗೆ ಮನವಿ ಸಲ್ಲಿಸಿದರು.
ಸುಂಕೇಶ್ವರಹಾಳ ಗ್ರಾಮದಲ್ಲಿ ನಡೆದ ಯುವಕನ ಹತ್ಯೆ ಪ್ರಕರಣವನ್ನು ವಾಲ್ಮೀಕಿ ಸಮುದಾಯ ತೀವ್ರವಾಗಿ ಖಂಡಿಸಿದ್ದು, ಮೃತರ ಕುಟುಂಬದೊಂದಿಗೆ ಸಮಾಜ ನಿಲ್ಲಲಿದೆ. ಪ್ರಕರಣದಲ್ಲಿ ನಿಜವಾದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಸಮುದಾಯದ ಯಾವುದೇ ವಿರೋಧವಿಲ್ಲ. ಆದರೆ, ಪ್ರಮುಖ ಆರೋಪಿತರ ಬಂಧನದ ಬಳಿಕ ಪ್ರಕರಣಕ್ಕೆ ಸಂಬಂಧವಿಲ್ಲದ ಐವರು ಅಮಾಯಕರ ಹೆಸರನ್ನು ಆರೋಪಿಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಪಿಸಿದರು.
ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಎಂಟನೇ ಆರೋಪಿಯಾಗಿ ನಮೂದಾಗಿರುವ ಭೀಮರಾಯ ಹದ್ದಿನಾಳ ಅವರಿಗೆ ಪ್ರಕರಣದೊಂದಿಗೆ ಯಾವುದೇ ಸಂಬಂಧ ಇಲ್ಲ. ಅವರು ಹಲವು ವರ್ಷಗಳಿಂದ ರಾಯಚೂರಿನಲ್ಲಿ ವಾಸವಾಗಿದ್ದು, ಕಳೆದ 35 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಸಮಾಜದಲ್ಲಿ ಗೌರವ ಗಳಿಸಿದ್ದಾರೆ. ಅವರ ವಿರುದ್ಧ ದುರುದ್ದೇಶದಿಂದ ಹೆಸರು ಸೇರಿಸಲಾಗಿದೆ ಎಂದು ದೂರಿದರು.
ಅಗತ್ಯವಿದ್ದರೆ ಸಿಡಿಆರ್, ಲೈವ್ ಲೊಕೇಷನ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಬೇಕು. ಇದೇ ಪ್ರಕರಣದಲ್ಲಿ ಇನ್ನೂ ಹಲವು ನಿರಪರಾಧಿಗಳ ಹೆಸರನ್ನೂ ಸೇರಿಸಲಾಗಿದ್ದು, ಇದರಿಂದ ಅವರ ದೈನಂದಿನ ಜೀವನಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಯಾರೋ ಮಾಡಿದ ತಪ್ಪಿಗೆ ಅಮಾಯಕರು ಶಿಕ್ಷೆಗೆ ಒಳಗಾಗಬಾರದು ಎಂಬುದು ಕಾನೂನಿನ ಮೂಲ ತತ್ವವಾಗಿದೆ. ಹೀಗಾಗಿ ನಿಜವಾದ ಆರೋಪಿಗಳನ್ನು ಹೊರತುಪಡಿಸಿ ದುರುದ್ದೇಶದಿಂದ ಸೇರಿಸಲಾದ ಎಲ್ಲ ಅಮಾಯಕರ ಹೆಸರನ್ನು ಎಫ್‌ಐಆರ್‌ನಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ಇಲ್ಲದಿದ್ದರೆ ಈ ವಿಚಾರವು ಸಮುದಾಯಗಳ ನಡುವೆ ಅನಗತ್ಯ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇರುವುದರಿಂದ, ಪೊಲೀಸರು ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ನಿರಪರಾಧಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್. ರಘುವೀರ ನಾಯಕ, ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ನಾಯಕ, ರಾಮುನಾಯಕ, ನಾರಾಯಣ ನಾಯಕ, ತಾಯಪ್ಪ ನಾಯಕ, ರಂಗಸ್ವಾಮಿ ನಾಯಕ, ಗೋಪಲ ನಾಯಕ ಉಪಸ್ಥಿತರಿದ್ದರು.