ಲಿಂಗಸುಗೂರು | ಅಮರೇಶ್ವರ ದೇವಸ್ಥಾನಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹ
ಲಿಂಗಸುಗೂರು : ತಾಲೂಕಿನ ಸುಪ್ರಸಿದ್ಧ ಆರಾಧ್ಯ ದೈವ ಅಮರೇಶ್ವರ ದೇವಸ್ಥಾನಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರು ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಅತಿ ದೊಡ್ಡ ದೇವಸ್ಥಾನವಾಗಿರುವ ಅಮರೇಶ್ವರ ದೇವಸ್ಥಾನಕ್ಕೆ ಪ್ರಸ್ತುತ ಬೆರಳೆಣಿಕೆಯಷ್ಟು ಬಸ್‌ಗಳಷ್ಟೇ ಸಂಚರಿಸುತ್ತಿದ್ದು, ಅವುಗಳೂ ನಿಗದಿತ ಸಮಯಕ್ಕೆ ಬಾರದ ಕಾರಣ ಭಕ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ಶಾಲಾ–ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳಲ್ಲಿ ಸಂಚರಿಸುತ್ತಿರುವುದರಿಂದ ಸಾಮಾನ್ಯ ಭಕ್ತರಿಗೆ ಪ್ರಯಾಣ ಕಷ್ಟವಾಗುತ್ತಿದೆ ಎಂದು ತಿಳಿಸಿದರು.
ಈ ಹಿನ್ನೆಲೆ ಕಲ್ಯಾಣ ಕರ್ನಾಟಕ ಭಾಗದಿಂದ ಸಂಚರಿಸುವ ಎಲ್ಲಾ ಬಸ್‌ಗಳನ್ನು ಅಮರೇಶ್ವರ ಕ್ರಾಸ್ ಬಳಿ ನಿಲ್ಲಿಸಬೇಕು. ಜೊತೆಗೆ ಇನ್ನೂ ಕೆಲವು ಬಸ್‌ಗಳನ್ನು ನೇರವಾಗಿ ಅಮರೇಶ್ವರ ದೇವಸ್ಥಾನವರೆಗೆ ಸಂಚರಿಸುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ಜಿಲಾನಿ ಪಾಷಾ, ರವಿಕುಮಾರ ಬರಗುಂಡಿ, ತಿಮ್ಮನಗೌಡ, ಅಜೀಂಪಾಷಾ, ಮರೆಪ್ಪ, ಮೋಸಿಸ್ ಖಾನ್, ಅಲ್ಲಾವುದ್ದೀನ್, ಬಸನಗೌಡ, ಮಲ್ಲಣ್ಣ, ಹರೀಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.