×
Ad

ರಾಯಚೂರು | ಸಿಂಧನೂರಿನ ಬೀದಿ ಬದಿ ವ್ಯಾಪಾರಸ್ಥರಿಗೆ ಜೀವನೋಪಾಯ ನೀಡಲು ಮನವಿ

Update: 2025-01-24 21:14 IST

ರಾಯಚೂರು : ತೆರವು ಕಾರ್ಯಾಚರಣೆಯಿಂದ ಜೀವನೋಪಾಯ ಕಳೆದುಕೊಂಡು ಸಂತ್ರಸ್ತರಾಗಿರುವ ಸಿಂಧನೂರಿನ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರಿಗೆ ಜೀವನೋಪಾಯ ರಕ್ಷಣೆ ಒದಗಿಸುವುದು ಹಾಗೂ ಪೊಲೀಸ್ ಕಿರುಕುಳ ನಿಲ್ಲಿಸಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಲಾಯಿತು.

ಸಿಂಧನೂರು ನಗರದ ರಾಯಚೂರು, ಕುಷ್ಟಗಿ ಹಾಗೂ ಗಂಗಾವತಿ ಮಾರ್ಗದ ರಸ್ತೆ ಸೇರಿದಂತೆ ಇನ್ನಿತರೆ ಸರಕಾರಿ ಸ್ಥಳಗಳಲ್ಲಿ ಸಣ್ಣಪುಟ್ಟ ಅಂಗಡಿಗಳನ್ನಿಟ್ಟುಕೊಂಡು ಹಲವು ವರ್ಷಗಳಿಂದ ಬೀದಿ ಬದಿ ವ್ಯಾಪಾರ ನಡೆಸುತ್ತಿದ್ದ ಸಾವಿರಾರು ವ್ಯಾಪಾರಸ್ಥರನ್ನು ಡಿ.25, 2024ರಂದು ಏಕಾಏಕಿ ತೆರವುಗೊಳಿಸಿದ್ದರಿಂದ ಅವರನ್ನು ಅವಲಂಬಿಸಿದ ಅಂದಾಜು 10 ಸಾವಿರಕ್ಕೂ ಹೆಚ್ಚು ಕುಟುಂಬಗಳು ಜೀವನೋಪಾಯ ಕಳೆದುಕೊಂಡು ಕಂಗಾಲಾಗಿವೆ. ಇದರಿಂದ ನಗರದಲ್ಲಿ ಸಾಮಾಜಿಕ-ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಅಷ್ಟು ಕುಟುಂಬಗಳ ಮೇಲೆ ಪರೋಕ್ಷವಾಗಿ ತುರ್ತು ಪರಿಸ್ಥಿತಿ ಹೇರಿದಂತಾಗಿದೆ.

ನಗರದ ಪ್ರಮುಖ ರಸ್ತೆ ಬದಿಗಳಲ್ಲಿನ ಬೀದಿ ವ್ಯಾಪಾರಿಗಳು ಮುನಿಸಿಪಲ್, ಪಿಡಬ್ಲ್ಯುಡಿ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಅಧಿಕಾರಿಗಳಿಂದ ಕಿರುಕುಳದ ನಡುವೆಯೂ ಬಡವರಿಗೆ, ಮಧ್ಯಮ ವರ್ಗದವರಿಗೆ ಉತ್ತಮ ಸರಕು-ಸೇವೆಗಳನ್ನು ಒದಗಿಸುತ್ತಾ ಬಂದಿದ್ದರೂ, ಇತ್ತೀಚೆಗೆ ಜಿಲ್ಲಾ, ತಾಲೂಕು ಆಡಳಿತ ಹಾಗೂ ನಗರಸಭೆಯಿಂದ ತೆರವು ಕಾರ್ಯಾಚರಣೆ ನಡೆಸಿ, ಏಕಾಏಕಿ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಿರುವುದು, ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಹಾಗು ಬೀದಿ ವ್ಯಾಪಾರದ ನಿಯಂತ್ರಣ ಕಾಯ್ದೆ (2014) ಯನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ. ಯಾವುದೇ ಕಾರಣಕ್ಕೂ ಪೊಲೀಸ್ ಕಿರುಕುಳ ನೀಡಬಾರದು ಎಂದು ಸಂಚಾಲಕರಾದ ನಾಗರಾಜ ಪೂಜಾರ್ ಆಗ್ರಹಿಸಿದರು.

ಬೀದಿ ವ್ಯಾಪಾರಿಗಳಿಗೆ ಅವರ ಹಕ್ಕಾದ ಬೀದಿ ವ್ಯಾಪಾರ ಮಾಡಲು ಅಧಿಕಾರಿಗಳು ಅಡ್ಡಿಯಾಗಿರುವುದು ಕಾಯ್ದೆಯ ವಿರೋಧಿ ಕ್ರಮವಾಗಿದೆ. ಇಲ್ಲಿನ ಬೀದಿ ವ್ಯಾಪಾರಿಗಳಿಗೆ ಸರಕಾರವೇ ಗುರುತಿನ ಚೀಟಿ ನೀಡಿ, ಅವರಿಂದ ಲಕ್ಷಾಂತರ ರೂ. ತೆರಿಗೆ ವಸೂಲಿ ಮಾಡಿ, ಇಂದು ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡದಂತೆ ಅಡ್ಡಿಪಡಿಸುತ್ತಿರುವುದು ಸರಿಯಾದ ಕ್ರಮವಲ್ಲ.

ಬೀದಿ ವ್ಯಾಪಾರಿಗಳನ್ನು ಸ್ಥಳಾಂತರಿಸಲು ನೋಟಿಸ್ ನೀಡುವುದು ಸಿಂಧನೂರು ಸಿಎಂಸಿ ಹಾಗೂ ಪಟ್ಟಣ ವ್ಯಾಪಾರ ಸಮಿತಿಗೆ ಮಾತ್ರ ಅಧಿಕಾರವಿದೆ. ಬೀದಿ ವ್ಯಾಪಾರಿಗಳ ಕಾನೂನಿನ ಕಲಂ 18ರ ಪ್ರಕಾರ ಆಯಾ ನಗರಸಭೆಯಲ್ಲಿನ ಪಟ್ಟಣ ವ್ಯಾಪಾರ ಸಮಿತಿ ಈ ಕುರಿತು ಕ್ರಮ ತೆಗೆದುಕೊಳ್ಳಬಹುದೇ ಹೊರತು, ಬೇರೆ ಯಾವ ಅಧಿಕಾರಿಗಳೂ ಅವರನ್ನು ಸ್ಥಳಾಂತರಿಸುವಂತಿಲ್ಲ. ಹಾಗಾಗಿ ಲೋಕೋಪಯೋಗಿ ಇಲಾಖೆಯಿಂದ ಬೀದಿ ವ್ಯಾಪಾರಸ್ಥರಿಗೆ ನೀಡಿರುವ ನೋಟಿಸ್ ಕಾನೂನು ಬಾಹಿರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಾಗರಾಜ ಪೂಜಾರ್, ಟಿ. ಹುಸೇನಸಾಬ್‌, ಮಂಜುನಾಥ ಗಾಂಧಿನಗರ, ವಾಸಿಮ್, ಬಸವರಾಜ ಬಾದರ್ಲಿ, ಶಾಮೀದ ನೂರಾರು ಸಂಖ್ಯೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News