×
Ad

ಹಿರಿಯ ಸಾಹಿತಿ, ಚಿಂತಕ ಡಾ.ಮೊಗಳ್ಳಿ ಗಣೇಶ್ ನಿಧನ

Update: 2025-10-05 10:22 IST

ಬೆಂಗಳೂರು, ಅ.5: ಹಿರಿಯ ಸಾಹಿತಿ, ಖ್ಯಾತ ಕಥೆಗಾರ, ವಿಮರ್ಶಕ, ಚಿಂತಕ ಡಾ.ಮೊಗಳ್ಳಿ ಗಣೇಶ್(62) ರವಿವಾರ ಬೆಳಗ್ಗೆ ಹೊಸಪೇಟೆಯಲ್ಲಿ ನಿಧನರಾಗಿದ್ದಾರೆ. ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

ಮೃತರು ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1963ರ ಜುಲೈ 1ರಂದು ಚನ್ನಪಟ್ಟಣ ತಾಲೂಕಿನ ಸಂತೆಮೊಗೇನಹಳ್ಳಿಯಲ್ಲಿ ಜನಿಸಿದ ಡಾ.ಮೊಗಳ್ಳಿ ಗಣೇಶ್ ಕನ್ನಡದ ಪ್ರಮುಖ ಕಥೆಗಾರ, ಪ್ರಬಂಧಕಾರ, ಕಾದಂಬರಿಕಾರ ಮತ್ತು ವೈಚಾರಿಕ ಚಿಂತಕರಾಗಿದ್ದರು.

ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದ ಅವರು ಸದ್ಯ ಜಾನಪದ ವಿಭಾಗದ ಮುಖ್ಯಸ್ಥರಾಗಿದ್ದರು.

ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ, ದೇವರ ದಾರಿ, ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ) ಮುಂತಾದವು ಮೊಗಳ್ಳಿ ಗಣೇಶ್ ಅವರ ಕಥಾ ಸಂಕಲನಗಳು. ತೊಟ್ಟಿಲು, ಕಿರೀಟ ಅವರ ಕಾದಂಬರಿಗಳು. ‘ಬೇರು’ಅವರ ಬೃಹತ್ ಕಾದಂಬರಿ. ‘ಕಥನ' ಅವರ ಪ್ರಬಂಧ ಸಂಕಲನ. ‘ಸೊಲ್ಲು', ‘ವಿಮರ್ಶೆ', ‘ಶಂಬಾ ಭಾಷಿಕ ಸಂಶೋಧನೆ', ‘ತಕರಾರು' ಅವರ ವಿಮರ್ಶಾ ಕೃತಿಗಳು. ‘ವಿಶ್ಲೇಷಣೆ’ಎಂಬ ಅಂಕಣ ಕೂಡಾ ಜನಪ್ರಿಯ. ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ಅವರ ಚಿಂತನ ಕೃತಿ. ಗಣೇಶ್ ಇತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ತಂದರೆ, ಅವರ ಅನೇಕ ಬರಹಗಳು ಇತರ ಭಾಷೆಗಳಿಗೆ ಅನುವಾದಗೊಂಡಿವೆ.

ಮೊಗಳ್ಳಿ ಗಣೇಶ್ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ವರನಟ ಡಾ.ರಾಜಕುಮಾರ್ ಹೆಸರಿನಲ್ಲಿರುವ ಅಧ್ಯಯನ ಪೀಠಕ್ಕೆ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ, ಕರ್ನಾಟಕ ಅಕಾಡಮಿ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

ಸಿಎಂ ಸಂತಾಪ :

"ನಾಡಿನ ಪ್ರಖ್ಯಾತ ಸಾಹಿತಿ ಡಾ.ಮೊಗಳ್ಳಿ ಗಣೇಶ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಕನ್ನಡ ಸಾಹಿತ್ಯ ಲೋಕಕ್ಕೆ ಕತೆ, ಕಾವ್ಯ, ಕಾದಂಬರಿಗಳನ್ನು ನೀಡುವುದರ ಜೊತೆಯಲ್ಲಿ ಜಾನಪದವನ್ನೂ ಒಳಗೊಂಡಂತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರು ಮಾಡಿರುವ ಅಧ್ಯಯನ ಮತ್ತು ಸಂಶೋಧನೆ ಅನನ್ಯವಾದುದು. ಸತ್ಯ ನಿಷ್ಠುರಿಯಾಗಿದ್ದ ಡಾ.ಮೊಗಳ್ಳಿ ಅವರು ಖಚಿತವಾದಂತಹ ಒಲವು-ನಿಲುವುಗಳನ್ನು ಹೊಂದಿದವರು. ಅವರಿನ್ನೂ ಬಹಳಷ್ಟು ಬರೆಯುವುದಿತ್ತು. ಅವರ ಅನಿರೀಕ್ಷಿತ ನಿರ್ಗಮನದಿಂದ ಕನ್ನಡ ಸಾಹಿತ್ಯ ಬಡವಾಗಿದೆ. ಡಾ.ಮೊಗಳ್ಳಿ ಅವರ ನಿಧನಕ್ಕೆ ನನ್ನ ಸಂತಾಪಗಳು. ಅವರ ಕುಟುಂಬ ಮತ್ತು ಗೆಳೆಯರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ"

ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಚಿವ ಶಿವರಾಜ್ ತಂಗಡಗಿ ಸಂತಾಪ

ಕನ್ನಡ ಸಾಹಿತ್ಯಕ್ಕೆ ಮೊಗಳ್ಳಿ ಗಣೇಶ ಅವರ ಕೊಡುಗೆ ಗಮನಾರ್ಹ. ತಮ್ಮ ವಿಶಿಷ್ಟ ಶೈಲಿಯ ಕಥೆಗಳ ಮೂಲಕ ಅವರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದ ಅವರು ‘ಸೂರ್ಯನನ್ನು ಬಚ್ಚಿಡಬಹುದೆ?’ ಮತ್ತು ‘ಅನಾದಿ’ ಕಾವ್ಯ ಸಂಕಲನಗಳ ಮೂಲಕ ಹೆಸರು ಮಾಡಿದರು ಎಂದು ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಸಂತಾಪ ಸೂಚಿಸಿದ್ದಾರೆ.

ಮೊಗಳ್ಳಿ ಗಣೇಶ್ ಅವರ ನಿಧನದಿಂದ ಕನ್ನಡ ಸಾಹಿತ್ಯ ಒಬ್ಬ ಅತ್ಯುತ್ತಮ ಬರಹಗಾರನನ್ನು ಕಳೆದುಕೊಂಡಿದೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News