×
Ad

Raichur | ಪ್ರಜಾಪ್ರಭುತ್ವ ಉಳಿಸಲು ಜನರು ಒಗ್ಗೂಡಬೇಕು: ಕ್ಲಿಫ್ಟನ್ ಡಿ ರೋಜೋರಿಯೊ

ಸಿಪಿಐ(ಎಂಎಲ್) ಲಿಬರೇಶನ್ ಜಿಲ್ಲಾ ಸಮ್ಮೇಳನ

Update: 2026-07-11 17:47 IST

ರಾಯಚೂರು : “ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಉಳಿಸಬೇಕಾದರೆ ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸಬೇಕು” ಎಂದು ಸಿಪಿಐ (ಎಂಎಲ್) ಲಿಬರೇಶನ್ ಪಕ್ಷದ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ. ರೋಜೋರಿಯೊ ಹೇಳಿದರು.

ನಗರದ ಶರಣ ಮಾದಾರ ಚನ್ನಯ್ಯ ಭವನ ಟೌನ್‌ಹಾಲ್‌ನಲ್ಲಿ ಶನಿವಾರ ನಡೆದ ಪಕ್ಷದ 2ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ದೇಶವನ್ನು ಹಿಂದೂರಾಷ್ಟ್ರದತ್ತ ಕೊಂಡೊಯ್ಯುವ ಪ್ರಯತ್ನ ನಡೆಸುತ್ತಿದ್ದು, ಸಮಾಜದಲ್ಲಿ ವಿಭಜನೆಯ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದರು.

ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನೀತಿಗಳ ಪರಿಣಾಮವಾಗಿ ಕಾರ್ಮಿಕ ವಿರೋಧಿ ಕಾನೂನುಗಳು ಜಾರಿಯಾಗುತ್ತಿವೆ. ದೊಡ್ಡ ಉದ್ಯಮಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ದೇಶದ ಸಂಪತ್ತು ಕೆಲವರ ಕೈಗೆ ಕೇಂದ್ರೀಕೃತವಾಗುತ್ತಿದ್ದು, ದುಡಿಯುವ ವರ್ಗದ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ಟೀಕಿಸಿದರು.

ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ನಾಗರಿಕರ ಮತದಾನದ ಹಕ್ಕಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಆರೋಪಿಸಿದರು.

ಸಮ್ಮೇಳನದಲ್ಲಿ ದೇಶದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಯ ಕುರಿತು ವಿಸ್ತೃತ ಚರ್ಚೆ ನಡೆಯಿತು. ಕೃಷಿ, ನೀರಾವರಿ, ಕಾರ್ಮಿಕ, ಉದ್ಯೋಗ, ಶಿಕ್ಷಣ, ಆರೋಗ್ಯ, ಮಹಿಳೆಯರ ಸುರಕ್ಷತೆ, ದಲಿತ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳು ಸೇರಿದಂತೆ ವಿವಿಧ ಜನಪರ ವಿಷಯಗಳ ಕುರಿತು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಪಕ್ಷವನ್ನು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಇನ್ನಷ್ಟು ಬಲಪಡಿಸುವುದು, ಸದಸ್ಯತ್ವ ವಿಸ್ತರಿಸುವುದು, ಕಾರ್ಯಕರ್ತರಿಗೆ ರಾಜಕೀಯ ಶಿಕ್ಷಣ ನೀಡುವುದು ಹಾಗೂ ಜನರ ಸಮಸ್ಯೆಗಳ ಕುರಿತು ಹೋರಾಟಗಳನ್ನು ತೀವ್ರಗೊಳಿಸುವ ಸಂಕಲ್ಪ ವ್ಯಕ್ತಪಡಿಸಲಾಯಿತು.

ಸಮ್ಮೇಳನದಲ್ಲಿ 16 ಸದಸ್ಯರ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ನಾಗರಾಜ ಪೂಜಾರ್ ಅವರು ಎರಡನೇ ಅವಧಿಗೆ ಜಿಲ್ಲಾ ಕಾರ್ಯದರ್ಶಿಯಾಗಿ ಪುನರಾಯ್ಕೆಯಾದರು. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಜನಸಂಪರ್ಕ ಅಭಿಯಾನ, ಸದಸ್ಯತ್ವ ವಿಸ್ತರಣೆ ಹಾಗೂ ಜನಪರ ಹೋರಾಟಗಳನ್ನು ಬಲಪಡಿಸುವ ಕಾರ್ಯಯೋಜನೆಗೂ ಸಭೆ ಅನುಮೋದನೆ ನೀಡಿತು.

ಈ ಸಂಧರ್ಭದಲ್ಲಿ ಅಜೀಜ್ ಜಾಗೀದಾರ್ ರಾಯಚೂರು ತಾಲೂಕು ಕಾರ್ಯದರ್ಶಿ, ಬಸವರಾಜ ಬೇಳಗುರ್ಕಿ ಸಿಂಧನೂರು ತಾಲೂಕು ಕಾರ್ಯದರ್ಶಿ, ವಿರೇಶ ಲಿಂಗಸೂಗೂರ, ಆರ್. ಎಚ್ ಕಲಮಂಗಿ, ಈರಮ್ಮ, ಮಹಾಕಾಳಮ್ಮ, ರೇಣುಕಾ ಜಿಲಾನಿ ಯರಿಗೇರಾ, ರಾಜ ಸಾಬ್, ಭೀಮಯ್ಯ, ನಿಸಾರ್ ಅಹಮದ್, ಜಗದೀಶ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News