Raichur | ಭೂಮಾನಂದ ಕೊಲೆ ಆರೋಪಿಗಳಿಗೆ ಮರಣದಂಡನೆ ಕೋರಿ ಚಾರ್ಜ್‌ಶೀಟ್ ಸಲ್ಲಿಸಿ: ಬಿಎಸ್‌ಪಿ ಆಗ್ರಹ
ರಾಯಚೂರು: ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದಲ್ಲಿ ನಡೆದ ಬಿಎಸ್‌ಪಿ ಜಿಲ್ಲಾ ಉಸ್ತುವಾರಿ ಭೂಮಾನಂದ ಹದ್ದಿನಾಳ ಅವರ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಮರಣದಂಡನೆ ವಿಧಿಸುವಂತೆ ಚಾರ್ಜ್‌ಶೀಟ್ ಸಲ್ಲಿಸಬೇಕು. ಪ್ರಕರಣದಲ್ಲಿ ಗಬ್ಬೂರು ಪೊಲೀಸರ ನಿರ್ಲಕ್ಷ್ಯದ ಕುರಿತು ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆಗ್ರಹಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮಾನಂದ ಹದ್ದಿನಾಳ ಅವರ ಹತ್ಯೆಯ ಹಿಂದೆ ಎಸ್ಸಿ–ಎಸ್ಟಿ ಸಮುದಾಯಗಳ ನಡುವಿನ ಸಂಘರ್ಷದ ಹಿನ್ನೆಲೆ ಇರುವುದಾಗಿ ಆರೋಪಿಸಿದರು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ನಡುವೆ ಸಂಘರ್ಷ ಹೆಚ್ಚುತ್ತಿರುವುದನ್ನು ತಡೆಯಲು ಸಾಮರಸ್ಯ ನಿರ್ಮಾಣದ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಂಘರ್ಷ ಸಂಭವಿಸುತ್ತಿರುವ ಗ್ರಾಮಗಳನ್ನು ಗುರುತಿಸಿ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಜಾಗೃತಿ ಮತ್ತು ಸೌಹಾರ್ದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಮುದಾಯಗಳ ಮುಖಂಡರು ಹಾಗೂ ಸ್ವಾಮೀಜಿಗಳ ಸಹಭಾಗಿತ್ವದಲ್ಲಿ ಕಾನೂನು ಅರಿವು ಮತ್ತು ಸಾಮರಸ್ಯ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಳೆದ ಎರಡು ವರ್ಷಗಳಲ್ಲಿ ಪ್ರಸಾದ್ ಮದ್ಲಾಪೂರು ಹಾಗೂ ಭೂಮಾನಂದ ಹದ್ದಿನಾಳ ಅವರ ಹತ್ಯೆಗಳು ಜಿಲ್ಲೆಯ ಎಸ್ಸಿ–ಎಸ್ಟಿ ಸಮುದಾಯಗಳ ನಡುವಿನ ಉದ್ವಿಗ್ನತೆಗೆ ಸಾಕ್ಷಿಯಾಗಿವೆ ಎಂದು ಅವರು ಹೇಳಿದರು.
ಭೂಮಾನಂದ ಹದ್ದಿನಾಳ ಅವರ ಮೇಲೆ ಈ ಹಿಂದೆ ಹಲ್ಲೆ ನಡೆದು ಜೀವ ಬೆದರಿಕೆ ಇದ್ದರೂ ಸ್ಥಳೀಯ ಪೊಲೀಸ್ ಠಾಣೆ ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ ಹಾಗೂ ಅಗತ್ಯ ಭದ್ರತೆ ಒದಗಿಸಿಲ್ಲ. ಇದೇ ಕಾರಣದಿಂದ ಹತ್ಯೆ ಸಂಭವಿಸಿದ್ದು, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಗಬ್ಬೂರು ಪೊಲೀಸ್ ಠಾಣೆಯಲ್ಲಿ 10ರಿಂದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು. ಮೃತ ಭೂಮಾನಂದ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, 5 ಎಕರೆ ಜಮೀನು ಹಾಗೂ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲ ಹನುಮಂತಪ್ಪ, ಬಸವರಾಜ, ಬುಡ್ಡಪ್ಪ, ಚಂದ್ರಶೇಖರ, ಎಂ.ಆರ್. ಬೇರಿ ಹಾಗೂ ಜೈಭೀಮ್ ವಲ್ಲಭ ಉಪಸ್ಥಿತರಿದ್ದರು.