Raichur | ಸಸ್ಯ ರೋಗಗಳ ಪತ್ತೆ, ನಿರ್ವಹಣೆಗೆ ಎಐ ತಂತ್ರಜ್ಞಾನ ಬಳಕೆ ಅಗತ್ಯ: ಆರ್.ವಿಶ್ವನಾಥನ್
‘ಸುಸ್ಥಿರ ಮತ್ತು ಹವಾಮಾನ ಸ್ಥಿತಿಸ್ಥಾಪಕ ಕೃಷಿಗಾಗಿ ಸಸ್ಯ ಆರೋಗ್ಯ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ
ರಾಯಚೂರು: ಸಸ್ಯ ರೋಗಗಳ ಪತ್ತೆ ಮತ್ತು ನಿರ್ವಹಣೆಯಲ್ಲಿ ಹಲವು ದಶಕಗಳಿಂದ ಎದುರಾಗುತ್ತಿರುವ ಸವಾಲುಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಭಾರತೀಯ ಫೈಟೊಪಾಥೋಲಾಜಿಕಲ್ ಸೊಸೈಟಿಯ ಅಧ್ಯಕ್ಷ ಆರ್. ವಿಶ್ವನಾಥನ್ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬುಧವಾರ ‘ಸುಸ್ಥಿರ ಮತ್ತು ಹವಾಮಾನ ಸ್ಥಿತಿಸ್ಥಾಪಕ ಕೃಷಿಗಾಗಿ ಸಸ್ಯ ಆರೋಗ್ಯ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಹವಾಮಾನ ಬದಲಾವಣೆ, ಬರ ಹಾಗೂ ಪರಿಸರ ವೈಪರೀತ್ಯಗಳಿಂದ ಬೆಳೆಗಳಲ್ಲಿ ಹೊಸ ಹೊಸ ಸಸ್ಯ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳ ಸ್ವರೂಪ ಮತ್ತು ತೀವ್ರತೆಯೂ ಬದಲಾಗುತ್ತಿದೆ. ಇಂತಹ ಸವಾಲುಗಳನ್ನು ಎದುರಿಸಲು ಕೃತಕ ಬುದ್ಧಿಮತ್ತೆ (ಎಐ), ಜೀನೋಮಿಕ್ಸ್ ಹಾಗೂ ಜೈವಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ರೋಗಗಳ ನಿಖರ ಪತ್ತೆ, ಮುನ್ಸೂಚನೆ ಮತ್ತು ನಿಯಂತ್ರಣಕ್ಕೆ ವೈಜ್ಞಾನಿಕ ಸಂಶೋಧನೆ ನಡೆಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ ಬಳಸಿ ಸಸ್ಯ ರೋಗಗಳನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆಯಾದರೂ, ಅವುಗಳ ವೈಜ್ಞಾನಿಕ ನಿಖರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂಡಿಯನ್ ಫೈಟೊಪಾಥೋಲಾಜಿಕಲ್ ಸೊಸೈಟಿಯ ಅಧ್ಯಕ್ಷ ಆರ್.ಎಂ. ಘಾಡೆ ಮಾತನಾಡಿ, ಮಹಾರಾಷ್ಟ್ರದಲ್ಲಿ ಸುಮಾರು 15 ಸಾವಿರ ಹೆಕ್ಟೇರ್ ಪ್ರದೇಶದ ಮೆಣಸಿನಕಾಯಿ ಬೆಳೆ ವೈರಸ್ ರೋಗಗಳಿಂದ ಹಾನಿಗೊಳಗಾಗಿದೆ. ಅಲ್ಲಿನ 350 ತಾಲ್ಲೂಕುಗಳ ಪೈಕಿ ಸುಮಾರು 310 ತಾಲ್ಲೂಕುಗಳು ಬರ ಎದುರಿಸುತ್ತಿವೆ. ಹವಾಮಾನ ಬದಲಾವಣೆಯಿಂದ ಈ ಹಿಂದೆ ಅಲ್ಪ ಪ್ರಮಾಣದಲ್ಲಿದ್ದ ಸಸ್ಯ ರೋಗಗಳು ಈಗ ತೀವ್ರವಾಗಿ ಹರಡುತ್ತಿವೆ. ಇಂತಹ ಸಂದರ್ಭದಲ್ಲಿ ಬೆಳೆಗಳ ರಕ್ಷಣೆ ದೊಡ್ಡ ಸವಾಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಟ್ರೈಕೋಡರ್ಮಾ, ಸ್ಯೂಡೋಮೊನಾಸ್ನಂತಹ ಜೈವಿಕ ನಿಯಂತ್ರಕಗಳ ಪರಿಣಾಮಕಾರಿ ಬಳಕೆಗೆ ಜೈವಿಕ ತಂತ್ರಜ್ಞಾನ ಹಾಗೂ ಎಐ ನೆರವು ಪಡೆಯಬೇಕು. ಸಂವೇದಕಗಳು ಮತ್ತು ಎಐ ತಂತ್ರಜ್ಞಾನ ಬಳಸಿ ರೋಗಗಳ ಮುನ್ಸೂಚನೆ ನೀಡಿ, ರೈತರಿಗೆ ಮುಂಚಿತವಾಗಿ ಸಂದೇಶ ರವಾನಿಸುವ ವ್ಯವಸ್ಥೆ ರೂಪಿಸಬೇಕು. ಮುಂದಿನ 20 ದಿನಗಳಲ್ಲಿ ಯಾವ ರೋಗ ಕಾಣಿಸಿಕೊಳ್ಳಬಹುದು ಎಂಬುದನ್ನು ಮುಂಚಿತವಾಗಿ ತಿಳಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಸಂಶೋಧನೆ ನಡೆಯಬೇಕು ಎಂದು ಹೇಳಿದರು.
ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ವಿ.ಐ. ಬೆಣಗಿ ಮಾತನಾಡಿ, ಬಾಳೆ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಫ್ಯೂಸೇರಿಯಂ ವಿಲ್ಟ್ನ ಟಿಆರ್–4 ರೋಗವು ಮಣ್ಣಿನಲ್ಲಿ ದೀರ್ಘಕಾಲ ಉಳಿದು ಬೆಳೆಗಳಿಗೆ ಹಾನಿ ಉಂಟುಮಾಡುತ್ತದೆ. ಹೊಸ ವೈರಸ್ ರೋಗಗಳು ಹಾಗೂ ವಿಷಕಾರಿ ಮೈಕೋಟಾಕ್ಸಿನ್ ಉತ್ಪಾದಿಸುವ ರೋಗಕಾರಕಗಳು ಮಾನವನ ಆರೋಗ್ಯಕ್ಕೂ ಅಪಾಯಕಾರಿಯಾಗಬಹುದು. ವಿಜ್ಞಾನಿಗಳು ರೋಗಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ, ಕ್ಷೇತ್ರಮಟ್ಟದ ಅಧ್ಯಯನ ನಡೆಸಿ ರೈತರಿಗೆ ವೈಜ್ಞಾನಿಕ ಮಾರ್ಗದರ್ಶನ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿ ಡಾ. ಗುರುರಾಜ್ ಸುಂಕದ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಮಲ್ಲೇಶ ಕೊಲಿಮಿ, ಸಂಶೋಧನಾ ನಿರ್ದೇಶಕ ಡಾ. ಎ. ಪ್ರಭುರಾಜ್ ಉಪಸ್ಥಿತರಿದ್ದರು.
ಡಾ. ಮಲ್ಲಿಕಾರ್ಜುನ ಕೆಂಗನಾಳ್ ಸ್ವಾಗತಿಸಿದರು. ಸುಮಾ ನಿರೂಪಿಸಿದರು. ಅಮರೇಶ ವಂದಿಸಿದರು. ವಿವಿಧ ರಾಜ್ಯಗಳ ವಿಜ್ಞಾನಿಗಳು, ಸಂಶೋಧಕರು ಹಾಗೂ ಕೃಷಿ ತಜ್ಞರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.