Raichur | ಸಂವಿಧಾನದ ಹಕ್ಕುಗಳು ಮತ್ತು ಜವಾಬ್ದಾರಿಗಳ ಮಹತ್ವ ಅರಿಯಬೇಕು : ಡಿಸಿ ಪೂವಿತಾ ಎಸ್.
ಸಂವಿಧಾನ ದಿನಾಚರಣೆ ಕಾರ್ಯಕ್ರಮ
ರಾಯಚೂರು: ಸಂವಿಧಾನ ಜಾರಿಗೆ ಬರುವ ಮುನ್ನ ದೇಶದಲ್ಲಿದ್ದ ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ ಮತ್ತು ಮಹಿಳೆಯರ ಹಕ್ಕುಗಳ ಕೊರತೆಯನ್ನು ಸ್ಮರಿಸುವ ಮೂಲಕ ಸಂವಿಧಾನ ನಮಗೆ ನೀಡಿರುವ ಹಕ್ಕುಗಳು ಹಾಗೂ ಜವಾಬ್ದಾರಿಗಳ ಮಹತ್ವವನ್ನು ಅರಿತುಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು.
ನ.26ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ ರಾಮ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನ ಜಾರಿಗೆ ಬರುವ ಮೊದಲು ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆ ಸಾಮಾನ್ಯವಾಗಿತ್ತು. ಇಂದು ಅದು ಸಂವಿಧಾನದ ಮೂಲಕ ಶಿಕ್ಷಾರ್ಹ ಅಪರಾಧವಾಗಿದೆ. ಶಿಕ್ಷಣ ಪಡೆಯುವುದು ಇಂದು ಮಕ್ಕಳ ಹಕ್ಕಾಗಿದ್ದು, ಹಿಂದೆ ಅದು ಅಷ್ಟು ಸುಲಭವಾಗಿರಲಿಲ್ಲ. ಸತಿ ಪದ್ಧತಿಯಂತಹ ಅನಿಷ್ಟ ಪದ್ಧತಿಗಳು ಹಾಗೂ ವಿಧವೆಯರ ಮರುಮದುವೆಗೆ ಇದ್ದ ನಿರ್ಬಂಧಗಳೂ ಸೇರಿದಂತೆ ಹಲವು ಸಾಮಾಜಿಕ ಅಸಮಾನತೆಗಳು ಅಂದು ಅಸ್ತಿತ್ವದಲ್ಲಿದ್ದವು ಎಂದು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಹಲವು ಗಣ್ಯರು, ತಜ್ಞರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಸುಮಾರು ಎರಡು ವರ್ಷ, 11 ತಿಂಗಳು ಮತ್ತು 18 ದಿನಗಳ ಕಾಲ ಶ್ರಮಿಸಿ ಸಂವಿಧಾನವನ್ನು ರಚಿಸಿದರು. ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಕರ್ನಾಟಕದ ಬಿ.ಎನ್. ರಾವ್, ನಿಜಲಿಂಗಪ್ಪ, ಚೆನ್ನಯ್ಯ ಸೇರಿದಂತೆ ಹಲವು ಗಣ್ಯರು ನೀಡಿದ ಕೊಡುಗೆಯನ್ನೂ ಜಿಲ್ಲಾಧಿಕಾರಿಗಳು ಸ್ಮರಿಸಿದರು.
ಭಾರತೀಯ ಸಂವಿಧಾನ ಕೇವಲ ದಾಖಲೆಯಲ್ಲ, ಅದೊಂದು ಜೀವಂತ ದಾಖಲೆಯಾಗಿದೆ. ಹಲವಾರು ದೇಶಗಳು ನಮ್ಮ ಸಂವಿಧಾನದ ತತ್ವಗಳನ್ನು ಅನುಸರಿಸುತ್ತಿವೆ. ಸಾವಿರಾರು ಭಾಷೆಗಳು, ನೂರಾರು ಧರ್ಮಗಳು ಹಾಗೂ ವೈವಿಧ್ಯಮಯ ಸಂಸ್ಕೃತಿಗಳ ನಡುವೆಯೂ ನಾವೆಲ್ಲರೂ ಭಾರತೀಯರು ಎಂಬ ಏಕತಾ ಭಾವನೆಯನ್ನು ಪ್ರತಿಯೊಬ್ಬರ ಮನಸ್ಸಿನಲ್ಲಿ ನೆಲೆಗೊಳಿಸುವಲ್ಲಿ ಸಂವಿಧಾನದ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಸಂವಿಧಾನದ ಆಶಯಗಳನ್ನು ಪ್ರತಿದಿನ ಸ್ಮರಿಸಿ ಗೌರವಿಸಬೇಕು ಎಂದು ಕರೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಅಸ್ಸಾಂನ ಗುವಾಹಟಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಂಸ್ಥಾಪಕ ಪ್ರೊ. ಡಾ. ಜೆ.ಎಸ್. ಪಾಟೀಲ್ ಮಾತನಾಡಿ, ಮೊಘಲರು ಹಾಗೂ ಅವರಿಗಿಂತ ಹಿಂದಿನ ರಾಜರ ಆಳ್ವಿಕೆಯ ಕಾಲದಲ್ಲಿ ದೇಶವು ವಿವಿಧ ಪ್ರದೇಶಗಳಾಗಿ ಅಸ್ತಿತ್ವದಲ್ಲಿತ್ತು. ನಂತರ ಬ್ರಿಟಿಷರು, ಪೋರ್ಚುಗೀಸರು ಹಾಗೂ ಡಚ್ಚರು ದಾಳಿ ಮಾಡಿದ ಬಳಿಕ ದೇಶವು ಹಲವು ಭಾಗಗಳಾಗಿ ಹರಿದು ಹಂಚಿಹೋಗಿ, 500ಕ್ಕೂ ಹೆಚ್ಚು ಸಣ್ಣಪುಟ್ಟ ಸಂಸ್ಥಾನಗಳು ಹಾಗೂ ಬ್ರಿಟಿಷ್ ಅಧೀನ ಪ್ರದೇಶಗಳಾಗಿ ವಿಭಜನೆಯಾಯಿತು. ಸುಮಾರು 300 ವರ್ಷಗಳ ಕಾಲ ದೇಶವು ಅನಾಥ ಸಮಾಜದಂತಿತ್ತು ಎಂದು ಹೇಳಿದರು.
ಸಂವಿಧಾನ ಸಭೆಯಲ್ಲಿ ಪ್ರತಿಯೊಂದು ವಿಧಿ ಹಾಗೂ ಪರಿಚ್ಛೇದದ ಕುರಿತು ಚರ್ಚೆಗಳು ನಡೆಯುವಾಗ ಸಂಪ್ರದಾಯವಾದಿಗಳು ಸೇರಿದಂತೆ ಹಲವರಿಂದ ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿದ್ದವು. ಅಂತಹ ಸಂದರ್ಭಗಳಲ್ಲಿಯೂ ಅಂಬೇಡ್ಕರ್ ಅವರು ಅತ್ಯಂತ ಶಾಂತಚಿತ್ತದಿಂದ, ದೃಢತೆ ಹಾಗೂ ನಿಖರತೆಯಿಂದ ಉತ್ತರ ನೀಡುತ್ತಿದ್ದರು. ಅಂಬೇಡ್ಕರ್ ಅವರು ಕಾನೂನು ಪಂಡಿತರಾಗಿರುವುದರ ಜೊತೆಗೆ ಸಂಸ್ಕೃತ ಸೇರಿದಂತೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ವೈವಿಧ್ಯತೆ ಮತ್ತು ಭಿನ್ನತೆಗಳ ನಡುವೆಯೂ ದೇಶದಲ್ಲಿ ಏಕತೆಯನ್ನು ಸಾಧಿಸಲು ಅಗತ್ಯವಿರುವ ಕಾನೂನಾತ್ಮಕ ಅಂಶಗಳನ್ನು ಪರಿಣಾಮಕಾರಿಯಾಗಿ ಮಂಡಿಸಿದರು ಎಂದರು.
ಸುಮಾರು ಎರಡೂವರೆ ವರ್ಷಗಳ ಕಾಲ ನಡೆದ ಸಂವಿಧಾನ ಸಭೆಯ ಚರ್ಚೆಗಳು ಒಂದು ರೀತಿಯಲ್ಲಿ ಡಾ. ಅಂಬೇಡ್ಕರ್ ಅವರ ಏಕವ್ಯಕ್ತಿ ಸಂವಾದದಂತಿದ್ದವು. ಸಂವಿಧಾನ ಸಭೆಯಲ್ಲಿ ಅವರು ದೈತ್ಯ ಹಾಗೂ ದಿವ್ಯ ಶಕ್ತಿಯಾಗಿ ನಿಂತು ದೇಶಕ್ಕೆ ಸಂವಿಧಾನ ನೀಡುವ ಮಹತ್ವದ ಕಾರ್ಯವನ್ನು ಪೂರ್ಣಗೊಳಿಸಿದರು. ವಿಶ್ವದಲ್ಲೇ ಅತ್ಯಂತ ಉದ್ದವಾದ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆ ಭಾರತದ ಸಂವಿಧಾನಕ್ಕಿದೆ ಎಂದು ಹೇಳಿದರು.
1947ರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ನೂರಾರು ಜಾತಿ, ಪಂಗಡ ಹಾಗೂ ಭಾಷೆಗಳಿರುವ ಸಂಕೀರ್ಣ ಸಮಾಜವನ್ನು ಒಗ್ಗೂಡಿಸಿ ಒಂದೇ ರಾಷ್ಟ್ರವಾಗಿ ಕಟ್ಟಲು ಸಾಧ್ಯವೇ, ಪ್ರಜಾಪ್ರಭುತ್ವ ಎಷ್ಟು ವರ್ಷ ಉಳಿಯಬಹುದು ಎಂಬ ಪ್ರಶ್ನೆಗಳನ್ನು ವಿದೇಶಿ ಪಂಡಿತರು ಎತ್ತಿದ್ದರು. ಇಂತಹ ಟೀಕೆಗಳಿಗೆ ದಿಟ್ಟ ಹಾಗೂ ಸಮರ್ಥ ಉತ್ತರ ನೀಡುವ ನಿಟ್ಟಿನಲ್ಲಿ ಸಂವಿಧಾನ ರಚನೆಯ ಮಹತ್ವದ ಹೆಜ್ಜೆ ಇಡಲಾಯಿತು ಎಂದರು.
ಬೆನೆಗಲ್ ನರಸಿಂಗ ರಾವ್ ಅವರು ಅಂತರರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷರಾಗಿಯೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು ಸಂವಿಧಾನದ ಕರಡು ಪ್ರತಿಯೊಂದನ್ನು ಸಿದ್ಧಪಡಿಸಿದ್ದರು. 1946ರಲ್ಲಿ ಸಂವಿಧಾನ ರಚನಾ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ವಿವಿಧ ಪ್ರಾಂತ್ಯಗಳ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಂತೆ 395 ಸದಸ್ಯರಿದ್ದರು ಎಂದು ವಿವರಿಸಿದರು.
1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ವತಂತ್ರ ಅಧಿನಿಯಮಗಳೊಂದಿಗೆ ದೇಶ ವಿಭಜನೆಯಾದ ಹಿನ್ನೆಲೆಯಲ್ಲಿ ಸಂವಿಧಾನ ಸಭೆಯನ್ನು ಪುನರ್ರಚಿಸಲಾಯಿತು. 1948ರಲ್ಲಿ 299 ಸದಸ್ಯರ ಸಮಿತಿಯನ್ನು ರೂಪಿಸಲಾಯಿತು. ಇದರಲ್ಲಿ ಕೆ.ಎಂ. ಮುನ್ಷಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಸ್ವಾತಂತ್ರ್ಯ ಹೋರಾಟಗಾರರು, ಉದ್ಯಮಿಗಳು ಹಾಗೂ ವಿಜ್ಞಾನಿಗಳು ಇದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಾ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರುದ್ರಪ್ಪ ಅಂಗಡಿ, ರಾಯಚೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪವನ್ ಕಿಶೋರ್ ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ರಾಯಚೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ರಾಯಚೂರು ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ್, ತಹಶೀಲ್ದಾರ್ ಸುರೇಶ್ ವರ್ಮಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಾಹಾಳಿಂಗರಾಯ್ಯ ಬಿ., ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ತಿಮ್ಮಪ್ಪ ಬಿರಾದಾರ್, ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜೇಂದ್ರ ಜಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.