ರಾಯಚೂರು | ಫೆ.7ರಂದು ಒಳ ಮೀಸಲಾತಿ ಜಾರಿಗಾಗಿ ಚಲೋ ಹೈದರಾಬಾದ್ ಹೋರಾಟ
ರಾಯಚೂರು : ಫೆ.7ರಂದು ತೆಲಂಗಾಣ ಸರಕಾರಕ್ಕೆ ಒಳ ಮೀಸಲಾತಿ ನೀಡಲು ಬಡದೆಬ್ಬಿಸಲು ಒಂದು ಲಕ್ಷ ತಮಟೆ, ಸಾವಿರಾರು ಧ್ವನಿ ಮೂಲಕ ಚಲೋ ಹೈದರಾಬಾದ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ದಂಡೋರ ರಾಜ್ಯಾಧ್ಯಕ್ಷ ಬಿ.ನರಸಪ್ಪ ದಂಡೋರ ತಿಳಿಸಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೆ ಆಯಾ ರಾಜ್ಯಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿ ಐದು ತಿಂಗಳಾದರೂ ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಸರಕಾರ ಆದೇಶವನ್ನು ಗಾಳಿಗೆ ತೂರಿ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ದೂರಿದರು.
ಮಾದಿಗ ದಂಡೋರ ಸಂಸ್ಥಾಪಕ ಮಂದಕೃಷ್ಣ ಮಾದಿಗ ಅವರ ಸೂಚನೆ ಮೇರೆಗೆ ತೆಲಂಗಾಣದಲ್ಲಿ ಲಕ್ಷ ತಮಟೆ ಮತ್ತು ಸಾವಿರರು ದ್ವನಿಗಳ ಮೂಲಕ ವಿನೂತನ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ಪ್ರತಿ ತಾಲೂಕಿನಿಂದ 50 ತಮಟೆ ತೆಗೆದುಕೊಂಡು ಹೋಗಲಾಗುತ್ತಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರಕಾರ ಫೆ.7ರ ಒಳಗಡೆ ಒಳಮೀಸಲಾತಿ ಅನುಷ್ಠಾನವನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸದರೆ ಸರಕಾರ ಪರ ಜೈಕಾರ; ನಿರ್ಲಕ್ಷಿಸಿದರೆ ಲಕ್ಷ ತಮಟೆ ಬಾರಿಸುವ ಮೂಲಕ ಬಿಸಿ ಮುಟ್ಟಿಸಲಾಗುವುದು ಎಂದರು.
ಈ ವೇಳೆ ಮುಖಂಡರಾದ ದೂಳಯ್ಯ ಗುಂಜಳ್ಳಿ, ರಂಜಿತ್ ದಂಡೋರ, ಸುರೇಶ, ಮಾನಪ್ಪ ಮೇಸ್ತ್ರಿ ಸೇರಿದಂತೆ ಉಪಸ್ಥಿತರಿದ್ದರು.