ಸಿಂಧನೂರು | ಭೀಮಾ ಕೋರೆಗಾಂವ್ 208ನೇ ವಿಜಯೋತ್ಸವ: ಭವ್ಯ ಪಥಸಂಚಲನ
ಸಿಂಧನೂರು : ಭೀಮಾ ಕೋರೆಗಾಂವ್ ಯುದ್ಧದ 208ನೇ ವಿಜಯೋತ್ಸವದ ಅಂಗವಾಗಿ, ಭೀಮಾ ಕೋರೆಗಾಂವ್ ಯುದ್ಧ ವಿಜಯೋತ್ಸವ ಆಚರಣಾ ಸಮಿತಿಯ ವತಿಯಿಂದ ನಗರದ ತಾಲೂಕು ಪಂಚಾಯತ್ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯಿಂದ, ಪಿಡಬ್ಲ್ಯೂಡಿ ಕ್ಯಾಂಪ್‌ನ ಅಂಬೇಡ್ಕರ್ ವೃತ್ತದವರೆಗೆ ಗುರುವಾರ ಜೈಭೀಮ್ ರೆಜಿಮೆಂಟ್ ಪಥಸಂಚಲನವನ್ನು ಹಮ್ಮಿಕೊಳ್ಳಲಾಯಿತು.
ನೂರಾರು ಕಾರ್ಯಕರ್ತರು ಜೈಭೀಮ್ ಘೋಷವಾಕ್ಯ ಅಂಕಿತಗೊಂಡ ನೀಲಿ ಧ್ವಜಗಳನ್ನು ಹಿಡಿದು, ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರ ಘೋಷಣೆಗಳನ್ನು ಕೂಗುತ್ತ ಪಥಸಂಚಲನ ನಡೆಸಿದರು.
ಪಥಸಂಚಲನವು ಗಾಂಧಿ ಸರ್ಕಲ್, ಕನಕದಾಸ ಸರ್ಕಲ್, ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ಹಾಗೂ ಯಲ್ಲಮ್ಮ ಗುಡಿಯ ಮುಂಭಾಗದ ಹೆದ್ದಾರಿ ಮೂಲಕ ಪಿಡಬ್ಲ್ಯೂಡಿ ಕ್ಯಾಂಪ್‌ನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂತ್ಯಗೊಂಡಿತು.
ಮಕ್ಕಳ ತಜ್ಞ ವೈದ್ಯ ಡಾ.ಕೆ.ಶಿವರಾಜ್ ಚಾಲನೆ ನೀಡಿ ಮಾತನಾಡಿ, ದಲಿತ ಸಂಘಟನೆಗಳು ಅಂಬೇಡ್ಕರ್ ಅವರ ದಾರಿಯಲ್ಲಿ ನಡೆದು ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಬೃಹತ್ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.
ಆಚರಣಾ ಸಮಿತಿಯ ಸಂಚಾಲಕ ಎಂ.ಗಂಗಾಧರ್, ಹಿರಿಯ ಹೋರಾಟಗಾರ ಡಿ.ಎಚ್.ಪೂಜಾರ್, ಚಲವಾದಿ ಮಹಾಸಭಾದ ಅಧ್ಯಕ್ಷ ಡಾ.ರಾಮಣ್ಣ ಗೋನವಾರ ಹಾಗೂ ಉಪನ್ಯಾಸಕ ನಾರಾಯಣ ಬೆಳಗುರ್ಕಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪಥಸಂಚಲನದಲ್ಲಿ ಮುಖಂಡರಾದ ಸೈಯದ್ ಹಾರೂನ್ ಸಾಹೇಬ್ ಜಾಹಗೀರ್ ದಾರ್, ಎಂ.ಮರಿಯಪ್ಪ, ಅಮರೇಶ ಗಿರಿಜಾಲಿ, ಮೌನೇಶ ಜಾಲವಾಡಗಿ, ಪ್ರವೀಣ ಧುಮತಿ, ಡಾ.ನಾಗವೇಣಿ ಪಾಟೀಲ್, ಬಸವರಾಜ ಬಾದರ್ಲಿ, ಶಂಕರ ಗುರಿಕಾರ, ನಿರುಪಾದಿ ಸಾಸಲಮರಿ, ಹೊನ್ನೂರು ಕಟ್ಟಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.