ರಾಯಚೂರು | ದೇವಸ್ಥಾನದ ಹುಂಡಿ ಹಣ ಕಳವು: ಪ್ರಕರಣ ದಾಖಲು
Update: 2025-12-18 09:40 IST
ರಾಯಚೂರು: ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಲ್ಕರಾಗಿ ಗ್ರಾಮದ ಉಟಕನೂರು ಮರಿ ಬಸವಲಿಂಗ ಸ್ವಾಮಿಗಳ ದೇವಸ್ಥಾನದಲ್ಲಿ ಕಳ್ಳರು ಹುಂಡಿ ಹಣ ಕದ್ದೊಯ್ದ ಘಟನೆ ಬುಧವಾರ ಜರುಗಿದೆ.
ಕಾಣಿಕೆ ಪೆಟ್ಟಿಗೆಯನ್ನು ಹೊತ್ತೊಯ್ದ ಕಳ್ಳರು, ಬೀಗ ಮುರಿದು 20,000ಕ್ಕೂ ಅಧಿಕ ಹಣ ಕದ್ದು ಪೆಟ್ಟಿಗೆಯನ್ನು ಸ್ಮಶಾನದಲ್ಲಿ ಬಿಸಾಡಿ ಹೋಗಿದ್ದಾರೆ. ಗ್ರಾಮಸ್ಥರು ಬೆಳಗ್ಗೆ ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು. ಸ್ಥಳಕ್ಕೆ ಕವಿತಾಳ ಪಿಎಸ್‌ಐ ಗುರುಚಂದ್ರ ಯಾದವ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಆರು ತಿಂಗಳ ಹಿಂದೆ ಹುಂಡಿ ಇಟ್ಟಿದ್ದು, ಹಣ ಎಣಿಕೆ ಮಾಡಿರಲಿಲ್ಲ ಚಳಿಯ ವಾತಾವರಣ ಇರುವ ಹಿನ್ನೆಲೆ ಜನರು ಸ್ವಲ್ಪ ತಡವಾಗಿ ಓಡಾಡುವುದರಿಂದ ನಸುಕಿನ ಜಾವದಲ್ಲಿ ಕಳ್ಳರು ಈ ಕೆಲಸವನ್ನು ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.