×
Ad

ಮರೆಯೋದುಂಟೆ ಮೈಸೂರ ದೊರೆಯ...

Update: 2026-01-30 12:11 IST

ನಾಟಕ: ಆಳಿದ ಮಾಸ್ವಾಮಿಗಳು

ರಚನೆ: ರವಿಕಿರಣ್ ಆರ್. ಬಳ್ಳಗೆರೆ

ಬೆಳಕು: ಕೃಷ್ಣಕುಮಾರ್ ನಾರ್ಣಕಜೆ

ಪ್ರಸಾಧನ: ಅಶ್ವಥ್ ಕದಂಬ, ನಾಗೇಶ್

ಹಾಡುಗಳು ರಚನೆ, ಸಂಗೀತ: ಗೋವಿಂದಸ್ವಾಮಿ ಗುಂಡಾಪುರ, ಹನಸೋಗೆ ಸೋಮಶೇಖರ್, ಸೋಸಲೆ ಗಂಗಾಧರ್, ನಾಗೇಶ್ ಕಂದೇಗಾಲ.

ಸಂಗೀತ ಸಾಂಗತ್ಯ: ಕೃಷ್ಣ ಚೈತನ್ಯ, ಸುನೀಲ್ ನಾಯಕ, ವಿಶ್ವನಾಥ್ ಚಂಗಚಹಳ್ಳಿ

ರಂಗ ಪರಿಕರ: ಮಧುಸೂದನ್ (ನೀನಾಸಂ)

ಮುಖ್ಯ ಪಾತ್ರಧಾರಿಗಳ ವಸ್ತ್ರವಿನ್ಯಾಸ: ನಂದನಕುಮಾರ್

ನಾಟಕದ ವಸ್ತ್ರವಿನ್ಯಾಸ, ವಿನ್ಯಾಸ, ನಿರ್ದೇಶನ: ದಿನೇಶ್ ಚಮ್ಮಾಳಿಗೆ

ರಂಗಸಜ್ಜಿಕೆ: ಅಯ್ಯಣ್ಣ, ಸುದೀಪ್, ಚಂದ್ರಶೇಖರ್, ವಿಶ್ವನಾಥ್

‘‘ಸಾವಿರಾರು ವರುಷ ಕಳೆದರೂ ಸವೆಯದಂಥ ಸಾಧನೆಯ

ಹಗಲಿರುಳು ಪರಿಹರಿಸಿ ಬಹುಜನರ ವೇದನೆಯ

ಆಳರಸರಿಗೆ ಮಾದರಿಯಾದ ರಾಜಾ ಯೋಗಿಯ

ಮರೆಯೋದುಂಟೆ ಮೈಸೂರ ದೊರೆಯ

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯಾ...’’

ಈ ಹಾಡನ್ನು ಮೈಸೂರು ಭಾಗದಲ್ಲಿ ಕೇಳದವರೇ ಇಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ ಈ ಹಾಡೂ ಈಗಲೂ ಜನಪ್ರೀತಿ ಗಳಿಸಿದೆ. ಇದನ್ನು ಗಾಯಕರಾದ ಜನ್ನಿ, ದೇವಾನಂದ್ ವರಪ್ರಸಾದ್ ಸೇರಿದಂತೆ ಅನೇಕರು ಹಾಡಿದ್ದಾರೆ, ಹಾಡುತ್ತಿದ್ದಾರೆ. ಇದು ‘ಆಳಿದ ಮಾಸ್ವಾಮಿಗಳು’ ನಾಟಕದಲ್ಲೂ ಇದೆ. ಇದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ ನಾಟಕ. ಇದು ಮೈಸೂರು ರಂಗಾಯಣದಲ್ಲಿ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಜನವರಿ 16ರಂದು ರಂಗಾಯಣದ ವನರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಬಹುರೂಪಿಯಲ್ಲಿ ಈ ನಾಟಕದ ಪ್ರದರ್ಶನಕ್ಕೆ ಮುಖ್ಯ ಕಾರಣ; ಮೀಸಲಾತಿಯನ್ನು ಜಾರಿಗೆ ತಂದವರು ನಾಲ್ವಡಿಯವರು. ‘ಈ ಜನಗಳು ತಮ್ಮ ಮನೆಯೊಳಗೆ ಸೇರಿಸಿಕೊಳ್ಳೋಕೆ ಹಿಂದೆಮುಂದೆ ನೋಡುವಾಗ ಆ ಕಾಲದಲ್ಲೇ ಅರಮನೆಯೊಳಗೆ ಬಿಟ್ಟುಕೊಂಡಿದ್ರು’ ಎನ್ನುವ ದಲಿತರ ಮೂಲಕ ನಾಲ್ವಡಿಯವರು ಮೀಸಲಾತಿಯನ್ನು, ಈ ಮೂಲಕ ಜನಸಾಮಾನ್ಯರಿಗೂ ಅರಮನೆ ಎಂಬುದನ್ನು ಸಾಬೀತುಪಡಿಸಿದ್ದರು. ಹೀಗಾಗಿ ‘ಬಹುರೂಪಿ’ಗೆ ತಮ್ಮ ನಾಟಕ ಸೂಕ್ತ ಆಯ್ಕೆಯೆಂದು ಸಾಬೀತುಪಡಿಸಿದವರು ಈ ನಾಟಕದ ನಿರ್ದೇಶಕ ದಿನೇಶ್ ಚಮ್ಮಾಳಿಗೆ.

ಇದರಲ್ಲಿ ಅಭಿನಯಿಸಿದ ಎಪ್ಪತ್ತು ಕಲಾವಿದರಲ್ಲಿ ಅನೇಕರು ಹೊಸಬರು. ವಿವಿಧ ಉದ್ಯೋಗದೊಂದಿಗೆ ರಂಗಭೂಮಿ ನಂಟನ್ನು ಗಳಿಸಿಕೊಂಡು, ಬೆಳೆಸಿಕೊಂಡು ಬಂದ ಅವರನ್ನು ಬಳಸಿಕೊಂಡು ಈ ನಾಟಕ ಕಟ್ಟಿದ ದಿನೇಶ್ ಚಮ್ಮಾಳಿಗೆ ಅವರನ್ನು ಅಭಿನಂದಿಸುವೆ. ಅದರಲ್ಲೂ ತಮ್ಮ ನಾಟಕ ಕಟ್ಟುವ ಮೊದಲು ತಮ್ಮ ಕಲಾವಿದರಿಗೆ ಮೈಸೂರಿನ ಅಂಬಾವಿಲಾಸ ಅರಮನೆ, ಜಗನ್ಮೋಹನ ಅರಮನೆ, ವಸ್ತುಸಂಗ್ರಾಹಲಯವನ್ನು ದಿನೇಶ್ ತೋರಿಸಿದ್ದಾರೆ. ಅದರಲ್ಲೂ ಅರಮನೆಯ ದರ್ಬಾರ್ ಹಾಲ್, ಸಿಂಹಾಸನವನ್ನು ತೋರಿಸಿ ಕಲಾವಿದರಿಗೆ ವಿವರಿಸಿದ್ದಾರೆ. ತಿಂಗಳವರೆಗೆ ಮೈಸೂರಿನ ಕಲಾಮಂದಿರದ ಆವರಣದಲ್ಲಿ ತಾಲೀಮು ನಡೆಸಿದ್ದರು. ಈಗಲೂ ಈ ನಾಟಕದ ತಾಲೀಮಿಗೆ ಕಲಾಮಂದಿರದ ಆವರಣವನ್ನು ಅವರು ಮೊರೆಹೋಗುತ್ತಾರ. ಇಂಥ ಮಹತ್ವಾಕಾಂಕ್ಷಿಯ ಈ ನಾಟಕದ ಮೂಲಕ ಈ ತಲೆಮಾರಿನವರಿಗೆ ನಾಲ್ವಡಿಯವರ ಸಾಧನೆ ಪರಿಚಯಿಸಬೇಕೆಂಬ ಅವರ ಉದ್ದೇಶ ಈಡೇರಿದೆ. ಇದನ್ನು ನಾಲ್ವಡಿ ಸೋಷಿಯಲ್ ಕಲ್ಚರಲ್ ಆಂಡ್ ಎಜುಕೇಷನಲ್ ಟ್ರಸ್ಟ್ ಮೂಲಕ ಅವರು ಪ್ರಸ್ತುತಪಡಿಸುತ್ತಿದ್ದಾರೆ.

ಬಾಲ್ಯದ ನಾಲ್ವಡಿಯವರಿಂದ ಹಿಡಿದು ಅವರು ಮಹಾರಾಜರಾಗಿ ಆಡಳಿತ ನಡೆಸಿದ ಕುರಿತ ನಾಟಕವಿದು. ಕನ್ನಂಬಾಡಿ ಅಣೆಕಟ್ಟೆ ಕಟ್ಟುವಾಗ ಕೆಲಸಗಾರರನ್ನು ಪ್ರವಾಹದಿಂದ ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕೊನೆಗೆ ಮುಳುಗಿ ಪ್ರಾಣ ಬಿಟ್ಟ ಬ್ರಿಟಿಷ್ ಕ್ಯಾಪ್ಟನ್ ನಿಕೊಲಸ್ ದಾಸ್ ಅವರಿಂದ ಹಿಡಿದು ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳನ್ನು ಸ್ಮರಿಸುವ ನಾಟಕವಿದು. ಅದರಲ್ಲೂ ನೊಂದವರ ನೋವಿಗೆ ಸ್ಪಂದಿಸುತ್ತಿದ್ದ, ಮಹಾರಾಜರಾಗಿ ಮೆರೆಯದೆ ಸಾಮಾನ್ಯರ ಒಡೆಯರಾದ ನಾಲ್ವಡಿ ಅವರ ಬಗ್ಗೆ ಹಳೆಯ ಮೈಸೂರು ಭಾಗದಲ್ಲಿ ಈಗಲೂ ಅತ್ಯಂತ ಗೌರವ. ಮಹಾತ್ಮಾ ಗಾಂಧೀಜಿ ಅವರಿಂದ ‘ರಾಜರ್ಷಿ’ ಎಂದು ಕರೆಸಿಕೊಂಡ, ಬ್ರಿಟಿಷರಿಂದಲೂ ಗೌರವಕ್ಕೆ ಪಾತ್ರರಾದ, ಅಭಿವೃದ್ಧಿಯ ಹರಿಕಾರರಾದ ನಾಲ್ವಡಿಯವರ ಕನ್ನಂಬಾಡಿ ಅಣೆಕಟ್ಟೆ ಕಟ್ಟದಿದ್ದರೆ ಈ ಭಾಗ ನೀರಾವರಿ ಆಗುತ್ತಿರಲಿಲ್ಲ. ಇದರಿಂದ ಕುಡಿಯುವ ನೀರಿಗೆ ಮತ್ತು ಬೆಳೆಗೆ ಕೊರತೆಯಾಗದಂತೆ ನೋಡಿಕೊಂಡರು.

ಈ ನಾಟಕದ ಮೊದಲ ದೃಶ್ಯದಲ್ಲಿ ತಮಟೆ ಬಡಿಯುವವರೂ ದೇವಸ್ಥಾನ ಬಾಗಿಲ ಬಳಿ ಬರುವುದನ್ನು ಕಂಡಾಗ ಊರವರು ‘‘ಕೇರಿಯವರೂ ದೇವಸ್ಥಾನದ ಒಳಗೆ ಬರುವ ಹಾಗಿದೆ’’ ಎಂದು ವಿರೋಧ ವ್ಯಕ್ತಪಡಿಸುತ್ತಾರೆ. ಇದಕ್ಕೂ ಮೊದಲು ‘’ನೀವಿದ್ರೆ ಹಬ್ಬ’’ ಎಂದುದನ್ನು ಕೇರಿಯವರು ನೆನಪಿಸುತ್ತಾರೆ. ಆಗ ‘‘ನಮ್ಮ ತಾತ, ಮುತ್ತಾತನ ಕಾಲದಲ್ಲಿ ಹೀಗಿರಲಿಲ್ಲ. ನಾಲ್ವಡಿಯವರು ತಮ್ಮ ಅರಮನೆಗೆ ಪ್ರವೇಶ ಕೊಟ್ಟಿದ್ದರು’’ ಎಂಬುದನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಹೀಗೆ ಆರಂಭವಾಗಿ ನಾಲ್ವಡಿಯವರ ಸಾಧನೆಗಳ ದೃಶ್ಯಗಳು ಅನಾವರಣಗೊಳ್ಳುತ್ತವೆ. ಹೀಗೆ ಹಿಂದುಳಿದವರ ಬಾಳಿಗೆ ಬೆಳಕಾದ ನಾಲ್ವಡಿಯವರ ಕುರಿತ ನಾಟಕ. ಆದರೆ ನಾಟಕ ಕುರಿತ ಟಿಪ್ಪಣಿಯಲ್ಲಿ ‘ಇದು ನಾಟಕವಾ? ಇದು ಜೀವನ ಚರಿತ್ರೆಯಾ? ಇದು ದೃಶ್ಯಗಳನ್ನು ಹೊಲಿದು ಕಟ್ಟಿದ ರೂಪಕವಾ? ಅಸಲು ಇದಕ್ಕೊಂದು ಹೆಸರು ಕಟ್ಟಿ ಒಂದು ವಿಭಾಗಕ್ಕೆ ಸೇರಿಸಲು ಸಾಧ್ಯವಾಗದು. ಇದು ನಾಲ್ವಡಿ ಎನ್ನುವ ನಮ್ಮೊಳಗಿನ ಅಂತಃಸತ್ವದ ಸಾಕ್ಷಿಪ್ರಜ್ಞೆಯ ಅವತರಿಣಿಕೆ ಅಷ್ಟೆ. ಇದು ಒಂದೊಂದು ಪ್ರದರ್ಶನಕ್ಕೂ ಬದಲಾಗುವ, ಬದಲಾಗಬೇಕಿರುವ ಜೀವಂತ ಹೊನಲು ಅವರ ಋಣಭಾರ ಹೊತ್ತಿರುವ ಸಕಲರೂ ಅನುದಿನವೂ ನೆನೆಯಬೇಕಿದ್ದ ಕಾಲಘಟ್ಟದಲ್ಲಿ ಕೇವಲ ಜೂನ್ 4ರಂದು ಮಾತ್ರ ಅವರನ್ನು ನೆನೆದು ಅವರ ಹೆಸರಿಗೊಂದು ಜಯಂತಿ ಮಾಡಿ, ಮುಗಿಸುವ ವ್ಯಕ್ತಿತ್ವವಲ್ಲ. ಅದು ನಿತ್ಯ ನಿರಂತರ ನಿತ್ಯೋತ್ಸವ. ದಿನಂಪ್ರತಿ ದೇದೀಪ್ಯಮಾನವಾಗಿ ಪ್ರಜ್ವಲಿಸುವ ಜೀವ ಜ್ಯೋತಿ. ಅದು ಅಖಂಡ ಪ್ರಭೆಯಲ್ಲಿ ದಾರಿ ಕಾಣುತ್ತಿರುವ ಕರುನಾಡಿನ ಕೋಟಿ ಕೋಟಿ ಮನಸ್ಸುಗಳಲ್ಲಿ ಅಚ್ಚೊತ್ತಬೇಕಾದ ತೇಜಸ್ಸು’ ಎನ್ನುವುದು ದಿಟ.

ಬಾಲ್ಯದ ನಾಲ್ವಡಿಯವರಿಂದ ಅವರು ಬೆಳೆದ ಬಗೆಯ ಜೊತೆಗೆ ಜಾತಿ, ಮತ, ಧರ್ಮ, ರಾಜಕೀಯ ಮೀರಿ ನಾಡಿಗೆ ಕೊಟ್ಟ ಕೊಡುಗೆಗಳನ್ನು ಸ್ಮರಿಸುವ ನಾಟಕವಿದಾಗಿದೆ. ಹಾಡುಗಳು, ಸಂಗೀತ ಚೆನ್ನಾಗಿದೆ. ಹೊಸ ಕಲಾವಿದರ ಉತ್ಸಾಹ ದೊಡ್ಡದು. ಆದರೆ ಇನ್ನಷ್ಟು ತಾಳ್ಮೆಯಿಂದ ಕಲಾವಿದರು ಅಭಿನಯಿಸಬೇಕು ಅಂದರೆ ನಾಟಕವಾಡುತ್ತಿದ್ದೇವೆ ಎಂದು ತಿಳಿಯದೆ ಪಾತ್ರಗಳನ್ನು ಅನುಭವಿಸಿ ಅಭಿನಯಿಸಿದರೆ ಇನ್ನಷ್ಟು ಯಶಸ್ವಿಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಗಣೇಶ ಅಮೀನಗಡ

contributor

Similar News