ರಾಯಚೂರು: ನಗರದ ಜಹೀರಾಬಾದ್ ಬಡಾವಣೆಯಲ್ಲಿ ವಕ್ಫ್‌ಗೆ ಸೇರಿದ ಸರ್ವೆ ನಂ. 1209/1ರಲ್ಲಿರುವ ಒಂದು ಎಕರೆ 11 ಗುಂಟೆ ಜಮೀನನ್ನು ಆಲ್ ಕರೀಂ ಚಾರಿಟೇಬಲ್ ಟ್ರಸ್ಟ್ ಖರೀದಿಸಿರುವ ಪ್ರಕ್ರಿಯೆ ನಿಯಮಬಾಹಿರವಾಗಿದೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಈ ವ್ಯವಹಾರ ನಡೆಸಲಾಗಿದ್ದು, ಕೂಡಲೇ ನೋಂದಣಿ ರದ್ದುಗೊಳಿಸಬೇಕು ಎಂದು ಜಿಲ್ಲಾ ವಕ್ಫ್ ರಕ್ಷಣಾ ಸಮಿತಿ ಸದಸ್ಯ ಅಕ್ಬರ್‌ ಹುಸೇನ ನಾಗುಂಡಿ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜಾಗದಲ್ಲಿ ಈಗಾಗಲೇ ಮದರಸಾ, ಮಸೀದಿ, ಶಾಹಿ ಮಹಲ್ ಹಾಗೂ ನೂರು ಷಾ ಖಾದ್ರಿಯವರ ದರ್ಗಾ ಇವೆ. ಆದರೂ ಜಮೀನನ್ನು ಕೃಷಿ ಭೂಮಿ ಎಂದು ನಮೂದಿಸಿ ಕೆಲವರು ಮಾರಾಟ ಮಾಡಿದ್ದಾರೆ. ಈ ವಿಚಾರದಲ್ಲಿ ನೋಂದಣಿ ಅಧಿಕಾರಿಗಳು ಹಾಗೂ ಜಿಲ್ಲಾ ವಕ್ಫ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.

ವಕ್ಫ್‌ಗೆ ಸೇರಿದ ಜಾಗವನ್ನು ರಕ್ಷಣೆ ಮಾಡುವ ಬದಲು ಮಾರಾಟ ಮಾಡಲಾಗಿದೆ. 1980ರಲ್ಲಿಯೇ ವಕ್ಫ್ ಮಂಡಳಿಯ ಗೆಜೆಟ್‌ನಲ್ಲಿ ಈ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಆದರೂ ವಂಚಿಸುವ ಉದ್ದೇಶದಿಂದ ಸಿರವಾರದಲ್ಲಿ ನೋಂದಣಿ ಪ್ರಕ್ರಿಯೆ ನಡೆಸಲಾಗಿದೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಜಮೀನು ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಲ್ ಕರೀಂ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಸಮಾಜಸೇವೆಯ ಹೆಸರಿನಲ್ಲಿ ವಕ್ಫ್ ಆಸ್ತಿಯನ್ನು ಖರೀದಿಸಿರುವುದು ಕಾನೂನುಬಾಹಿರವಾಗಿದೆ. ಸಂಸದರು, ಶಾಸಕರು ಸೇರಿದಂತೆ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಶಾಹಿ ಮಹಲ್ ಹಾಗೂ ಮಸೀದಿ ಇರುವ ಜಾಗವನ್ನು ಮಾರಾಟ ಮಾಡಿರುವುದು ವಿಪರ್ಯಾಸದ ಸಂಗತಿ. ನಗರದ ಮುಸ್ಲಿಂ ಸಮುದಾಯದವರು ಈ ವಕ್ಫ್ ಆಸ್ತಿ ಮಾರಾಟವನ್ನು ವಿರೋಧಿಸಬೇಕು ಎಂದು ಮನವಿ ಮಾಡಿದರು.

ವಕ್ಫ್ ಅಧಿಕಾರಿಗಳು ಕೂಡಲೇ ಜಮೀನಿನ ನೋಂದಣಿಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾನೂನು ಹೋರಾಟದ ಜೊತೆಗೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮೌಲಾನ ಗುಲಾಮ ಬೇಗ್, ಸೈಯದ್ ಮುರ್ಷಿದ್ ಜಾನಿ, ಸೈಯದ್ ಸಮೀರ್ ಹುಸೇನಿ, ಮನ್ಸೂರು ಬೇಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor