ಸಿಂಧನೂರು | ಭೂಕಬಳಿಕೆ ನಿಷೇಧದ ನೆಪದಲ್ಲಿ ಬಡವರಿಗೆ ಅನ್ಯಾಯ : ಡಿ.ಎಚ್.ಪೂಜಾರ್ ಆರೋಪ
ಸಿಂಧನೂರು, ಡಿ.31: ಭೂಕಬಳಿಕೆ ನಿಷೇಧ ಕಾಯ್ದೆಯ ನೆಪದಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಬಡವರನ್ನು ಬೀದಿಪಾಲು ಮಾಡಿದ್ದು, ಶ್ರೀಮಂತರಿಗೆ ಮಾತ್ರ ಸಡಿಲ ನಿಲುವು ತಾಳುತ್ತಿದೆ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಸಂಚಾಲಕ ಹಾಗೂ ಹೋರಾಟಗಾರ ಡಿ.ಹೆಚ್. ಪೂಜಾರ್ ಆರೋಪಿಸಿದರು.
ಬುಧವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂಧನೂರಿಗೆ ಆಗಮಿಸುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಸಿಂಧನೂರಿನಲ್ಲಿ ಎರಡು ಕಾನೂನುಗಳು ಜಾರಿಯಲ್ಲಿವೆ. ಒಂದು ಬಡವರಿಗೆ, ಮತ್ತೊಂದು ಶ್ರೀಮಂತರಿಗೆ ಎಂಬಂತಾಗಿದೆ. ಭೂಕಬಳಿಕೆ ನಿಷೇಧ ಕಾಯ್ದೆಯಡಿ ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿದ ತಾಲ್ಲೂಕು ಆಡಳಿತ, ಶ್ರೀಮಂತರ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
2020ರ ಮುಂಚೆಯೇ ಹೈಕೋರ್ಟ್ ಆದೇಶದಂತೆ ನಗರ ವ್ಯಾಪ್ತಿಯ ಸುಮಾರು 300 ಕಟ್ಟಡಗಳಿಗೆ ನೋಟಿಸ್ ನೀಡಲಾಗಿತ್ತು. ಆದರೆ ಇದುವರೆಗೆ ಆ ಕಟ್ಟಡಗಳನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಪೊಲೀಸ್ ಠಾಣೆ, ಬಸ್‌ಸ್ಟ್ಯಾಂಡ್ ಹಾಗೂ ಮುಖ್ಯರಸ್ತೆಗಳ ಸಮೀಪದಲ್ಲಿರುವ ಕಟ್ಟಡಗಳಿಗೆ ಪಿಡಬ್ಲ್ಯೂಡಿ ಇಲಾಖೆ ನೋಟಿಸ್ ನೀಡಿದ್ದರೂ ತೆರವುಗೊಳಿಸದಿರುವುದು ಏಕೆ ಎಂದು ಅವರು ಪ್ರಶ್ನಿಸಿದರು.
ಭೂಕಬಳಿಕೆ ನಿಷೇಧ ಸಂಬಂಧಿಸಿದ ನ್ಯಾಯಾಲಯದ ಆದೇಶ ಎಲ್ಲರಿಗೂ ಅನ್ವಯಿಸಬೇಕು ಎಂಬ ನಿರೀಕ್ಷೆ ಇತ್ತು. ಆದರೆ ಪ್ರಮುಖ ರಸ್ತೆಗಳಲ್ಲಿ 21 ಮೀಟರ್ ವ್ಯಾಪ್ತಿಯೊಳಗಿನ ಅನೇಕ ಕಟ್ಟಡಗಳನ್ನು ಉಳಿಸಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಪೌರಾಯುಕ್ತರು ತಮ್ಮ ಸ್ಥಾನ ಮತ್ತು ನೌಕರಿ ಭದ್ರಪಡಿಸಿಕೊಳ್ಳಲು ಬಡವರ ಹೊಟ್ಟೆಯ ಮೇಲೆ ಹೊಡೆದಿದ್ದಾರೆ ಎಂದು ಪೂಜಾರ್ ಆರೋಪಿಸಿದರು.
ಬೀದಿಬದಿ ವ್ಯಾಪಾರಸ್ಥರಲ್ಲಿ ಈಗಾಗಲೇ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಒತ್ತಡದಿಂದ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ಸಿಂಧನೂರಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಹೋರಾಟಗಾರ ನಾರಾಯಣ ಬೆಳಗುರ್ಕಿ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರ ಧರಣಿಗೆ ರೈತಪರ, ದಲಿತಪರ ಹಾಗೂ ವಿದ್ಯಾರ್ಥಿ-ಯುವಜನತೆಯ ಸಂಘಟನೆಗಳು ಬೆಂಬಲ ನೀಡಲಿವೆ ಎಂದರು.
ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘದ ಸಂಚಾಲಕರಾದ ಬಸವರಾಜ ಬಾದರ್ಲಿ, ಚಂದ್ರಶೇಖರ ಗೊರಬಾಳ, ಬಸವರಾಜ ಹಂಚಿನಾಳ, ರಮೇಶ ಪಾಟೀಲ್ ಬರ್ಗಿ, ಚಿಟ್ಟಿಬಾಬು ಬೂದಿವಾಳ ಕ್ಯಾಂಪ್, ಬಸವರಾಜ ಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ವೇಳೆ ಸ್ಥಳೀಯ ಶಾಸಕರು ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಈವರೆಗೆ ಈಡೇರಿಲ್ಲ. ಸಹಕಾರಿ ಇಲಾಖೆಯಿಂದಲೂ ಜಾಗ ಬಾಡಿಗೆಗೆ ದೊರಕಿಲ್ಲ. ಶಾಸಕರು ಸುಳ್ಳು ಭರವಸೆ ನೀಡಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಜ.2 ಮತ್ತು 3ರಂದು ಧರಣಿ ಹಮ್ಮಿಕೊಳ್ಳಲಾಗಿದ್ದು, ಖುದ್ದು ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಬಡವರ ಸಮಸ್ಯೆ ಆಲಿಸಬೇಕು.
– ಡಿ.ಹೆಚ್. ಪೂಜಾರ್, ಸಂಚಾಲಕ, ಬೀದಿಬದಿ ವ್ಯಾಪಾರಸ್ಥರ ಸಂಘ
ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿ ಒಂದು ವರ್ಷ ಕಳೆದರೂ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಶಾಸಕರ ಮನೆಗೆ 10 ಬಾರಿ ನಿಯೋಗ ತೆರಳಿ ಮನವಿ ಮಾಡಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ.
– ಖಾಸೀಂಸಾಬ್ ಕಾರ್ಪೆಂಟರ್, ಬೀದಿಬದಿ ವ್ಯಾಪಾರಸ್ಥ