ರಾಯಚೂರು: ವಸತಿ ಹಾಗೂ ಭೂ ರಹಿತರಿಗೆ ಭೂಮಿ ಮಂಜೂರು ಮಾಡಿ ಹಕ್ಕುಪತ್ರ ನೀಡಬೇಕು, ಅಧಿಕಾರಿಗಳ ಕಿರುಕುಳ ತಡೆಗಟ್ಟಬೇಕು ಎಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಮೂವರು ಸಂತ್ರಸ್ತರು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಪ್ರತಿಭಟನಾಕಾರರು ಮಸ್ಕಿ ತಾಲೂಕಿನ ಹಾಲಾಪುರ ಹೋಬಳಿಯ ಸುಂಕನೂರು ಸೀಮೆಯ ಸರ್ವೆ ನಂ.68 ಮತ್ತು 69ರ ಪಟ್ಟಾ ಜಮೀನಿನಲ್ಲಿ ಪಟ್ಟಾದಾರರಿಗೆ ಕಿರುಕುಳ ನೀಡಿ ಭೂಮಿ ಕಬಳಿಸಲು ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ವಾರಸುದಾರರಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಗೂಗೆಬಾಳ ಸೀಮೆಯ ಸರ್ವೆ ನಂ.32 ಹಾಗೂ ತೋರಣದಿನ್ನಿ ಸೀಮೆಯ ಸರ್ವೆ ನಂ.115 ಮತ್ತು 116ರ ಸರ್ಕಾರಿ ಮಂಜೂರಾತಿ ಜಮೀನುಗಳನ್ನು ಅನಧಿಕೃತ ವ್ಯಕ್ತಿಗಳಿಂದ ತೆರವುಗೊಳಿಸಿ, ಸರ್ವೆ ನಡೆಸಿ ಹದ್ದುಬಸ್ತು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರ ಮೇಲೆ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ. ಈ ಕುರಿತು ಪೊಲೀಸರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ (PMEGP) ಯೋಜನೆಯಡಿ ಅರ್ಜಿ ಸಲ್ಲಿಸಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಲ ನೀಡಲು ನಿರಾಕರಿಸುತ್ತಿರುವ ಬ್ಯಾಂಕ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಧರಣಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಮಾರೆಪ್ಪ ಹರವಿ, ಆಂಜನೇಯ ಕುರುಬದೊಡ್ಡಿ, ಬಂಗಾರಿ ನರಸಿಂಹಲು, ಗಂಗಪ್ಪ ತೋರಣದಿನ್ನಿ, ರಾಮಣ್ಣ ಮಸ್ಕಿ, ಬಸವರಾಜ ತೋರಣದಿನ್ನಿ ಹಾಗೂ ತಿಮ್ಮಮ್ಮ ಹಿರೇದಿನ್ನಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor