×
Ad

ಲಿಂಗಸೂಗೂರು, ಹಟ್ಟಿ, ಮುದುಗಲ್ ಪಟ್ಟಣಕ್ಕೆ ಕಾಲಮಿತಿಯಲ್ಲಿ ನೀರು ಪೂರೈಕೆಗೆ ಕ್ರಮ: ಸಚಿವ ಭೈರತಿ ಸುರೇಶ್

Update: 2025-12-12 16:48 IST

ಬೆಳಗಾವಿ (ಸುವರ್ಣವಿಧಾನಸೌಧ) ಡಿ. 12: ರಾಯಚೂರು ಜಿಲ್ಲೆಯ ಲಿಂಗಸೂಗೂರು, ಹಟ್ಟಿ ಹಾಗೂ ಮುದುಗಲ್ ಪಟ್ಟಣಗಳಿಗೆ ನಿಗದಿತ ಕಾಲಮಿತಿಯಲ್ಲಿ ಕುಡಿಯುವ ನೀರು ಪೊರೈಕೆಗೆ ಸರಕಾರ ಕ್ರಮ ವಹಿಸಲಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಮಾನಪ್ಪ ವಜ್ಜಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಭೈರತಿ ಸುರೇಶ್, ಲಿಂಗಸೂಗೂರು ಪಟ್ಟಣಕ್ಕೆ ಅಮೃತ್ 2.0 ಯೋಜನೆಯಡಿ 94 ಕೋಟಿ ರೂ.ವೆಚ್ಚದಲ್ಲಿ ಹಾಗೂ ಹಟ್ಟಿ ಪಟ್ಟಣ ಪಂಚಾಯಿತಿಗೆ ಜೆ.ಜೆ.ಎಂ ಯೋಜನೆಯಡಿ 33.22 ಕೋಟಿ ರೂ.ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿ ಚಾಲ್ತಿಯಲಿದ್ದು, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಲಿಂಗಸೂಗೂರು ಯೋಜನೆಯ ಟೆಂಡರ್ ಪಡೆದ ಗುತ್ತಿಗೆದಾರರಿಗೆ ಕಾಮಗಾರಿ ಸ್ಥಳವನ್ನು 2024ರ ಮೇ ನಲ್ಲಿ ಹಸ್ತಾಂತರಿಸಲಾಗಿದೆ. 24 ತಿಂಗಳ ಕಾಲಾವಧಿ ನಿಗದಿಪಡಿಸಿದ್ದು, 2026ರ ಮೇ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಚಾಲನೆ ನೀಡಲಾಗುವುದು. ಹಟ್ಟಿ ಪಟ್ಟಣ ಪಂಚಾಯಿತಿ ಯೋಜನೆಯ ಟೆಂಡರ್ ಪಡೆದ ಗುತ್ತಿಗೆದಾರರಿಗೆ ಸ್ಥಳವನ್ನು 2025ರ ಜನವರಿಯಲ್ಲಿ ಹಸ್ತಾಂತರಿಸಲಾಗಿದೆ. ಮುಂಬರುವ ವರ್ಷದ ಆರಂಭದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಚಿವ ಭೈರತಿ ಸುರೇಶ್ ತಿಳಿಸಿದರು.

ಮುದಗಲ್ ಪಟ್ಟಣದ ಕುಡಿಯುವ ನೀರು ಸರಬರಾಜು ಉನ್ನತೀಕರಣ ಯೋಜನೆಗೆ 34.96 ಕೋಟಿ ರೂ.ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. ಈ ಪೈಕಿ ಶೇ.50ರಷ್ಟು ಮೊತ್ತ 17.48 ಕೋಟಿ ರೂ.ಸರಕಾರದ ಅನುದಾನ ಹಾಗೂ ಶೇ.50ರಷ್ಟು ಮೊತ್ತ 17.48 ಕೋಟಿ ರೂ.ಗಳನ್ನು ಪುರಸಭೆ ಪರವಾಗಿ ಮಾರುಕಟ್ಟೆ ಸಾಲ ಪಡೆದು ಅನುಷ್ಠಾನ ಗೊಳಿಸಲು ಉದ್ದೇಶಿಸಲಾಗಿತ್ತು. ಸರಕಾರದ ಅನುದಾನದ ಪಾಲಿನಲ್ಲಿ 6.62 ಕೋಟಿ ರೂ.ವೆಚ್ಚವಾಗಿದ್ದು, ಶೇ.27ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಹೇಳಿದರು. 

ಲಿಂಗಸೂಗೂರು, ಹಟ್ಟಿ ಮತ್ತು ಮುದುಗಲ್ ಪಟ್ಟಣಗಳಲ್ಲಿ ಪ್ರತಿ 10 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಹತ್ತಿರದಲ್ಲಿಯೇ ಕೃಷ್ಣಾ ನದಿಗೆ ಅಡ್ಡಲಾಗಿ ಅಣೆಕಟ್ಟು ಇದ್ದರೂ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಎದುರಾಗಿದೆ. ಪ್ರತಿದಿನ ಜನರು ನೀರಿನ ಬವಣೆ ಹೇಳಿಕೊಂಡು ಮನೆಗೆ ಬರುತ್ತಾರೆ. ಸರಕಾರಕ್ಕೆ ಜನರಿಗೆ ಕುಡಿಯುವ ನೀರನ್ನು ಕೊಡುವ ಯೋಗ್ಯತೆಯೂ ಇಲ್ಲವೇ?. ಜನ ಪ್ರತಿನಿತ್ಯ ನನ್ನ ಮನೆಗೆ ಬಂದು ಛಿಮಾರಿ ಹಾಕುತ್ತಿದ್ದಾರೆಂದು ಸದಸ್ಯ ಮಾನಪ್ಪ ವಜ್ಜಲ್ ಸರಕಾರದ ಗಮನ ಸೆಳೆದಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News