×
Ad

ರಾಯಚೂರಿನಲ್ಲಿ ‘ಕೌಶಲ್ಯಾಭಿವೃದ್ದಿ ಕೇಂದ್ರ’ ಸ್ಥಾಪಿಸಲು ಚಿಂತನೆ: ರವಿ ಭೋಸರಾಜು

‘ಹುಟ್ಟೂರಲ್ಲೆ ಉದ್ಯೋಗ ಸಿಗಬೇಕೆಂಬುದು ನನ್ನ ಕನಸು’

Update: 2025-08-23 18:43 IST

ರಾಯಚೂರು, ಆ. 26: ರಾಯಚೂರಿನ ವಿದ್ಯಾರ್ಥಿಗಳು, ಯುವಕರು ಹುಟ್ಟೂರಿನಲ್ಲಿಯೇ ಶಿಕ್ಷಣ ಪಡೆದು ಇಲ್ಲಿಯೇ ಉದ್ಯೋಗ ಮಾಡಬೇಕೆಂಬ ದೊಡ್ಡ ಕನಸಿದೆ. ಬೇರೆಡೆಗೆ ಹೋಗಿ ಉದ್ಯೋಗಕ್ಕಾಗಿ ಅಲೆದಾಟ ತಪ್ಪಿಸಲು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಠಿಸುವ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ. ಅಲ್ಲದೇ, ಶೀಘ್ರದಲ್ಲೇ ರಾಯಚೂರಿನಲ್ಲಿ ‘ಕೌಶಲ್ಯಾಭಿವೃದ್ದಿ ಕೇಂದ್ರ’ ಸ್ಥಾಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರವಿ ಭೋಸರಾಜು ತಿಳಿಸಿದ್ದಾರೆ.

ಶನಿವಾರ ರಾಯಚೂರಿನ ಪಂಡೀತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಾಗೂ ಅಂಬೇಡ್ಕರ್ ಭವನದಲ್ಲಿ ಭೋಸರಾಜು ಫೌಂಡೇಶನ್ ಹಾಗೂ 1ಎಂ1ಬಿ ಸಹಯೋಗದೊಂದಿಗೆ ಆಯೋಜಿಸಿದ್ದ ಔದ್ಯೋಗಿಕ ತರಬೇತಿ ಕಾರ್ಯಗಾರ ಹಾಗೂ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯುವಕ-ಯುವತಿಯರು ದೂರದ ಮಹಾನಗರಗಳಿಗೆ ಹೋಗಿ ಉದ್ಯೋಗ ಮಾಡುವಾಗ ಪಾಲಕರ ಕಷ್ಟ ನನಗೆ ಗೊತ್ತಿದೆ. ಈ ಪಾಲಕರ ಹಾಗೂ ಯುವಕ-ಯುವತಿಯರ ಕಷ್ಟ ತಪ್ಪಿಸಲು ಇಲ್ಲಿಯೇ ಉದ್ಯೋಗ ಸೃಷ್ಠಿಯಾಗಬೇಕು. ಹಾಗಾಗಿ ಫೌಂಡೇಷನ್‍ನಿಂದ ಉದ್ಯೋಗ ಸೃಷ್ಠಿಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ ಎಂದರು.

ಈ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರೆತ ಅಭ್ಯರ್ಥಿಗಳು ಸಂಸ್ಥೆಯೊಂದಿಗೆ ವಿಶ್ವಾಸರ್ಹತೆಗಳಿಸಿ ಉನ್ನತ ಮಟ್ಟದ ಸ್ಥಾನಕ್ಕೇರಲು ಪ್ರಮಾಣಿಕವಾಗಿ ನಿಮಗೆ ಕೆಲಸಮಾಡಿ ನಮಗೆ ಕೆಲಸ ನೀಡಿದ ಕಂಪೆನಿಯ ಘನತೆಯನ್ನು ಹೆಚ್ಚಿಸಬೇಕು. ಉದ್ಯೋಗ ಆಕಾಂಕ್ಷಿಗಳು ಕಂಪೆನಿಗಳಿಗೆ ಸಂದರ್ಶನ ನೀಡಿದಾಗ ಉದ್ಯೋಗ ಸಿಗದಿದ್ದರೆ ಚಿಂತೆ ಪಡಬೇಡಿ ನಮ್ಮಲ್ಲಿ ನಿಮ್ಮ ಸಂಪೂರ್ಣ ಡಾಟಾ ಇರುತ್ತದೆ ಮುಂದಿನ ದಿನದಲ್ಲಿ ನಿಮಗೆ ಆದ್ಯತೆ ನೀಡಲಾಗುವುದು ಎಂದರು.

ಉದ್ಯೋಗ ಮೇಳವು ಅಪಾರ ಯಶಸ್ಸನ್ನು ಕಂಡಿದೆ. ರಾಯಚೂರು ಹಾಗೂ ಸುತ್ತಮುತ್ತಲಿನ ಯುವಜನತೆಗೆ ಕೈಗಾರಿಕಾ ತಜ್ಞರೊಂದಿಗೆ ನೇರ ಸಂವಾದದ ಅವಕಾಶ ಒದಗಿಸಿ, ಅವರ ಪ್ರತಿಭೆಗೆ ತಕ್ಕ ಉದ್ಯೋಗಗಳ ದಾರಿ ತೆರೆದಿದೆ. ಈ ಮೇಳವು ಕೇವಲ ಒಂದು ಕಾರ್ಯಕ್ರಮವಲ್ಲ, ಇದು ನಮ್ಮ ಯುವಕರ ಭವಿಷ್ಯ ರೂಪಿಸುವ ಮಹತ್ವದ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಪ್ರತಿವರ್ಷ ಇಂತಹ ಉದ್ಯೋಗ ಮೇಳಗಳನ್ನು ಆಯೋಜಿಸುವ ಸಂಕಲ್ಪವನ್ನು ನಾವು ಮಾಡಿಕೊಂಡಿದ್ದೇವೆ ಎಂದರು.

ರಾಯಚೂರಿನಲ್ಲಿರುವ ಗಂಜ್ ಕೃಷಿ ಉತ್ಪನ್ನ ಮಾರುಕಟ್ಟೆ, ಹತ್ತಿ ಮಾರುಕಟ್ಟೆ, ವೈಟಿಪಿಎಸ್, ಆರ್ಟಿಪಿಎಸ್ ಇನ್ನಿತರ ಕೈಗಾರಿಕೆಯ ಉದ್ಯಮಗಳಿಂದ ನೂರಾರು ಕೋಟಿ ರೂ. ವ್ಯವಹಾರವಾಗುತ್ತಿದೆ. ಇಂತಹ ಸಂಪತ್ತಿನ ನಡುವೆ ನಮ್ಮ ಯುವಕರು ಉದ್ಯೋಗಕ್ಕಾಗಿ ಬೇರೆಯೂರಿಗೆ ಹೋಗಬೇಕಾದ ಅಗತ್ಯತೆ ಇಲ್ಲ. ಕೌಶಲ್ಯಾಭಿವೃದ್ದಿ ಕೇಂದ್ರವು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ನವೀನ ಕೌಶಲ್ಯಗಳ ಅಭ್ಯಾಸ, ವೃತ್ತಿಪರ ತರಬೇತಿ ಹಾಗೂ ದೀರ್ಘಕಾಲಿಕ ಉದ್ಯೋಗ ಸಾಮಥ್ರ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದರು.

ಈ ವೇಳೆ ವೇದಾಂತ ಶಿಕ್ಷಣ ಸಂಸ್ಥೆಯ ರಾಕೇಶ ರಾಜಲಬಂಡಿ, ಶಾಹಿನ್ ಕಾಲೇಜಿನ ಸೈಯದ್ ಆದಿಲ್, ಸಂಚಾಲಕರಾದ ದೀಪಿಕಾ, ಶೃತಿ, ರಿಸ್ವಾನ್, ಕಾಂಗ್ರೆಸ್ ಮುಖಂಡರಾದ ಜಯವಂತರಾವ್ ಪತಂಗೆ, ನರಸಿಂಹಲು ಮಾಡಗಿರಿ, ಬಿ.ರಮೇಶ್ ತಿಮ್ಮಾರೆಡ್ಡಿ, ತೇಜಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News