Raichur | ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಸಾಹಿತಿಗಳ ಕಡೆಗಣನೆ: ಡಾ.ಮಹೇಂದ್ರ ಕುರ್ಡಿ ಅಸಮಾಧಾನ
ರಾಯಚೂರು: ನ.14 ಮತ್ತು 15ರಂದು ಎರಡು ದಿನಗಳ ಕಾಲ ನಡೆಯಲಿರುವ 12ನೇ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ನೈಜ ಸಾಹಿತ್ಯಾಸಕ್ತರು ಹಾಗೂ ಸೃಜನಶೀಲ ಲೇಖಕರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಇದರಿಂದ ಬರಹಗಾರರಲ್ಲಿ ನಿರಾಶೆ ಮೂಡಿದೆ ಎಂದು ಹಿರಿಯ ಸಾಹಿತಿ ಡಾ. ಮಹೇಂದ್ರ ಕುರ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ತಾವು ಆರು ಸ್ವತಂತ್ರ ಕೃತಿಗಳನ್ನು ಪ್ರಕಟಿಸಿದ್ದು, ನಾಡು-ನುಡಿಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಜಿಲ್ಲೆಯ ಸಾಹಿತಿ ಎಂಬ ಹೆಮ್ಮೆ ಇದೆ. ಆದರೆ, 9ನೇ ಸಾಹಿತ್ಯ ಸಮ್ಮೇಳನದ ಅವಧಿಯಿಂದಲೂ ಕಳೆದ ಹಲವು ಸಮ್ಮೇಳನಗಳಲ್ಲಿ ಆಹ್ವಾನ ಹಾಗೂ ಅವಕಾಶಕ್ಕಾಗಿ ನಿರಂತರವಾಗಿ ಮನವಿ ಮಾಡುತ್ತಾ ಬಂದಿದ್ದರೂ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಂಘಟಕರು ತಮ್ಮನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸಮ್ಮೇಳನದ ವೇದಿಕೆಯಲ್ಲಿ ಆಸೀನರಾಗಲು ಅಥವಾ ವಿಶೇಷ ಉಪಸ್ಥಿತಿಗೆ ಅವಕಾಶ ನೀಡದಿದ್ದರೂ, ಕನಿಷ್ಠ ಸ್ಥಳೀಯ ಲೇಖಕರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಲು ಅಥವಾ ಸಾಹಿತ್ಯಿಕ ಚರ್ಚೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬಹುದಿತ್ತು. ಬದ್ಧತೆಯಿಂದ ಸಾಹಿತ್ಯ ಸೇವೆ ಮಾಡುತ್ತಿರುವ ಸಾಹಿತಿಯೊಬ್ಬರಿಗೆ ಸ್ವಂತ ಜಿಲ್ಲೆಯ ಸಮ್ಮೇಳನದಲ್ಲೇ ಇಂತಹ ತಾರತಮ್ಯ ಮತ್ತು ಮಲತಾಯಿ ಧೋರಣೆ ಎದುರಾಗುತ್ತಿರುವುದು ಖಂಡನೀಯ. ಇದು ಸಾಹಿತ್ಯ ಲೋಕಕ್ಕೆ ಮಾಡುವ ಅವಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ಕೆಲವೇ ಕೆಲವು ವ್ಯಕ್ತಿಗಳಿಗೆ ಸೀಮಿತವಾಗದೆ, ಜಿಲ್ಲೆಯ ಎಲ್ಲ ಪ್ರಾಮಾಣಿಕ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ವೇದಿಕೆಯಾಗಬೇಕು. ಈ ಬಗ್ಗೆ ಪ್ರಶ್ನಿಸಿದಾಗ ಆಮಂತ್ರಣ ಪತ್ರಿಕೆ ಮುದ್ರಣವಾಗಿದೆ ಎಂಬ ಉತ್ತರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಾದರೂ ಸಂಘಟಕರು ಇಂತಹ ಲೋಪಗಳನ್ನು ತಿದ್ದಿಕೊಂಡು, ಅರ್ಹ ಹಾಗೂ ಪ್ರಾಮಾಣಿಕ ಲೇಖಕರಿಗೆ ನ್ಯಾಯ ಒದಗಿಸಬೇಕು ಎಂದು ಡಾ. ಮಹೇಂದ್ರ ಕುರ್ಡಿ ಆಗ್ರಹಿಸಿದ್ದಾರೆ.