ಸೆ.5ರಿಂದ ರಾಯಚೂರಿನಲ್ಲಿ ದಕ್ಷಿಣ ಭಾರತ ಬ್ಯಾಡ್ಮಿಂಟನ್ ಟೂರ್ನಿ : ಕುಮಾರ್ ಬಂಗಾರಪ್ಪ
"ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಟೂರ್ನಿ ಆಯೋಜನೆ"
ರಾಯಚೂರು: ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಯೋಗದೊಂದಿಗೆ ಸೆಪ್ಟೆಂಬರ್ 5ರಿಂದ 8ರವರೆಗೆ ರಾಯಚೂರಿನಲ್ಲಿ ದಕ್ಷಿಣ ಭಾರತ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಸರ್ಕಾರದ ಮಾಜಿ ಸಚಿವ ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಕುಮಾರ ಬಂಗಾರಪ್ಪ ಎಸ್. ತಿಳಿಸಿದರು.
ಆಗಸ್ಟ್ 15ರಂದು ನಗರದ ಮಹಾತ್ಮ ಗಾಂಧೀಜಿ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಆರು ವರ್ಷಕ್ಕೊಮ್ಮೆ ಕರ್ನಾಟಕದಲ್ಲಿ ನಡೆಯುವ ದಕ್ಷಿಣ ಭಾರತ ಮಟ್ಟದ ಈ ಬೃಹತ್ ಕ್ರೀಡಾಕೂಟವನ್ನು ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಗ್ರಾಮೀಣ ಹಾಗೂ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಯಚೂರನ್ನು ಆಯ್ಕೆ ಮಾಡಲಾಗಿದೆ ಎಂದರು.
ಟೂರ್ನಿಯಲ್ಲಿ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಕರ್ನಾಟಕ ಸೇರಿದಂತೆ 7 ರಾಜ್ಯಗಳ 250ರಿಂದ 300 ಪ್ರಮುಖ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ತರಬೇತುದಾರರು ಹಾಗೂ ತಾಂತ್ರಿಕ ತಂಡದ ಸದಸ್ಯರೂ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ರಾಯಚೂರಿನ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ 6 ಕೋರ್ಟ್‌ಗಳಲ್ಲಿ ರಾಷ್ಟ್ರೀಯ ಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಪಂದ್ಯಾವಳಿಗಳು ನಡೆಯಲಿವೆ ಎಂದರು.
ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಅವಕಾಶ
ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಧರಂಸಿಂಗ್ ಸೇರಿದಂತೆ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಸಿಇಒ, ಎಸ್ಪಿ ಹಾಗೂ ಸ್ಥಳೀಯ ಬ್ಯಾಡ್ಮಿಂಟನ್ ಸಂಸ್ಥೆಯ ಪದಾಧಿಕಾರಿಗಳು ಪಂದ್ಯಾವಳಿಯ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ.
ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ ಎಂದು ಕುಮಾರ ಬಂಗಾರಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಟೂರ್ನಿಯ ಅಧಿಕೃತ ಲೋಗೋ ಬಿಡುಗಡೆ ಮಾಡಲಾಯಿತು. ರಾಯಚೂರಿನ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಅಜಯ್ ಧರ್ಮಸಿಂಗ್, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ನಗರ ಕ್ಷೇತ್ರದ ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ್, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ, ಮಾಜಿ ಸಂಸದರಾದ ಬಿ.ವಿ.ನಾಯಕ, ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಸೇರಿದಂತೆ ಇತರರು ಇದ್ದರು