ರಾಯಚೂರು: ನಗರದ ವಾರ್ಡ್ ನಂ.13ರ ಜಹೀರಾಬಾದ್ ಬಡಾವಣೆಯಲ್ಲಿ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಟ್ರ್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟ ಇಬ್ಬರು ಅಪ್ರಾಪ್ತ ಮಕ್ಕಳು ಹಾಗೂ ಗಂಭೀರವಾಗಿ ಗಾಯಗೊಂಡಿರುವ ಮಗುವಿನ ಕುಟುಂಬಗಳಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬೇಕು ಎಂದು ಭೀಮ್ ಆರ್ಮಿ ಹಾಗೂ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ ತಿಳಿಸಿರುವಂತೆ, ಸೆಪ್ಟೆಂಬರ್ 18ರಂದು ಮಧ್ಯರಾತ್ರಿ ನಡೆದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಟ್ರ್ಯಾಕ್ಟರ್‌ನಿಂದ ಆಯತಪ್ಪಿ ಬಿದ್ದ ಮೂವರು ಮಕ್ಕಳು ಚಕ್ರಕ್ಕೆ ಸಿಲುಕಿದ್ದರು. ಈ ದುರ್ಘಟನೆಯಲ್ಲಿ ಸುಚಿತ್ ಕುಮಾರ (12) ಮತ್ತು ಚರಣ್ ಕುಮಾರ (13) ಮೃತಪಟ್ಟಿದ್ದು, ವಿಜಯಕುಮಾರ ಗಂಭೀರವಾಗಿ ಗಾಯಗೊಂಡು ರಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂತ್ರಸ್ತ ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿದ ಅತ್ಯಂತ ಬಡ, ಭೂರಹಿತ ಹಾಗೂ ದಿನಗೂಲಿ ಕಾರ್ಮಿಕ ಕುಟುಂಬಗಳಾಗಿದ್ದು, ಈ ದುರಂತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಪ್ರಕರಣವನ್ನು ವಿಶೇಷ ತುರ್ತು ಪ್ರಕರಣವೆಂದು ಪರಿಗಣಿಸಿ ಪರಿಹಾರ ಕಲ್ಪಿಸಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.

ಮೃತ ಮಕ್ಕಳ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಹಾಗೂ ಗಾಯಗೊಂಡ ಮಗುವಿನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಸಿಎಸ್‌ಆರ್ ನಿಧಿಯಿಂದ ನೀಡಬೇಕು. ಜೊತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಹಾಗೂ ಎಸ್‌ಸಿಎಸ್‌ಪಿ/ಟಿಎಸ್‌ಪಿ ಸೇರಿದಂತೆ ವಿವಿಧ ಯೋಜನೆಗಳಡಿ ಹೆಚ್ಚುವರಿ ನೆರವು ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಗಾಯಾಳುವಿಗೆ ರಿಮ್ಸ್‌ನಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು. ಅಗತ್ಯವಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಉನ್ನತ ಚಿಕಿತ್ಸೆ ಕಲ್ಪಿಸಬೇಕು. ಮೂರು ಕುಟುಂಬಗಳಿಗೆ ವಸತಿ ಮತ್ತು ಹಕ್ಕುಪತ್ರ, ಭೂರಹಿತ ಕುಟುಂಬಗಳಿಗೆ ಕೃಷಿ ಜಮೀನು, ಮೃತ ಮಕ್ಕಳ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ಹಾಗೂ ಅಂತ್ಯೋದಯ (ಎಎವೈ) ಪಡಿತರ ಚೀಟಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಆದ್ಯತೆಯ ಮೇಲೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ತಹಶೀಲ್ದಾರ್ ಹಾಗೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಏಳು ದಿನಗಳೊಳಗೆ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರವೀಣ್ ಕುಮಾರ್, ಜಯರಾಜ್, ರಮೇಶ್ ಯಾರಾಮರಸ್, ಉಮೇಶ್ ಹಾಗೂ ನಾಗರಾಜ್ ಮನವಿ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor