Raichur | ಪರಿಸರ ಸ್ನೇಹಿಯಾಗಿ ಗೌರಿ–ಗಣೇಶ ಹಬ್ಬ ಆಚರಿಸಿ: ಡಿಸಿ ಪೂವಿತಾ ಎಸ್. ಕರೆ
ಗಣೇಶ ಹಬ್ಬದ ಶಾಂತಿ ಪಾಲನಾ ಸಮಿತಿ ಸಭೆ
ರಾಯಚೂರು : ಜಿಲ್ಲೆಯಲ್ಲಿ ಗೌರಿ–ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದ ಮತ್ತು ಪರಿಸರ ಸ್ನೇಹಿಯಾಗಿ ಆಚರಿಸಿ ರಾಜ್ಯಕ್ಕೆ ಮಾದರಿಯಾಗುವಂತೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಕರೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಗೌರಿ–ಗಣೇಶ ಹಬ್ಬದ ಅಂಗವಾಗಿ ನಡೆದ ಶಾಂತಿ ಪಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಒಪಿ ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡದೆ, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ರಾಯಚೂರು ಜಿಲ್ಲೆ ಭಾವೈಕ್ಯತೆಗೆ ಹೆಸರಾಗಿದ್ದು, ಎಲ್ಲ ಸಮುದಾಯದವರು ಪರಸ್ಪರ ಸಹೋದರತ್ವದಿಂದ ಹಬ್ಬವನ್ನು ಆಚರಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬಳಸಬೇಕು ಹಾಗೂ ರಸ್ತೆ ಮಧ್ಯೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸದೆ, ಪೂರ್ವಾನುಮತಿ ಪಡೆದು ಮಾತ್ರ ಪ್ರತಿಷ್ಠಾಪನೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾತನಾಡಿ, ನಿಗದಿತ ಎತ್ತರದ ಗಣೇಶ ಮೂರ್ತಿಗಳನ್ನಷ್ಟೇ ಪ್ರತಿಷ್ಠಾಪಿಸಬೇಕು. ಪ್ರತಿ ಗಣೇಶ ಮಂಡಳಿಯಲ್ಲಿ ಸ್ವಯಂಸೇವಕರನ್ನು ನಿಯೋಜಿಸಬೇಕು. ಅನುಮತಿ ಇಲ್ಲದೆ ಪೋಸ್ಟರ್ ಹಾಗೂ ಬ್ಯಾನರ್ ಅಳವಡಿಸಬಾರದು. ಡಿಜೆ ಧ್ವನಿಯನ್ನು ನಿಯಂತ್ರಣದಲ್ಲಿಡಬೇಕು ಹಾಗೂ ರಾತ್ರಿ 10 ಗಂಟೆಯೊಳಗೆ ವಿಸರ್ಜನೆ ಪೂರ್ಣಗೊಳಿಸಬೇಕು. ಪ್ರತಿ ಮಂಡಳಿಯಲ್ಲಿ ಪ್ರಾಥಮಿಕ ಚಿಕಿತ್ಸಾ ಸಾಮಗ್ರಿ ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ, ಪರಿಸರಕ್ಕೆ ಹಾನಿಯಾಗದಂತೆ ಗಣೇಶೋತ್ಸವ ಆಚರಿಸಬೇಕು. ಪಿಒಪಿ ಮೂರ್ತಿಗಳು ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧವಾಗಿರುವುದರಿಂದ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರಭಾರಿ ಪರಿಸರ ಸಂರಕ್ಷಣಾಧಿಕಾರಿ ಗಿರೀಶ್ ಮಾತನಾಡಿ, ಪಿಒಪಿ ಹಾಗೂ ವಿಷಕಾರಿ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಗಳಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿದ್ದು, ಜಲಚರಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಇಂತಹ ಮೂರ್ತಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಹಾಗೂ ಸಾರ್ವಜನಿಕ ಪ್ರದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಆಗ್ನಿಶಾಮಕ ದಳದ ಅಧಿಕಾರಿ ರವೀಂದ್ರ ಘಟಿಗಿ ಮಾತನಾಡಿ, ಗಣೇಶ ಮಂಡಳಿಗಳು ಅಗ್ನಿ ಅವಘಡಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ಮಹಾನಗರ ಪಾಲಿಕೆಯ ವಲಯ-1 ಆಯುಕ್ತ ಮಲ್ಲಿಕಾರ್ಜುನ ಮಾತನಾಡಿ, ವ್ಯಾಪಾರಿಗಳು ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡಬಾರದು. ಈ ಬಾರಿ ರಾಯಚೂರಿನಲ್ಲಿ ಸಂಪೂರ್ಣವಾಗಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್. ಮಾತನಾಡಿ, ಗಣೇಶ ಮಂಡಳಿಗಳು ಶುಚಿಯಾದ ಕುಡಿಯುವ ನೀರು ಹಾಗೂ ಸುರಕ್ಷಿತ ಪ್ರಸಾದ ವಿತರಿಸಬೇಕು. ಸಾಧ್ಯವಾದಷ್ಟು ಒಣ ಪ್ರಸಾದ ವಿತರಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು, ಸಂಘ–ಸಂಸ್ಥೆಗಳ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿ ಸಲಹೆ–ಸೂಚನೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ರಾಯಚೂರು ತಹಶಿಲ್ದಾರ್ ಸುರೇಶ ವರ್ಮಾ, ರಾಯಚೂರು ಡಿವೈಎಸ್ಪಿ ಶಾಂತಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ನಂದಿತಾ ಎಮ್.ಎನ್., ಸಿಪಿಐ ಉಮೇಶ್ ಕಾಂಬಳೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪುಷ್ಪಲತಾ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಸುರೇಶ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಮಾಜದ ಮುಖಂಡರು, ಗಜಾನನ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.