ರಾಯಚೂರು: ಜಿಲ್ಲೆಯ ದೇವದುರ್ಗ, ಸಿರವಾರ ಹಾಗೂ ಲಿಂಗಸುಗೂರು ತಾಲೂಕುಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಭೂಮಾನಂದ ಹದ್ದಿನಾಳ, ಅಶ್ವಿನಿ ಹೊಕ್ರಾಣಿ ಮತ್ತು ರಾಣಮ್ಮ ಕರಡಕಲ್ ಅವರ ಸರಣಿ ಕೊಲೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಿ, ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ರಾಯಚೂರು ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಸರಣಿ ಕೊಲೆ ಪ್ರಕರಣಗಳ ಹಿನ್ನೆಲೆಯಲ್ಲಿ ಕುಟುಂಬಗಳಿಗೆ ಸಾಂತ್ವನ ಹೇಳಲು ಜಿಲ್ಲೆಗೆ ಆಗಮಿಸಿದ್ದ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಒಕ್ಕೂಟದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.

ಹಿರಿಯ ಹೋರಾಟಗಾರ ಹಾಗೂ ವಕೀಲ ಎಸ್. ಮಾರಪ್ಪ ಅವರ ನೇತೃತ್ವದಲ್ಲಿ ರವೀಂದ್ರನಾಥ ಪಟ್ಟಿ, ಎಂ.ಆರ್. ಬೇರಿ, ಬಸವರಾಜ ಭಂಡಾರಿ, ಹೇಮರಾಜ ಅಸ್ಕಿಹಾಳ ಸೇರಿದಂತೆ ಹೋರಾಟ ಸಮಿತಿ ಸದಸ್ಯರು ಸಚಿವರನ್ನು ಭೇಟಿ ಮಾಡಿ, ಮೂರು ಪ್ರಕರಣಗಳಲ್ಲೂ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಜಿಲ್ಲೆಯ ವಿವಿಧ ಭಾಗಗಳಲ್ಲಿ ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯನ್ನು ‘ದಲಿತರ ಮೇಲಿನ ದೌರ್ಜನ್ಯ ಜಿಲ್ಲೆ’ ಎಂದು ಘೋಷಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರಕರಣಗಳ ತನಿಖೆಯಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದ್ದು, ಆರೋಪಿಗಳು ರಾಜಾರೋಷವಾಗಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸಂಘಟನೆ ಆರೋಪಿಸಿದೆ.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಿ, ದಕ್ಷ ಹಾಗೂ ನಿಷ್ಪಕ್ಷಪಾತ ಅಧಿಕಾರಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಶರಣಪ್ಪ ದಿನ್ನಿ, ನರಸಿಂಹಲು ಮರ್ಚೆಟಾಳ್, ಜೈಭೀಮ್ BSP ಜಿಲ್ಲಾಧ್ಯಕ್ಷರು, ಎಲ್.ವಿ. ಸುರೇಶ್ ಸಿರವಾರ, ಎಂ. ವಸಂತ ಅಸ್ಕಿಹಾಳ, ಪ್ರಸಾದ್ ಆಶಾಪುರ, ತಾಯಪ್ಪ ಗದಾರ್, ಲಕ್ಷ್ಮಣ ಕಲ್ಲೂರು, ಹನುಮೇಶ್ ಅರೋಲಿ, ಸುರೇಶ್ ಭಂಡಾರಿ ಮಲ್ಕಾಪುರ, ದುಳ್ಳಯ್ಯ ಗುಂಜಹಳ್ಳಿ, ಯೇಸು ಆಶಾಪುರ, ಜಗನ್ ಎಕ್ಲಾಸಪುರ, ರವಿ ಗಾರಲದಿನ್ನಿ ಸೇರಿದಂತೆ ಅನೇಕ ಹೋರಾಟಗಾರರು ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor