×
Ad

ರಾಜ್ಯದಲ್ಲಿ 11,800 ಕೋಟಿ ರೂ.ಗಳ ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿವೆ : ಕೇಂದ್ರ ಸಚಿವ ವಿ.ಸೋಮಣ್ಣ

Update: 2025-12-26 19:07 IST

ರಾಮನಗರ : ಕೇಂದ್ರದಲ್ಲಿ ಎನ್‍ಡಿಎ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಸುಮಾರು 45 ಸಾವಿರ ಕೋಟಿ ರೂ.ಗಳ ರೈಲ್ವೆ ಕಾಮಗಾರಿಗಳು ಅನುಮೋದನೆಗೊಂಡು, ಪ್ರಾರಂಭಿಸಲಾಗಿದೆ. ಪ್ರಸಕ್ತ ರಾಜ್ಯದಲ್ಲಿ 11,800 ಕೋಟಿ ರೂ.ಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ಅವುಗಳು ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಶುಕ್ರವಾರ ಬಿಡದಿ ಹಾಗೂ ರಾಮನಗರ ರೈಲು ನಿಲ್ದಾಣದಲ್ಲಿ ಅಮೃತ ಭಾರತ ನಿಲ್ದಾಣ ಯೋಜನೆ ಅಡಿ 20.96 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡಿರುವ ಆಧುನೀಕರಣ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ತುಮಕೂರು-ದಾವಣಗೆರೆ ರೈಲ್ವೆ ಮಾರ್ಗ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರಕಾರವು ಸದಾ ಬದ್ಧವಾಗಿದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಂದು ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡಿದರೆ ಸಾಧನೆ ಎಂಬ ದಿಕ್ಸೂಚಿಯನ್ನು ಕಾಣಬಹುದು. ಗ್ರಾಮ ಪಂಚಾಯಿತಿ, ಹೋಬಳಿ, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ಪ್ರಧಾನಮಂತ್ರಿಯವರ ಆಶಯವಾಗಿದೆ. ಜನರಿಗೆ ಸರಕಾರದ ಸವಲತ್ತುಗಳನ್ನು ಒದಗಿಸುವುದು ಕೇಂದ್ರ ಸರಕಾರದ ದೂರ ದೃಷ್ಠಿಯ ಚಿಂತನೆಯಾಗಿದೆ ಎಂದು ಸೋಮಣ್ಣ ತಿಳಿಸಿದರು.

ರೈಲ್ವೆ ಅಭಿವೃದ್ಧಿಯ ಸಂಕೇತ, ಸುಮಾರು ವರ್ಷಗಳಿಂದ ಕೆಲವು ಎಕ್ಸ್‌ ಪ್ರೆಸ್ ರೈಲುಗಳು ರಾಮನಗರದಲ್ಲಿ ನಿಲ್ಲಬೇಕೆಂಬುದು ಸ್ಥಳೀಯರ ಬೇಡಿಕೆಯಾಗಿತ್ತು, ಅದನ್ನು ಅರಿತು ರೈಲ್ವೆ ಇಲಾಖೆ ಜನರ ಬೇಡಿಕೆಯನ್ನು ಇನ್ನೊಂದು ತಿಂಗಳೊಳಗೆ ಈಡೇರಿಸಲಿದೆ. ರಾಮನಗರದ ರೈಲ್ವೆ ಕೆಳ ಸೇತುವೆ ಅಭಿವೃದ್ಧಿಗೆ ಸ್ಥಳೀಯ ಶಾಸಕರು ಬೇಡಿಕೆಯಿಟ್ಟಿದ್ದಾರೆ. ಈ ಕುರಿತು ಆದಷ್ಟು ಬೇಗ ಕ್ರಮಕೈಗೊಳ್ಳಲಾಗುವುದು, ರಾಮನಗರದ ರೈಲು ನಿಲ್ದಾಣದಲ್ಲಿ ನಿರೀಕ್ಷಣಾ ಕೊಠಡಿ, ವಾಹನ ನಿಲುಗಡೆ ಸ್ಥಳ ಸೇರಿದಂತೆ, ಸುಸ್ಸಜಿತ ಕಟ್ಟಡವನ್ನು ಅಭಿವೃದ್ಧಿ ಪಡಿಸಿ, ಒಂದೂವರೆ ತಿಂಗಳೊಳಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಬೆಂಗಳೂರಿಗೆ ಹತ್ತಿರವಿರುವ ರಾಮನಗರ, ತುಮಕೂರು ಜಿಲ್ಲೆಗಳು ಶರವೇಗದಲ್ಲಿ ಬೆಳೆಯುತ್ತಿದೆ. ಇದಕ್ಕೆ ಕೇಂದ್ರ ಸರಕಾರವು ಸವಲತ್ತುಗಳನ್ನು ನೀಡಲು ಸಿದ್ದವಿದೆ, ಪ್ರಯಾಣಿಕರ ಅನುಕೂಲಕ್ಕಾಗಿ ಮೆಮೊ ರೈಲುಗಳನ್ನು ಮೈಸೂರಿಗೆ ಓಡಿಸಲಾಗುತ್ತಿದೆ, ರಾಮನಗರ-ಮೈಸೂರು ಡಬ್ಲಿಂಗ್ ಲೈನ್‍ಗೆ ಕೇಂದ್ರ ಸರಕಾರದಿಂದ 825 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

2014ರಲ್ಲಿ ಮಂಜೂರಾಗಿರುವ ಎಲೆಕೆರೆ ಗೇಟ್ ಎಲ್‍ಸಿ-47 ಬದಲಾವಣೆಗೆ ಸುಮಾರು 19 ಕೋಟಿ ರೂ.ಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಬಿಡುಗಡೆ ಮಾಡಲಾಗಿದೆ. ಇದನ್ನು ಲೋಕಾರ್ಪಣೆ ಮಾಡಲಾಗುವುದು. ಇನ್ನೊಂದು ತಿಂಗಳಲ್ಲಿ ಒಡೆಯರ್ ಎಕ್ಸ್‌ ಪ್ರೆಸ್ ಹಾಗೂ ಮೈಲಾಡ್ ತೊರೆ ಎಕ್ಸ್‌ ಪ್ರೆಸ್ ರೈಲುಗಳು ರಾಮನಗರದಲ್ಲಿ ನಿಲ್ಲುಲು ಆದೇಶ ಹೊರಡಿಸಲಾಗುವುದು ಎಂದು ಸೋಮಣ್ಣ ಭರವಸೆ ನೀಡಿದರು.

ಹೆಜ್ಜಾಲ-ಚಾಮರಾಜನಗರ ರೈಲು ಯೋಜನೆಗೆ ಸ್ಥಳೀಯ ಶಾಸಕರು, ರಾಜ್ಯದ ಉಪಮುಖ್ಯಮಂತ್ರಿಯೊಂದಿಗೆ ಮಾತನಾಡಿ, ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ನೀಡಿ, ಜಿಲ್ಲಾಧಿಕಾರಿ ಮೂಲಕ ಪತ್ರ ರವಾನಿಸಿದರೆ ಯೋಜನೆ ಅನುಷ್ಠಾ ನಕ್ಕೆ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಬೆಂಗಳೂರು ಸುತ್ತಮುತ್ತಲು 101 ಮೇಲ್ಸೇತುವೆ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಸುಮಾರು 600 ಮೇಲ್ಸೇತುವೆ ನಿರ್ಮಿಸಲಾಗುವುದು. ರೈಲ್ವೆ 2ನೆ ಹಂತದ ಅಭಿವೃದ್ಧಿ ಕಾಮಗಾರಿಗಳು 14 ವರ್ಷಗಳ ಹಿಂದೆ ಶೇ.27 ರಷ್ಟು ಆಗಿತ್ತು. ಆದರೆ ಈಗ ಶೇ.98 ರಷ್ಟು ಅಭಿವೃಧ್ಧಿ ಪಡಿಸಲಾಗಿದೆ ಎಂದು ಅವರು ಹೇಳಿದರು.

ಬಿಡದಿ ರೈಲು ನಿಲ್ದಾಣ ಶೀಘ್ರದಲ್ಲೆ ಮೇಲ್ದರ್ಜೆಗೆ: ಬೆಂಗಳೂರಿನ ಒತ್ತಡ ಕಡಿಮೆ ಮಾಡಲು ಬಿಡದಿ-ರಾಮನಗರ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಮುಂದಿನ ಸಾಲಿನ ಮಾರ್ಚ್ ಅಂತ್ಯದೊಳಗೆ ಬಿಡದಿ ರೈಲು ನಿಲ್ದಾಣವನ್ನು ಆಧುನೀಕರಣಗೊಳಿಸಲು ಒತ್ತು ನೀಡಲಾಗಿದೆ ಎಂದು ಸೋಮಣ್ಣ ತಿಳಿಸಿದರು.

ಬೆಂಗಳೂರು ಸುತ್ತಮುತ್ತ 101 ಎಲ್‍ಸಿ ಗೇಟ್‍ಗಳ ಮೇಲ್ಸೇತುವೆಗಳನ್ನು ನಿರ್ಮಿಸಲು ಸ್ಥಳ ಗುರುತಿಸಿ, ಏಕಕಾಲದಲ್ಲೆ ನಿರ್ಮಿಸುವಂತೆ ಕೇಂದ್ರ ಸರಕಾರದ ಸೂಚನೆಯಾಗಿದೆ. ಇದಕ್ಕಾಗಿ ರಾಜ್ಯ ಸರಕಾರದ ಸಚಿವರು, ಶಾಸಕರು, ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗುವುದು. ಎಲ್ಲ ರೈಲುಗಳನ್ನು ಜಿಲ್ಲಾ ಕೇಂದ್ರದಲ್ಲಿ ನಿಲ್ಲಿಸಬೇಕೆಂಬುದು ಜನರ ಒತ್ತಾಯವಾಗಿದೆ. ಸ್ಥಳೀಯ ಸಂಸದರು, ಶಾಸಕರು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸೋಮಣ್ಣ ಹೇಳಿದರು.

ಜನಸಂದಣಿ ಹಾಗೂ ಬೆಂಗಳೂರಿನ ಒತ್ತಡ ಕಡಿಮೆ ಮಾಡಲು ರೈಲುಗಳನ್ನು ನಿಲ್ಲಿಸಲು ಸೂಚಿಸಲಾಗುವುದು. ಅವಶ್ಯಕತೆವಿರುವ ಕಡೆಗಳಲ್ಲಿ ಶೀಘ್ರದಲ್ಲೇ ಪಾದಚಾರಿ ಮೇಲ್ಸೆತುವೆಗಳನ್ನು ನಿರ್ಮಿಸಲು ಇಂದೇ ಆದೇಶ ಹೊರಡಿಸಲಾಗುವುದು. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಎಷ್ಟು ಮುಖ್ಯವೊ ಬಿಡದಿ ರೈಲು ನಿಲ್ದಾಣವು ಅಷ್ಟೇ ಮುಖ್ಯವಾಗಿದೆ. ಇದನ್ನು ಮೇಲ್ದರ್ಜೆಗೇರಿಸಲು ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಹೆಜ್ಜಾಲದಿಂದ ಚಾಮರಾಜನಗರಕ್ಕೆ 142 ಕಿ.ಮೀ, ಹೆಜ್ಜಾಲದಿಂದ ಕಗ್ಗಲೀಪುರ, ಹಾರೋಹಳ್ಳಿ, ಮರಳವಾಡಿ, ಕನಕಪುರ, ಹಲಗೂರು, ಮಳವಳ್ಳಿ, ಕೊಳ್ಳೇಗಾಲ, ಯಳಂದೂರು, ಚಾಮರಾಜನಗರದವರೆಗೆ ಸುಮಾರು 8 ರಿಂದ 9 ನಿಲ್ದಾಣಗಳು ಬರುತ್ತದೆ. ರಾಜ್ಯದ ಸಚಿವರು ಹಾಗೂ ಸ್ಥಳೀಯ ಶಾಸಕರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಜಾಗ ನೀಡಿದರೆ ಈ ಮಾರ್ಗದಲ್ಲಿ ರೈಲುಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗುವುದು ಎಂದು ಸೋಮಣ್ಣ ನುಡಿದರು.

ಈ ಸಂದರ್ಭದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್‍ಪುರಿಯಾ, ಹಿರಿಯ ವಿಭಾಗೀಯ ಎಂಜಿನಿಯರ್ (ಸಮನ್ವಯ) ರಾಜೀವ್ ಶರ್ಮಾ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೃಷ್ಣ ಚೈತನ್ಯ, ಉಪ ಮುಖ್ಯ ಯೋಜನಾ ವ್ಯವಸ್ಥಾಪಕ (ಗತಿ ಶಕ್ತಿ) ಶುಭಂ ಶರ್ಮಾ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸೇರಿದಂತೆ ಹಿರಿಯ ರೈಲ್ವೆ ಮತ್ತು ಜಿಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News