Sindhnur | ಪ್ರಕಾಶ್ ರಾಜ್ ವಿರುದ್ಧದ ಪ್ರತಿಭಟನೆಗೆ ಖಂಡನೆ: ದಾಳಿ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ
ಸಿಂಧನೂರು: ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ‘ಮನುಷ್ಯತ್ವದೆಡೆಗೆ ಸಮುದಾಯ ಜಾಥಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಪ್ರಕಾಶ್ ರಾಜ್ ವಿರುದ್ಧ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿರುವುದು ಖಂಡನೀಯ ಎಂದು ಸಮುದಾಯದ ರಾಜ್ಯ ಖಜಾಂಚಿ ಎಸ್. ದೇವೇಂದ್ರಗೌಡ ಹೇಳಿದರು.
ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯ ಸ್ಥಾಪನೆಯಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೂರು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೂರನೇ ದಿನದ ಸಮಾರೋಪ ಸಮಾರಂಭದಲ್ಲಿ ಚಿತ್ರನಟ ಪ್ರಕಾಶ್ ರಾಜ್ ಭಾಗವಹಿಸಿದ್ದರು ಎಂದು ತಿಳಿಸಿದರು.
ಈ ವೇಳೆ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧಿ ಗುಂಪೊಂದು ಸಭಾಂಗಣದ ಎದುರು ಪ್ರತಿಭಟನೆ ನಡೆಸಿ “ಪ್ರಕಾಶ್ ರಾಜ್ ಗೋ ಬ್ಯಾಕ್” ಎಂದು ಘೋಷಣೆ ಕೂಗಿತು. ಕಾರ್ಯಕ್ರಮಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ ಬಳಿಕ ಕಾರ್ಯಕ್ರಮ ಮುಂದುವರಿಯಿತು ಎಂದು ಹೇಳಿದರು.
ಪ್ರತಿಭಟನೆ ನಡೆಸಿದ ಗುಂಪಿನ ಕೆಲವರು ಸಭಾಂಗಣದೊಳಗೆ ನುಗ್ಗಿ ಗದ್ದಲ ಸೃಷ್ಟಿಸಿದರು. ಬಳಿಕ ಸಭಾಂಗಣದ ಹೊರಗಡೆ ಇದ್ದ ಬ್ಯಾನರ್‌ಗಳನ್ನು ಹರಿದು ಹಾಕಿ ಫ್ಯಾಸಿಸ್ಟ್ ಪ್ರವೃತ್ತಿ ಪ್ರದರ್ಶಿಸಿದ್ದಾರೆ ಎಂದು ದೇವೇಂದ್ರಗೌಡ ಆರೋಪಿಸಿದರು.
ಇದು ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ದಾಳಿಯಾಗಿದ್ದು, ದಾಂದಲೆ ನಡೆಸಿದವರು ಹಾಗೂ ಅದಕ್ಕೆ ಪ್ರೇರಣೆ ನೀಡಿದವರ ವಿರುದ್ಧ ಪೊಲೀಸ್ ಇಲಾಖೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮುದಾಯದ ತಾಲೂಕು ಘಟಕದ ಅಧ್ಯಕ್ಷ ಶರಭಣ್ಣ ನಾಗಲಾಪುರ, ಎಂ.ಗೋಪಾಲಕೃಷ್ಣ, ಶಿವಕುಮಾರ ಕೋಟೆ, ಬಸವಂತರಾಯಗೌಡ ಕಲ್ಲೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.