Raichur | ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಸಮಿತಿಯಿಂದ ಸರ್ಕಾರೇತರ ಸದಸ್ಯರನ್ನು ಕೈಬಿಡಲು ಆಗ್ರಹ
ರಾಯಚೂರು: ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ–1989ರಡಿ ರಚಿಸಲಾದ ಜಿಲ್ಲಾ ಮಟ್ಟದ ಜಾಗೃತ ದಳ ಮತ್ತು ಮೇಲ್ವಿಚಾರಣಾ ಸಮಿತಿಯ ಸರ್ಕಾರೇತರ ಸದಸ್ಯರನ್ನು ತಕ್ಷಣವೇ ಸಮಿತಿಯಿಂದ ಕೈಬಿಡಬೇಕು ಎಂದು ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಮಹೇಂದ್ರ ಕುಮಾರ ಮಿತ್ರ ಆಗ್ರಹಿಸಿದರು.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯ ಸರ್ಕಾರೇತರ ಸದಸ್ಯರಾದ ರವೀಂದ್ರ ಜಲ್ದಾರ್, ಸುಧಾಮ, ಕೆ.ಇ. ಕುಮಾರ, ಬಸವರಾಜ ನಕ್ಕುಂದಿ ಹಾಗೂ ಹೇಮರಾಜ ಅಸ್ಕಿಹಾಳ ಅವರಿಗೆ ಸಂವಿಧಾನ, ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಗಳ ಬಗ್ಗೆ ಸಮರ್ಪಕ ಅರಿವು ಇಲ್ಲ ಎಂದು ಆರೋಪಿಸಿದರು.
ರಾಜಕೀಯ ಬೆಂಬಲದ ಆಧಾರದ ಮೇಲೆ ಸದಸ್ಯರನ್ನಾಗಿ ನೇಮಕ ಮಾಡಿರುವುದರಿಂದ ದಲಿತ ಸಮುದಾಯಕ್ಕೆ ನ್ಯಾಯ ದೊರೆಯುತ್ತಿಲ್ಲ ಎಂದು ಅವರು ದೂರಿದರು.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ ಅವರು, ಮುಜರಾಯಿ ಇಲಾಖೆಯ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಲ್ಲಿ ಎಸ್ಸಿ/ಎಸ್ಟಿ ಸಮುದಾಯದವರಿಗೆ ಮುಕ್ತ ಪ್ರವೇಶ ಕಲ್ಪಿಸಿ, ಅಸ್ಪೃಶ್ಯತೆ ಆಚರಣೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಒತ್ತಾಯಿಸಿದರು.
ಎಸ್ಸಿ/ಎಸ್ಟಿ ದೌರ್ಜನ್ಯ ಪ್ರಕರಣಗಳ ವಿಚಾರಣೆಯನ್ನು ಸಮುದಾಯದ ವಕೀಲರಿಗೆ ವಹಿಸಬೇಕು, ಪ್ರಕರಣಗಳಲ್ಲಿ ಬಿ-ರಿಪೋರ್ಟ್ ಸಲ್ಲಿಸುವುದನ್ನು ತಡೆಯಬೇಕು ಹಾಗೂ ದೌರ್ಜನ್ಯ ತಡೆಗಾಗಿ ಪ್ರತಿ ಜಿಲ್ಲೆಗೆ ವಿಶೇಷ ಜಿಲ್ಲಾಧಿಕಾರಿ ಮತ್ತು ವಿಶೇಷ ಪೊಲೀಸ್ ವರಿಷ್ಠಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.