ಹೊಸ ಪಠ್ಯ; ಪಾಠದೊಂದಿಗೆ ರಂಗಕ್ಕೆ ಹಳೆಯ ನಾಟಕಗಳು

Update: 2026-08-07 12:32 IST

ನಾಟಕ: ಉರಿಯ ಉಯ್ಯಾಲೆ

ರಚನೆ: ಎಚ್.ಎಸ್.ವೆಂಕಟೇಶಮೂರ್ತಿ

ರಂಗಪಠ್ಯ, ನಿರ್ದೇಶನ: ಡಿ. ಶೀಲಾಕುಮಾರಿ

ಸಂಗೀತ: ಶ್ರೀನಿವಾಸ ಭಟ್ (ಚೀನಿ), ಶಾಲೋಂ ಸನ್ನುತ, ಮುನ್ನ ಸುಂದರೇಶ್, ಶ್ರೀಕಂಠಸ್ವಾಮಿ

ನೃತ್ಯ: ವಿದುಷಿ ಅನುಷಾ

ರಂಗಸಜ್ಜಿಕೆ: ಖಾಜು ಜಿ.ಗುತ್ತಲ

ಬೆಳಕು: ಜೀವನ್‌ಕುಮಾರ್ ಹೆಗ್ಗೋಡು

ತಂಡ: ಚಾರು ಸಾಂಸ್ಕೃತಿಕ ಪ್ರತಿಷ್ಠಾನ

ರಂಗದ ಮೇಲೆ: ಡಿ. ಶೀಲಾಕುಮಾರಿ, ಲಕ್ಷ್ಮೀ ಕಾರಂತ

ಹೆಣ್ಣಿನ ಮೇಲಾಗುವ ಶೋಷಣೆ, ಅವಮಾನ, ಇನ್ನೊಬ್ಬರ ಸಂಚಿಗೆ ಬಲಿಯಾಗುವುದು... ಈ ಬಗೆಯ ನಾಟಕಗಳು ಸಾಕಷ್ಟು ರಂಗಕ್ಕೇರುತ್ತಲೇ ಇರುತ್ತವೆ. ಕಳೆದ ವಾರ ಮೈಸೂರಿನ ಕಿರುರಂಗಮಂದಿರದಲ್ಲಿ ಪ್ರದರ್ಶನಗೊಂಡ ಎರಡೂ ನಾಟಕಗಳು ಹೆಣ್ಣಿನ ಕುರಿತೇ ಇದ್ದವೆಂಬುದು ಮುಖ್ಯ ಮತ್ತು ಅವರೆಡಕ್ಕೂ ಅಂತರಪಠ್ಯ ಸಂಬಂಧವಿದೆ ಎನ್ನಬಹುದು.

ಮೊದಲನೆಯದು ಪ್ರದರ್ಶನಗೊಂಡ ಎಚ್.ಎಸ್. ವೆಂಕಟೇಶಮೂರ್ತಿ ಅವರ ‘ಉರಿಯ ಉಯ್ಯಾಲೆ’ ನಾಟಕವನ್ನು ನಿವೃತ್ತ ಪ್ರಾಧ್ಯಾಪಕಿ ಡಿ. ಶೀಲಾಕುಮಾರಿ ಅವರು ರಂಗಪಠ್ಯ ರಚಿಸುವುದರ ಜೊತೆಗೆ ನಿರ್ದೇಶಿಸಿ ಅವರೇ ಅಭಿನಯಿಸಿದರು ಕೂಡಾ. ಅವರೊಂದಿಗೆ ಎಂ.ಎಸ್. ಲಕ್ಷ್ಮೀ ಕಾರಂತ ಅಭಿನಯಿಸಿದರು. ಇದು ಶೀಲಾಕುಮಾರಿ ಅವರ ಚಾರು ಸಾಂಸ್ಕೃತಿಕ ಪ್ರತಿಷ್ಠಾನದ ನಾಟಕ. ಈ ಏಕವ್ಯಕ್ತಿ ನಾಟಕವನ್ನು ಈಗಾಗಲೇ ಆರ್.ಟಿ. ರಮಾ, ಲಕ್ಷ್ಮೀ ಚಂದ್ರಶೇಖರ್ ಪ್ರಸ್ತುತಪಡಿಸಿದ್ದಾರೆ. ಅಲ್ಲದೆ ಮೈಸೂರು ರಂಗಾಯಣದ ಕಲಾವಿದೆ ಬಿ.ಎನ್. ಶಶಿಕಲಾ ಅವರು ತಮ್ಮದೇ ಶಶಿ ಥಿಯೇಟರ್ ತಂಡಕ್ಕೆ ಈ ನಾಟಕವನ್ನು ಏಳೆಂಟು ವರ್ಷಗಳ ಹಿಂದೆ ನಿರ್ದೇಶಿಸಿದ್ದರು. ಗೃಹಿಣಿಯರ ಜೊತೆಗೆ ಕಾಲೇಜು ವಿದ್ಯಾರ್ಥಿನಿಯರು ಅಭಿನಯಿಸಿದ್ದರು. ಮತ್ತೆ ಮೂರು ವರ್ಷಗಳ ಹಿಂದೆ ಈ ನಾಟಕ ಪ್ರದರ್ಶನಗೊಂಡಾಗ ಹಳೆಯ ತಂಡದಲ್ಲಿದ್ದವರೊಂದಿಗೆ ಹೊಸಬರೂ ಸೇರಿಕೊಂಡರು. ಅವರು; ಸರಳಾ ನಟರಾಜ, ಜಯಶ್ರೀ ರವಿಕುಮಾರ್, ಆರ್. ಶ್ರುತಿ, ಎಂ. ವಾಸ್ತುಶಿಲ್ಪಿ, ಸುಮಾ ಪ್ರಶಾಂತ್, ಎಚ್.ಎಚ್. ಸುನೀತಾ, ಕಾವ್ಯಾ, ಅಕ್ಷಯರಾವ್ ಹಾಗೂ ದೀಪ್ತಿ ಶೆಟ್ಟಿ. ಹೀಗೆ ನಾಟಕವೊಂದು ಮತ್ತೆ ಮತ್ತೆ ಪ್ರಸ್ತುತಿಗೊಳ್ಳುವುದು ಪ್ರಸ್ತುತವಾದ ಪರಿಣಾಮ. ಹಳೆಯ ನಾಟಕಗಳು ಹೊಸ ಪಠ್ಯದೊಂದಿಗೆ ಬರುತ್ತಲೇ ಇರುತ್ತವೆ. ಪಾಠವನ್ನೂ ಕಲಿಸುತ್ತವೆ. ನಾವು ಕಲಿಯುವುದಿಲ್ಲವಷ್ಟೇ!

ಈ ನಾಟಕ ಆರಂಭವಾಗುವುದೇ ವಯಸ್ಸಾದ ದ್ರೌಪದಿಯು ಮುಡಿ ಬಿಚ್ಚಿಕೊಂಡು ಮಳೆಗೆ ಮೈಯೊಡ್ಡುವ ಮೂಲಕ. ನಂತರ ಕನ್ನಡಿಯ ಮುಂದೆ ನಿಂತುಕೊಂಡು ದುಶ್ಯಾಸನನ ರಕ್ತ ತನ್ನ ಕೂದಲ ಬುಡಕ್ಕೆ ಇಳಿದುಬಿಟ್ಟಿದೆ ಎಂದುಕೊಳ್ಳುತ್ತಾಳೆ. ಬೆಳಗ್ಗೆದ್ದು ಹಿಮಾಲಯಕ್ಕೆ ಹೋಗುವ ಯೋಜನೆ ನೆನೆದುಕೊಂಡು ಮಲಗಿದಾಗ ನೆನಪುಗಳ ಮೆರವಣಿಗೆ ಸಾಗುತ್ತದೆ. ಆಗ ವಯಸ್ಸಾದ ದ್ರೌಪದಿಯ ಪಾತ್ರಧಾರಿಯಾದ ಶೀಲಾಕುಮಾರಿ ಬದಲು ಲಕ್ಷ್ಮೀ ಕಾರಂತ ಪ್ರವೇಶಿಸುತ್ತಾರೆ; ನೆನಪುಗಳ ಪ್ರವೇಶವೆಂದು ಕನ್ನಡಿಯ ಮೂಲಕ ಕಾಲಿಟ್ಟಿದ್ದು ಚೆನ್ನಾಗಿದೆ. ಬಾಲ್ಯದ ನೆನಪುಗಳಲ್ಲಿ ತಾರತಮ್ಯವನ್ನು ಪ್ರಶ್ನಿಸುತ್ತಾಳೆ ಚಿಕ್ಕ ದ್ರೌಪದಿ. ಕೂದಲು ಹರಡಿಕೊಂಡು ಓಡಾಡಿದ್ರೆ ಮನೆತನಕ್ಕೆ ಒಳ್ಳೆಯದಲ್ಲವೆಂದು ಅವಳ ಅಮ್ಮ ಹೇಳಿದ್ದಕ್ಕೆ ಯಾರು ಹಾಗೆ ಹೇಳಿದ್ದು? ಎಂದು ಪ್ರಶ್ನಿಸಿದ್ದಕ್ಕೆ ಅವರಮ್ಮ, ಅದಕ್ಕೂ ಮೊದಲು ಅವರಮ್ಮ... ಹೀಗೆ ಪರಂಪರೆಯೇ ಇದೆ. ನಂತರ ಸ್ವಯಂವರಕ್ಕೆ ಸಜ್ಜಾಗುವ ದ್ರೌಪದಿಗೆ ಎದುರು ಕರ್ಣ ಬಂದು ಮತ್ಸ್ಯಯಂತ್ರ ಭೇದಿಸಲು ಹೊರಟಾಗ ‘ಸೂತ ಸೂತ ಸೂತ’ ಎಂದು ಕುಳಿತವರಲ್ಲೊಬ್ಬರು ಕೂಗಿದಾಗ ಕರಗುತ್ತಾನೆ. ನಂತರ ಸಭೆಯಿಂದಲೇ ನಿರ್ಗಮಿಸುತ್ತಾನೆ. ಆಮೇಲೆ ಬರುವ ಅರ್ಜುನ ಮತ್ಸ್ಯಯಂತ್ರ ಭೇದಿಸುತ್ತಾನೆ. ಆದರೆ ಕುಂತಿ ಐವರಿಗೂ ಪತ್ನಿ ಆಗಬೇಕು ಎನ್ನುತ್ತಾಳೆ. ಆಗ ದ್ರೌಪದಿಗೆ ಉಳಿದ ನಾಲ್ವರನ್ನು ಬೇಡವೆಂದರೆ ಅರ್ಜುನನೂ ಕೈ ತಪ್ಪಬಹುದು ಎನ್ನುವ ಆತಂಕ. ಯುಧಿಷ್ಠಿರನ ಗಾಂಭೀರ್ಯ, ಭೀಮನ ದೇಹಸಂಪತ್ತು, ನಕುಲ-ಸಹದೇವರ ಸೌಂದರ್ಯಕ್ಕೆ ಗುಟ್ಟಾಗಿ ಮನಸೋತೆನಾ ಎಂದೂ ಪ್ರಶ್ನಿಸಿಕೊಳ್ಳುತ್ತಾಳೆ. ಆನಂತರ ವಸ್ತ್ರಾಪಹರಣ ದೃಶ್ಯ; ಮಾನ ತೆಗಿತೀನಿ ಎಂದ ದುಶ್ಯಾಸನ, ಮಾನ ಕಾಪಾಡುವೆ ಎನ್ನುವ ಕೃಷ್ಣ. ದುಶ್ಯಾಸನ ಸೀರೆ ಸೆಳೆದು ಹಾಕಿದ್ದರೆ ಬೆತ್ತಲೆ ಆಗುತ್ತಿದ್ದುದು ತನ್ನ ಗಂಡಂದಿರು ಎನ್ನುತ್ತಾಳೆ ದ್ರೌಪದಿ. ಒಂದು ಸಂಸ್ಕೃತಿ, ಒಂದು ಯುಗ, ಒಂದು ಸಮಾಜ ತೋರಿಸುವುದಕ್ಕೆ ಬೆತ್ತಲಾಗಿ ನಿಲ್ಲುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸುತ್ತಾಳೆ. ಈ ದೃಶ್ಯದೊಂದಿಗೆ ಲಕ್ಷ್ಮೀ ಕಾರಂತ ಮರೆಯಾಗಿ ಮತ್ತೆ ಶೀಲಾಕುಮಾರಿ ಅವರು ಬಂದು ನಮ್ಮಣ್ಣ ಕೃಷ್ಣ ಕಾಪಾಡಿದ ಸೀರೆ ಎನ್ನುವುದರ ಜೊತೆಗೆ ಈ ಭೂಮಿ ಎಂದೂ ಬೆತ್ತಲೆಯಾಗುವುದಿಲ್ಲ ಎನ್ನುವಲ್ಲಿಗೆ ನಾಟಕ ಕೊನೆಯಾಗುತ್ತದೆ. ಕೃಷ್ಣನನ್ನು ರಂಗದ ಮೇಲೆ ತೋರಿಸದೆ ನವಿಲುಗರಿಯ ಚಿತ್ರವನ್ನು ತೋರಿಸಿದ್ದು ಚೆನ್ನಾಗಿದೆ. ವಯಸ್ಸಾದ ದ್ರೌಪದಿಯ ಪಾತ್ರಕ್ಕೆ ಶೀಲಾಕುಮಾರಿ ಅವರ ಸಂಯಮದ ಅಭಿನಯವಿದ್ದರೆ, ಹರೆಯದ ದ್ರೌಪದಿಯ ಪಾತ್ರಕ್ಕೆ ಲಕ್ಷ್ಮೀ ಕಾರಂತ ಜೀವ ತುಂಬುತ್ತಾರೆ. ನೋವು, ಸಂಕಟ, ರೊಚ್ಚು, ಕೆಚ್ಚು ಭಾವಗಳನ್ನು ಸಮರ್ಥವಾಗಿ ಹಿಡಿದಿಟ್ಟಿದ್ದಾರೆ. ಭಿನ್ನ ವಯೋಮಾನದ ದ್ರೌಪದಿಯ ತೊಳಲಾಟ, ತಾಕಲಾಟಗಳನ್ನು ಒಂದು ಗಂಟೆಯಲ್ಲಿ ಸಮರ್ಥವಾಗಿ ಹಿಡಿದಿಡುವ ನಾಟಕವಿದು.

* * *

ಇನ್ನೊಂದು ನಾಟಕ ‘ಒಥೆಲೊ’. ಷೇಕ್ಸ್‌ಪಿಯರ್‌ನ ಮೂಲ ನಾಟಕವನ್ನು ಕೆ.ಪಿ. ವಾಸುದೇವನ್ ಕನ್ನಡಕ್ಕೆ ಅನುವಾದಿಸಿದ್ದು, ಹಿರಿಯ ರಂಗಕರ್ಮಿ ಎಸ್.ಆರ್. ರಮೇಶ್ ವಿನ್ಯಾಸಗೊಳಿಸಿ, ನಿರ್ದೇಶಿಸಿದ್ದಾರೆ. ಇದು ಪರಿವರ್ತನ ರಂಗ ಸಮಾಜ ತಂಡದ ಪ್ರಸ್ತುತಿ.

 

1602ರಿಂದ ಜಗತ್ತಿನಾದ್ಯಂತ ಇಂದಿಗೂ ಪ್ರದರ್ಶನ ಗೊಳ್ಳುತ್ತಿರುವ ಷೇಕ್ಸ್‌ಪಿಯರ್ ನಾಟಕಗಳಲ್ಲಿ ‘ಒಥೆಲೊ’ ಕೂಡಾ ಒಂದು. ಡೇಸ್ಡಿಮೋನಾಳನ್ನು ಪ್ರೀತಿಸಿ ಮದುವೆಯಾಗುವ ವೆನಿಸ್ಸಿನ ಸೇನಾನಾಯಕ ಒಥೆಲೊನೊಳಗೆ ಸಂಶಯದ ಬೀಜ ಬಿತ್ತುವವನು ಭಡ್ತಿ ಸಿಗದ ಇಯಾಗೋ. ತನಗೆ ಸಿಗಬೇಕಾದ ಸ್ಥಾನಮಾನ ಸಿಗದೆ ಇದ್ದಾಗ ಹತಾಶೆಗೊಂಡು ತನ್ನ ಇಚ್ಛೆಯಂತೆಯೇ ಎಲ್ಲವೂ ನಡೆಯಬೇಕೆಂದು ಬಯಸುತ್ತಾನೆ, ನಿರ್ಧರಿಸುತ್ತಾನೆ ಮತ್ತು ಹಾಗೆಯೇ ನಡೆಯುವಂತೆ ನೋಡಿಕೊಳ್ಳುತ್ತಾನೆ. ಹೀಗಾಗಿ ಒಥೆಲೊ ತಾನು ಪ್ರೀತಿಸಿದ ಡೇಸ್ಡಿಮೋನಾಳನ್ನು ಕೊಲ್ಲುತ್ತಾನೆ. ಆದರೆ ತಾನು ಇಯಾಗೋ ಹೆಣೆದಿದ್ದ ಬಲೆಯಲ್ಲಿ ಬಿದ್ದೆನೆಂಬುದು ಅರಿವಾಗಿ ತನ್ನನ್ನು ತಾನು ಕೊಂದುಕೊಳ್ಳುತ್ತಾನೆ. ರಾಜಕೀಯದಲ್ಲಿ ಅಧಿಕಾರ ಲಾಲಸೆ, ಕುಟಿಲತೆ, ಮೋಸ, ವಂಚನೆಗಳ ನಡುವೆ ನಲುಗುವ ಪ್ರೀತಿಯ ಜೀವಗಳ ದುರಂತ ಅಂತ್ಯದ ಈ ನಾಟಕ ಇನ್ನಷ್ಟು ಪರಿಣಾಮಕಾರಿಯಾಗಬೇಕಿತ್ತು.

ನಾಟಕ: ಒಥೆಲೊ 

ಮೂಲ: ಷೇಕ್ಸ್‌ಪಿಯರ್, ಕನ್ನಡಕ್ಕೆ: ಕೆ.ಪಿ. ವಾಸುದೇವನ್

ವಿನ್ಯಾಸ, ನಿರ್ದೇಶನ: ಎಸ್.ಆರ್. ರಮೇಶ್

ರಂಗಸಜ್ಜಿಕೆ: ಬೆನಕ ನಾಗರಾಜ್

ಬೆಳಕು: ಜೀವನ್‌ಕುಮಾರ್ ಹೆಗ್ಗೋಡು

ವಸ್ತ್ರವಿನ್ಯಾಸ: ಸಿ. ಲಿಖಿತಾ

ಪ್ರಸಾಧನ: ಬಿ.ಎಂ. ರಾಮಚಂದ್ರ

ಸಂಗೀತ ಸಾಂಗತ್ಯ: ನರಸಿಂಹನ್ ನಚ್ಚು

ನೃತ್ಯ ಸಂಯೋಜನೆ: ಶ್ರುತಿ ಎಸ್. ಭಾರದ್ವಾಜ್

ರಂಗದ ಮೇಲೆ: ಎಂ. ದ್ವಾರಕಾನಾಥ್, ಎಚ್.ಆರ್. ಅಧ್ಯಾಪಕ್, ಬೆನಕ ನಾಗರಾಜ್, ಬಿ.ಎಸ್. ಸತೀಶ್, ಎನ್.ಎಸ್. ಜನಾರ್ದನ್, ಎಸ್. ಮಾಧವರಾವ್, ಕೆ. ರವಿಕುಮಾರ್, ಬಿ. ಸುರಭಿ, ಸಿ.ಲಿಖಿತಾ, ಲಕ್ಷ್ಮಣ ಶಿವಶಂಕರ್, ಶುಕ್ತಿ, ಧೀಮಂತ್.

ರಾಜರ ಪೋಷಾಕಿಲ್ಲದ ಒಥೆಲೊ, ಸೂಟುಬೂಟಿನ ಇಯಾಗೋ ಅವರ ಉಡುಪು ಆಧುನಿಕತೆಯನ್ನು ಬಿಂಬಿಸುತ್ತದೆ. ಆದರೆ ಎಂ. ದ್ವಾರಕಾನಾಥ್, ಎಚ್.ಆರ್. ಅಧ್ಯಾಪಕ್, ಬೆನಕ ನಾಗರಾಜ್, ಎನ್.ಎಸ್. ಜನಾರ್ದನ್, ಎಸ್. ಮಾಧವರಾವ್, ಲಕ್ಷ್ಮಣ ಶಿವಶಂಕರ್ ಅವರೊಂದಿಗೆ ಎಮಿಲಿಯಾ ಪಾತ್ರಧಾರಿ ಬಿ. ಸುರಭಿ ಹಾಗೂ ಡೇಸ್ಡಿಮೋನಾಳಾಗಿ ಸಿ. ಲಿಖಿತಾ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಒಥೆಲೊ ಪಾತ್ರಧಾರಿಯಾದ ಕೆ. ರವಿಕುಮಾರ್ ನಿಧಾನವಾಗಿ ಮತ್ತು ಪರಿಣಾಮಕಾರಿಯಾಗಿ ಸಂಭಾಷಣೆಯನ್ನು ಹೇಳಬೇಕಿತ್ತು. ಚೆಂದದ ಆದರೆ ಉದ್ದುದ್ದದ ಸಂಭಾಷಣೆಗಳನ್ನು ತುಂಡರಿಸಿ, ಪ್ರೇಕ್ಷಕರ ಮನ ಮುಟ್ಟುವಂತೆ ಮುಟ್ಟಿಸಬೇಕಿತ್ತು. ಇಯಾಗೋ ಪಾತ್ರಧಾರಿಯಾದ ಬಿ.ಎಸ್. ಸತೀಶ್ ಮಿಂಚುತ್ತಾರೆ. ಒಥೆಲೊ ಹಾಗೂ ಡೇಸ್ಡಿಮೋನಾಳ ನಡುವೆ ನಡೆಯುವ ಸಂಭಾಷಣೆಗೆ ಸಾಕ್ಷಿಯಾಗಿ ಪರದೆ ಹಿಂದೆ ಇಯಾಗೋ ಕಾಣಿಸಿಕೊಳ್ಳುವ ತಂತ್ರ ಚೆನ್ನಾಗಿದೆ. ಹಾಗೆಯೇ ಡೇಸ್ಡಿಮೋನಾ ಮಲಗಿರುವ ದೃಶ್ಯದಲ್ಲಿ ಕಟ್ಟಿದ ಸೊಳ್ಳೆಪರದೆ ಚೆನ್ನಾಗಿದೆ. ಆದರೆ ಇದರ ಮೇಲೆ ಬರೆದ ರಿವೇಂಜ್, ಟ್ರಸ್ಟ್, ಜಲಸ್ ಇತರ ಶಬ್ದಗಳನ್ನು ಓದುವಾಗ ಕಲಾವಿದರತ್ತ ಲಕ್ಷ್ಯ ಹೋಗುವುದಿಲ್ಲ. ಹೀಗಾಗಿ ಆ ಶಬ್ದಗಳ ಅಗತ್ಯವಿರಲಿಲ್ಲ ಮತ್ತು ವಾಚ್ಯವೆನಿಸುತ್ತವೆ. ಗಮನ ಸೆಳೆದದ್ದು; ರಂಗದ ಮೇಲೆ ಹಾಕಿದ ಚದುರಂಗದ ಚಿತ್ರ. ಇದರ ಮೇಲೇ ಇಡೀ ನಾಟಕ ನಡೆಯುವುದರಿಂದ ದಾಳಗಳಾಗುವ ಪರಿಯನ್ನು ಸಂಕೇತಿಸುತ್ತದೆ. ಎರಡು ಗಂಟೆಯ ಈ ನಾಟಕಕ್ಕೆ ಇನ್ನಷ್ಟು ಬಂಧವಿರಬೇಕಿತ್ತು ಜೊತೆಗೆ ಚೆಂದವಿರಬೇಕಿತ್ತು. ಹೀಗಾಗಿ ಪ್ರೇಕ್ಷಕರ ಸಂಯಮವನ್ನು ನಾಟಕ ಬಯಸುತ್ತದೆ.

ಮಹಾಭಾರತದಿಂದ ಹಿಡಿದು ಷೇಕ್ಸ್‌ಪಿಯರ್‌ವರೆಗೆ ಅಂದರೆ ದ್ರೌಪದಿಯಿಂದ ಡೇಸ್ಡಿಮೋನಾಳಂಥವರು ದಾಳಗಳಾಗುತ್ತಲೇ ಇರುತ್ತಾರೆ ಎನ್ನುವುದು ಸಾಬೀತಾಗುತ್ತಲೇ ಇರುತ್ತದೆ ಎನ್ನುವುದಕ್ಕೆ ಈ ಎರಡೂ ನಾಟಕಗಳು ಸಾಕ್ಷಿಯಾದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News