×
Ad

ರಾಯಚೂರು | ಕೈಗಾರಿಕೆಗಳಿಗೆ ಇ ಖಾತಾ ನೋಂದಣಿ ಕಡ್ಡಾಯ : ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ

Update: 2025-12-13 14:32 IST

ರಾಯಚೂರು: ಕೈಗಾರಿಕೆಗಳಿಗೂ ಇ-ಖಾತಾ ನೋಂದಣಿ ಕಡ್ಡಾಯಗೊಳಿಸಿರುವ ಸರ್ಕಾರ ಗೊಂದಲಗಳನ್ನು ನಿವಾರಿಸದೇ ಇರುವದರಿಂದ ಹೊಸ ಕೈಗಾರಿಕೆಗಳ ನಿವೇಶನ ನೊಂದಣಿಯಾಗದೇ ಪರದಾಡುವ ಸ್ಥಿತಿ ಎದುರಾಗಿದೆ. ಒಂದು ವಾರದಲ್ಲಿ ಸಮಸ್ಯೆಗೆ ಪರಿಹಾರ ಒದಗಿಸದೇ ಹೋದಲ್ಲಿ ಕೈಗಾರಿಕೆಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುತ್ತದೆ ಎಂದು ರಾಯಚೂರು ಕಾಟನ್ ಮಿಲ್ಲರ್ಸ್‌ ಅಸೋಸಿಯೇಷನ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ಹೇಳಿದರು.

ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಸರ್ಕಾರದ ಅಧೀನ ಸಂಸ್ಥೆಗಳಾದ ಕೆಐಎಡಿಬಿ, ಎಪಿಎಂಸಿ, ಕೆಎಸ್‍ಎಸ್‍ಐಡಿಸಿ ಹಾಗೂ ಹೌಸಿಂಗ್ ಬೋರ್ಡ್‌ಗಳಿಂದ ಪಡೆದ ನಿವೇಶನಗಳಿಗೂ ಇ- ಖಾತಾ ಕಡ್ಡಾಯಗೊಳಿಸಲಾಗಿದೆ. ಆದರೆ ಇ-ಖಾತಾ ಯಾರು ಕೊಡಬೇಕೆನ್ನುವುದೇ ಸ್ಪಷ್ಟವಾಗಿಲ್ಲ. ಮಹಾನಗರ ಪಾಲಿಕೆ ಆಯುಕ್ತರು ಅದೇ ಸಂಸ್ಥೆಯಿಂದ ಇ-ಖಾತಾ ಪಡೆಯಬೇಕೆನ್ನುತ್ತಾರೆ. ಎಪಿಎಂಸಿ ಸೇರಿದಂತೆ ಕೆಐಎಡಿಬಿ ಸಂಸ್ಥೆಗಳಿಗೆ ಇ- ಖಾತಾ ಕುರಿತು ಯಾವುದೇ ಸರ್ಕಾರ ಆದೇಶ ಬಂದಿಲ್ಲ ಎಂದು ಹೇಳುತ್ತಾರೆ. ಯಾರಿಂದ ಇ-ಖಾತಾ ಪಡೆಯಬೇಕೆನ್ನುವುದೇ ತಿಳಿಯದೇ ಹೋಗಿದೆ. ಕಾವೇರಿ-2 ಆಪ್‍ನಲ್ಲಿ ಇ-ಖಾತಾ ನೊಂದಣಿ ಕಡ್ಡಾಯಗೊಳಸಿದ್ದರಿಂದ ನಿವೇಶನ ನೊಂದಣಿಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಸಬ್ ರಜಿಸ್ಟ್ರಾರರಿಗೂ ಯಾವುದೇ ಆದೇಶ ಬಂದಿರುವುದಿಲ್ಲ ಎಂದು ಹೇಳುತ್ತಿದ್ದಾರೆ. ಬ್ಯಾಂಕ್ ಸಾಲ ಮಾಡಿ ನಿವೇಶನ ಖರೀದಿಸಿ ಕೈಗಾರಿಕೆ ಸ್ಥಾಪಿಸಲು ಮುಂದಾಗಿರುವ ಕೈಗಾರಿಕೋಧ್ಯಮಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಮುಖ್ಯಮಂತ್ರಿಗಳಿಗೂ ಮನವಿ ನೀಡಲಾಗಿದೆಯಾದರು ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. 450 ಕೈಗಾರಿಕೆಗಳಿದ್ದು ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳ ಸಮಸ್ಯೆಗೆ ಸರ್ಕಾರ ಮುಂದಾಗದೇ ಇರುವುದರಿಂದ ಕೈಗಾರಿಕೆಗಳು ಬರಲು ಹಿಂದೇಟು ಹಾಕುವಂತಾಗಿದೆ. ತೆರಿಗೆ ಭರಿಸಿದರೂ ಸಮಸ್ಯೆನೀಗದೇ ಹೋಗಿದೆ. ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಇ-ಖಾತಾ ಸಮಸ್ಯೆಪರಿಹರಿಸಬೇಕು ಎಂದು ಹೇಳಿದರು.

ಕೆಐಎಡಿಬಿ ಹಾಗೂ ಕೆಎಸ್‍ಎಸ್‍ಡಿಸಿ ಅಧಿಕಾರಿಗಳೇ ಇಲ್ಲ. ಪ್ರಭಾರದ ಮೇಲಿರುವ ಅಧಿಕಾರಿಗಳು ಸೇವೆಗೆ ಸಿಗುವುದೇ ಇಲ್ಲ. ಕೂಡಲೇ ಅಧಿಕಾರಿಗಳ ಕೇಂದ್ರ ಸ್ಥಾನದಲ್ಲಿರುವಂತೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.

ಎಪಿಎಂಸಿ ಒಂದರಲ್ಲಿಯೇ 28 ಜನರ ಇ-ಖಾತೆಗಾಗಿ ಕಾದು ಕುಳಿತಿದ್ದಾರೆ. ಸರ್ಕಾರ ಇಲಾಖೆಗಳಲ್ಲಿಯೇ ಇ-ಖಾತಾ ಗೊಂದಲವಿದ್ದು, ತ್ವರಿತವಾಗಿನಿವಾರಣೆಯಾಗದೇ ಹೊದಲ್ಲಿ ಕೈಗಾರಿಕೆಗಳು ಬಂದ್ ಮಾಡಿ ವಿವಿಧ ಹಂತದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶಿವಾನಂದ ಚುಕ್ಕಿ, ರಾಕೇಶ ಮಲ್ದಕಲ್, ರಮೇಶ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News