×
Ad

ತಾಳ್ಮೆ ಬೇಡುವ ಸಾರ್ಥಕ ‘ಸ್ವಾತಂತ್ರ್ಯದ ಓಟ’

Update: 2026-06-26 11:42 IST

ನಾಟಕ: ಸ್ವಾತಂತ್ರ್ಯದ ಓಟ

ಮೂಲ ಕಾದಂಬರಿಕಾರರು:

ಬೊಳುವಾರು ಮಹಮದ್ ಕುಂಞಿ

ನಾಟಕ ರೂಪಾಂತರ: ಮಂಜುನಾಥ್ ಗೋಮಾರದಹಳ್ಳಿ

ರಂಗಪಠ್ಯ, ವಿನ್ಯಾಸ, ನಿರ್ದೇಶನ: ನಟರಾಜ್ ಹೊನ್ನವಳ್ಳಿ

ಸಹನಿರ್ದೇಶನ: ಸಲ್ಮಾ ದಂಡಿನ

ಸಂಗೀತ: ರಾಘವ ಕಮ್ಮಾರ

ರಂಗಸಜ್ಜಿಕೆ ನಿರ್ಮಾಣ: ಮಧುಸೂದನ್ ಬಿ.ಆರ್, ರಮೇಶ್ ಎಸ್. ಮೈಸೂರು, ಶಂಕರ್ ಕೆ. ಬೆಳಲಕಟ್ಟೆ

ಬೆಳಕು: ಮಂಜು ನಾರಾಯಣ್

ವಸ್ತ್ರವಿನ್ಯಾಸ: ಡಾ. ಸಹನಾ ಪಿಂಜಾರ್

ಪರಿಕಲ್ಪನೆ: ಪ್ರಸನ್ನ ಡಿ. ಸಾಗರ

ನಿರ್ವಹಣೆ: ಡಾ. ಶೈಲಜಾ ಎ.ಸಿ.

ತಂಡದ ವ್ಯವಸ್ಥಾಪಕ: ಮಂಜುನಾಥ ಹಿರೇಮಠ

ರಂಗದ ಮೇಲೆ: ಸೈಯದ್ ಅಲಿ ಸಿಹಿಮೊಗ್ಗೆ, ಭೀಮೇಶ ಸಿಂಧನೂರು, ದರ್ಶನ್ ಎಸ್. ಭದ್ರಾವತಿ, ಪೂಜಾ ಗಜಾಕೋಶ, ಬಸವರಾಜ ಹುಲ್ಲಳ್ಳಿ, ಪ್ರಮೋದ್ ಆರ್. ನಾಡಿಗ್, ರೇಣುಕಾ ಸಿದ್ದಿ, ಶ್ರುತಿ ಶರಣಕುಮಾರ್, ರಂಜಿನಿ ಎ.ಜಿ., ಅಂಬಿಕಾ ಮಾಲಿ, ಭೈರವ ಪೂಜಾರಿ, ಆಕಾಶ್ ಪವಾರ್, ಭಾಸ್ಕರ್ ಹಿತ್ತಲಮನಿ, ಚಂದನ್ ಕೆ.ಆರ್., ಅಜಯ್ ಸಿ.ಎಂ., ಸಚಿನ್ ಕೆ.ಎನ್., ಸಾಗರ ದನದಮನಿ, ಎಸ್.ವೈ. ಚಿನ್ಮಯರಾಮ, ನಭಿರಾಜ್ ಮುಂದಿನಮನಿ, ನವೀನಕುಮಾರ್ ಕೆ.ಎಸ್., ತುಳಸಿದೇವಿ ಪಿ.ಜಿ., ಸೌರವ್ ಸನದ.

ಹಿರಿಯ ಲೇಖಕ ಬೊಳುವಾರು ಮಹಮದ್ ಕುಂಞಿ ಅವರ ಕಾದಂಬರಿ ಆಧಾರಿತ ‘ಸ್ವಾತಂತ್ರ್ಯದ ಓಟ’ ನಾಟಕವನ್ನು ಶಿವಮೊಗ್ಗ ರಂಗಾಯಣವು ಯಶಸ್ವಿಯಾಗಿ ಪ್ರದರ್ಶಿಸುತ್ತಿದೆ.

1,100ಕ್ಕೂ ಅಧಿಕ ಪುಟಗಳ ಬೃಹತ್ ಕಾದಂಬರಿಯನ್ನು ಮೂರೂವರೆ ಗಂಟೆಗಳ ಅವಧಿಗೆ ನಾಟಕವಾಗಿಸಿದ್ದು ಸಾಹಸವೇ ಸರಿ. ಸ್ವಲ್ಪ ದೀರ್ಘವಾಯಿತೆಂದು ಕಳೆದ ವಾರ ಮೈಸೂರಿನ ರಂಗಾಯಣದಲ್ಲಿ ಪ್ರದರ್ಶನಗೊಂಡಾಗ ಕೆಲ ಪ್ರೇಕ್ಷಕರು ಹೇಳಿದರು. ದೀರ್ಘಾವಧಿಯ ನಾಟಕ ನೋಡಲು ಚಡಪಡಿಸುವ, ನಾಟಕ ನಡೆಯುವಾಗಲೇ ತಿಂಡಿ ತಿನ್ನುವ ಅನೇಕ ಪ್ರೇಕ್ಷಕರು ರೀಲ್ಸ್ ಜಗತ್ತು ನೋಡಿ ಎಲ್ಲವೂ ಬೇಗ ಮುಗಿದು ಹೋಗಬೇಕೆಂದು ಹಂಬಲಿಸುತ್ತಾರೆ. ಆದರೆ ಈ ನಾಟಕ ನೋಡಲು ಸಾವಧಾನ ಬೇಕು. ಏಕೆಂದರೆ ನಾಟಕವನ್ನು ಹಾಡು, ನೃತ್ಯದ ಮೂಲಕ ಎಲ್ಲೂ ಬೋರಾಗದ ಹಾಗೆ ಆ ಕಾಲದ ಪಯಣವನ್ನು ಈ ಕಾಲದವರೆಗೆ ಸಮರ್ಥವಾಗಿ ನಟರಾಜ್ ಹೊನ್ನವಳ್ಳಿ ಕಟ್ಟಿ ಕೊಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ರಾಘವ ಕಮ್ಮಾರ ಅವರ ಸಂಗೀತ ಸಂಯೋಜನೆ ಗಮನಾರ್ಹ. ಅಲ್ಲದೆ ಮೇಘಾ ಕೊತಬಾಳ, ವೆಂಕಟೇಶ ರೆಡ್ಡಿ ಅವರ ಹಿನ್ನೆಲೆ ಗಾಯನ, ಅಕ್ಷಯ್ ಜೋಶಿ ಹಾಗೂ ಕೃಷ್ಣ ಬಡಿಗೇರ ಅವರ ಪಕ್ಕವಾದ್ಯಗಳ ಸಂಗೀತದ ಮೆರುಗೂ ಇದೆ. ಅಮೀರ್ ಖುಸ್ರು, ಸಂತ ಕಬೀರ್ ದಾಸ್, ಸಂತ್ ಸಿಂಗಾಜಿ, ನಿಯಾಮತ್ ಖಾನ್, ವಾಜಿದ್ ಅಲಿ ಷಾ, ಖತೀಲ್ ಶಿಫಾಯಿ, ರವಿಂದ್ರನಾಥ ಟಾಗೋರ್, ಹೆನ್ರಿ ಫ್ರಾನ್ಸಸ್ ಲೈಟ್, ನಟರಾಜ್ ಹೊನ್ನವಳ್ಳಿ, ಅನಸೂಯಾ ಕಾಂಬಳೆ ಅವರ ಕವಿತೆಗಳಲ್ಲದೆ ಅಲಾವಿ ಪದಗಳನ್ನು ನಾಟಕಕ್ಕೆ ಬಳಸಿದ್ದು ಪೂರಕವಾಗಿವೆ.

ನಾಟಕ ಕುರಿತು: ಲಾಹೋರ್‌ನಲ್ಲಿದ್ದ ಚಾಂದ್ ಅಲಿ, ಸಿಖ್ ಮಾಲಕರೊಬ್ಬರ ಬಳಿ ಕಮ್ಮಾರನಾಗಿರುತ್ತಾನೆ. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾದಾಗ ಸಿಖ್ ಕುಟುಂಬದ ಮೊಹಿಂದರ್ ಕೌರ್ ಹಾಗೂ ತನ್ವೀರ್ ಕೌರ್ ಸೋದರಿಯರನ್ನು ನಿರಾಶ್ರಿತರ ಗಡಿಗೆ ಬಿಡಲು ಹೊರಡುತ್ತಾನೆ. ಆದರೆ ಅವರು ಹತ್ತಿದ ಪತ್ರಿಕಾ ವಾಹನ ದಿಲ್ಲಿಗೆ ತೆರಳುತ್ತದೆ. ಹೀಗೆ ದಿಲ್ಲಿಗೆ ಬಂದ ಚಾಂದ್ ಅಲಿ, ಕೌರ್ ಸೋದರಿಯರ ಸಲಹೆಯಂತೆ ಚಂದರ್ ಆಗುತ್ತಾನೆ. ಅಲ್ಲದೆ ತಮ್ಮ ಬಳಿಯಿದ್ದ ಚಿನ್ನಾಭರಣಗಳನ್ನು ಚಾಂದ್ ಅಲಿಗೆ ಸೋದರಿಯರು ಕೊಡುತ್ತಾರೆ. ಆದರೆ ರೈಲು ನಿಲ್ದಾಣದಲ್ಲಿ ಟಿಕೆಟ್ ತೆಗೆಸುವ ಸಂದರ್ಭದಲ್ಲಿ ಪೊಲೀಸ್ ಅಟ್ಟಿಸಿಕೊಂಡು ಬಂದಾಗ ಚಾಂದ್ ಅಲಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಆಗ ಸಿಕ್ಕವರೇ ಜೋಳಿಗೆ ಬಾಬಾ. ಈ ಬಾಬಾನೇ ಬದ್ರುದ್ದೀನ್. ಮುತ್ತುಪಾಡಿಯ ರೋಷನ್ ಅಲಿ ಅವರ ಪುತ್ರ. ಹೀಗೆ ಜೋಳಿಗೆ ಬಾಬಾನ ಸಲಹೆಯಂತೆ ಮಹಾತ್ಮಾ ಗಾಂಧಿಯವರನ್ನು ಭೇಟಿಯಾಗಿ ವಾಪಸ್ ಲಾಹೋರಿಗೆ ತೆರಳಲು ಮನವಿ ಮಾಡಿಕೊಳ್ಳಬೇಕೆಂದುಕೊಂಡು, ಅವರು ಬರುವ ಸ್ಥಳಕ್ಕೆ ತೆರಳಿದಾಗ ಮಹಾತ್ಮಾ ಗಾಂಧಿ ಗುಂಡೇಟಿಗೆ ಬಲಿಯಾಗುತ್ತಾರೆ. ಇಲ್ಲಿ ಮಹಾತ್ಮಾ ಗಾಂಧಿಯನ್ನಾಗಲಿ, ಗುಂಡೇಟು ಹೊಡೆದವನನ್ನು ತೋರಿಸುವುದಿಲ್ಲ ಎನ್ನುವುದು ಮುಖ್ಯ.

ಅಲ್ಲಿಂದ ದಕ್ಷಿಣ ಭಾರತದ ಮುತ್ತುಪಾಡಿ ಎಂಬಲ್ಲಿಗೆ ಜೋಳಿಗೆ ಬಾಬಾ ಅಥವಾ ಬದ್ರುದ್ದೀನ್ ಜೊತೆಗೆ ರೋಷನ್ ಅಲಿ ಅವರ ಮನೆಗೆ ಚಾಂದ್ ಅಲಿ ಬರುತ್ತಾನೆ. ಲಾಹೋರಿಗೆ ಹೊರಡಬೇಕೆನ್ನುವಾಗ ರೋಷನ್ ಅಲಿ ಮೃತಪಡುತ್ತಾರೆ. ಆದರೆ ತನ್ನ ತಳಮಳವನ್ನು ಅದರಲ್ಲೂ ಕೌರ್ ಸೋದರಿಯರು ಕೊಟ್ಟ ಚಿನ್ನಾಭರಣಗಳ ಒಡವೆಗಳನ್ನು ಜತನವಾಗಿ ಇಟ್ಟುಕೊಳ್ಳುತ್ತಾನೆ. ಕೊನೆಗೆ ಕೌರ್ ಸೋದರಿಯರನ್ನು ಭೇಟಿಯಾಗುವ ಸಂದರ್ಭ ಬರುತ್ತದೆ. ಅಷ್ಟೊತ್ತಿಗೆ ಚಾಂದ್ ಅಲಿ ಚಾಂದಜ್ಜ ಆಗಿರುತ್ತಾನೆ. ತನ್ನ ಕುಟುಂಬದೊಂದಿಗೆ ಗುರುದ್ವಾರಕ್ಕೆ ತೆರಳಿದಾಗ ತನ್ವೀರ್ ಕೌರ್ ಭೇಟಿಯಾಗುತ್ತಾಳೆ. ಇದಕ್ಕೂ ಮೊದಲು ಆಕೆಯ ಅಕ್ಕ ದಾಳಿಯಲ್ಲಿ ಗುಂಡಿಗೆ ಸಾವನ್ನಪ್ಪಿರುತ್ತಾಳೆ. ಕೊನೆಗೆ; ಚಾಂದಜ್ಜ ಚಿನ್ನಾಭರಣಗಳನ್ನು ತನ್ವೀರ್ ಕೌರ್ ಮುಂದಿಡುತ್ತಾನೆ. ಆಕೆಗೆ ಅವುಗಳನ್ನು ಒಪ್ಪಿಸಿದನೇ ಎನ್ನುವುದನ್ನು ಪ್ರೇಕ್ಷಕರ ಊಹೆಗೆ ನಿರ್ದೇಶಕರು ಬಿಟ್ಟಿದ್ದಾರೆ.

ಹೀಗೆ ದೀರ್ಘ ನಾಟಕದಲ್ಲಿ ಅನೇಕ ಘಟನೆಗಳು ಜರುಗುತ್ತವೆ. ಇಂಥ ನಾಟಕವನ್ನು ನೋಡಲು ತಾಳ್ಮೆ ಬೇಕು. ಏಕೆಂದರೆ ದೇಶ ಇಬ್ಭಾಗವಾದಾಗ ಮೆಲ್ಲನೆ ದೇಶ ತೊರೆವ ಜನರ ದೃಶ್ಯವೇ ಹತ್ತು ನಿಮಿಷಕ್ಕೂ ಹೆಚ್ಚಿನದು. ಹೀಗೆ ಮುಂದುವರಿಯುವ ನಾಟಕಗಳ ಹಾಡುಗಳು ಗಮನ ಸೆಳೆಯುತ್ತವೆ.

‘‘ಆಯ್ತು ಇಬ್ಭಾಗವಾಯ್ತು

ದೇಶವೊಂದು ಎರಡಾಯಿತು

ಮಧ್ಯದಲ್ಲಿ ಬೇಲಿ ಬಿದ್ದು

ಎರಡೂ ಕಡೆ

ಬಾವುಟಗಳು ಹಾರಾಡಿ

ಮೈಕುಗಳು ಕಿರುಚಾಡಿ’’

ಹೀಗೆ ಗಮನ ಸೆಳೆವ ಹಾಡುಗಳು ಜೊತೆಗೆ ಚಾಂದ್ ಅಲಿಯಂಥವರು ಅನುಭವಿಸಿದ ನೋವು, ಸಂಕಟ, ಸವಾಲುಗಳನ್ನು ಕಟ್ಟಿಕೊಡುವ ನಾಟಕವಿದು. ಇಂಥದ್ದೇ ಅಂದರೆ ದೇಶ ವಿಭಜನೆಯ ನಂತರದ ಪರಿಣಾಮಗಳ ಕುರಿತು ಜಯಂತ ಕಾಯ್ಕಿಣಿ ಅವರ ’ಜತೆಗಿರುವನು ಚಂದಿರ’ ನಾಟಕ ಬಹಳ ಪ್ರಸಿದ್ಧವಾಯಿತು. ದೇಶ ವಿಭಜನೆಯ ಝಳ ದಕ್ಷಿಣ ಭಾರತದಲ್ಲಿ ಅದರಲ್ಲೂ ಸಣ್ಣ ಸಣ್ಣ ಊರುಗಳಲ್ಲಿ ಹೇಗಾಯಿತು ಎಂಬುದನ್ನು ಕಾಯ್ಕಿಣಿ ಅವರ ನಾಟಕ ಮನೋಜ್ಞವಾಗಿ ಚಿತ್ರಿಸಿತ್ತು. ಈ ನಾಟಕವು ಶೋಲೊಮ್ ಅಲೈಖೆಮ್ ಹಾಗೂ ಜೋಸೆಫ್ ಸ್ಟೀನ್ ರಚಿತ ರಶ್ಯನ್ ಕಥೆಗಳನ್ನು ಆಧರಿಸಿದ ವಿಶ್ವವಿಖ್ಯಾತ ‘ಫಿಡ್ಲರ್ ಆನ್ ದ ರೂಫ್’ ಇಂಗ್ಲಿಷ್ ಸಿನೆಮಾದ ಚಿತ್ರಕಥೆ ಆಧರಿಸಿದೆ. ಆದರೆ ಕನ್ನಡದ್ದೇ ನಾಟಕ ಎನ್ನುವಷ್ಟು ಪರಿಣಾಮಕಾರಿಯಾಗಿದೆ. ಈ ನಾಟಕವನ್ನು ಭಾಸ್ಕರ್ ಚಂದಾವರಕರ್ ಅವರು ನೀನಾಸಂ ತಿರುಗಾಟಕ್ಕೆ 1997ರಲ್ಲಿ ನಿರ್ದೇಶಿಸಿ, ಸಂಗೀತ ನೀಡಿದ್ದರು. ಕಳೆದ ವರ್ಷ ಈ ನಾಟಕವನ್ನು ಹುಲಗಪ್ಪ ಕಟ್ಟಿಮನಿ ಅವರು ತಮ್ಮ ಸಂಕಲ್ಪ ತಂಡಕ್ಕೆ ನಿರ್ದೇಶಿಸಿ, ನಟಿಸಿದ್ದಾರೆ. ಅವರಿಗೆ ಎನ್.ಮಂಗಳಾ ಸಾಥ್ ನೀಡಿದ್ದಾರೆ. ಅಲ್ಲದೆ ಈ ನಾಟಕವೇ ಐದಾರು ಮುದ್ರಣಗಳನ್ನು ಕಂಡಿದೆ.

ಸಹಬಾಳ್ವೆ, ಸಹಕಾರ, ಸೋದರತ್ವ ಸಾರುವ ಇಂಥ ನಾಟಕಗಳು ಪ್ರಸ್ತುತವಾಗುತ್ತಲೇ ಇರುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಗಣೇಶ ಅಮೀನಗಡ

contributor

Similar News