×
Ad

ರಾಮನಗರ ಜಿಲ್ಲಾಧಿಕಾರಿ ನನ್ನ ಫೋನ್ ಕರೆ ಸ್ವೀಕರಿಸಲ್ಲ: ಎಚ್.ಡಿ.ಕುಮಾರಸ್ವಾಮಿ

Update: 2026-01-25 23:22 IST

Photo: X/@hd_kumaraswamy

ಬೆಂಗಳೂರು: ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿ ನನ್ನ ಮೊಬೈಲ್ ಕರೆಯನ್ನೇ ಸ್ವೀಕರಿಸಿಲ್ಲ. ನನ್ನ ಮೊಬೈಲ್ ಸಂಖ್ಯೆ ನೋಡಿದ ಕೂಡಲೇ ತೆಗೆಯುವುದೇ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ರವಿವಾರ ಇಲ್ಲಿನ ಭೈರಮಂಗಲ ಮತ್ತು ಕಂಚುಗಾನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಮನಗರ ಅಧಿಕಾರಿಗಳಿಗೆ ನಾನು ಎಚ್ಚರಿಕೆ ಕೊಡುತ್ತಿದ್ದು, ಯಾರೋ ಒತ್ತಡ ಹೇರಿದರೂ ತಪ್ಪು ಮಾಡಬೇಡಿ. ನಿವೃತ್ತರಾದರೂ ನೀವು ತಪ್ಪಿಸಿಕೊಳ್ಳಲು ಆಗಲ್ಲ. ಈ ಸರಕಾರ ಶಾಸಕರು, ಸಚಿವರ ಒತ್ತಡಕ್ಕೆ ಜನರಿಗೆ ದ್ರೋಹ ಬಗೆಯಬೇಡಿ ಎಂದು ಹೇಳಿದರು.

ಬಿಡದಿ ಸುತ್ತಮುತ್ತಲಿನ ಫಲವತ್ತಾದ ಕೃಷಿ ಭೂಮಿಯನ್ನು ರಾಜ್ಯ ಸರಕಾರ ಅಕ್ರಮವಾಗಿ ಸ್ವಾಧೀನ ಮಾಡಿಕೊಳ್ಳುವುದಕ್ಕೆ ಬಿಡುವುದಿಲ್ಲ. ಒಂದು ಇಂಚು ಭೂಮಿ ಸ್ವಾಧೀನಕ್ಕೂ ಅವಕಾಶ ನೀಡುವುದಿಲ್ಲ ಎಂದ ಅವರು, ನನ್ನ ಸಹೋದರಿಯರ ಈ ಭೂಮಿಯನ್ನು ಉಳಿಸಿಕೊಡುವ ಭಾರ ನನ್ನದು. ಒಂದು ಇಂಚು ಭೂಮಿಯನ್ನು ಬಿಡುವುದು ಬೇಡ. ಅದು ಹೇಗೆ ಸ್ವಾಧೀನ ಮಾಡಿಕೊಳ್ಳುತ್ತಾರೋ ನೋಡೋಣ ಎಂದು ರಾಜ್ಯ ಸರಕಾರಕ್ಕೆ ಸವಾಲು ಹಾಕಿದರು.

ನೀವು ಯಾರೂ ಹೆದರಬೇಕಿಲ್ಲ, ನಿಮ್ಮ ಜತೆ ನಾನಿದ್ದೇನೆ. ಅದೇನೆ ಬಂದರೂ ಹೆದರಿಸೋಣ. ಸರಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಜನರು ಶಾಶ್ವತ. ಸರಕಾರಗಳು ಜನಾಭಿಪ್ರಾಯಕ್ಕೆ ಮಣಿಯಬೇಕು. ಇಲ್ಲವಾದರೆ ಹೇಗೆ ಬುದ್ಧಿ ಕಲಿಸಬೇಕು ಎಂಬುದು ಜನರಿಗೆ ಗೊತ್ತಿದೆ. ಇನ್ನೊಂದೆಡೆ, ಕೆಲವರು ಸ್ವಾಧೀನದ ಪರವಾಗಿದ್ದಾರೆ ಎನ್ನುವ ಮಾತು ಕೇಳಿದೆ. ಅದು ಒಳ್ಳೆಯದಲ್ಲ. ಸರಕಾರ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಈ ಫಲವತ್ತಾದ ಭೂಮಿಯನ್ನು ಅಗ್ಗದ ಬೆಲೆಗೆ ಹೊಡೆದುಕೊಳ್ಳಲು ಹೊರಟಿದೆ. ಕೆಲವರು ಈಗಾಗಲೇ ಬೇನಾಮಿಗಳ ಹೆಸರಿನಲ್ಲಿ ಲ್ಯಾಂಡ್ ಬ್ಯಾಂಕ್ ಮಾಡಿಕೊಂಡು ದರೋಡೆ ಮಾಡಲು ಹೊರಟಿದ್ದಾರೆ. ಅವರು ಜನರಿಗೆ, ಸರಕಾರಕ್ಕೆ ಮೋಸ, ವಂಚನೆ ಮಾಡುತ್ತಿದ್ದಾರೆ. ಇಂತಹವರನ್ನು ಬೀದಿಯಲ್ಲಿ ನಿಲ್ಲಿಸುವ ದಿನಗಳು ದೂರವಿಲ್ಲ ಕುಮಾರಸ್ವಾಮಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News