ಲವಲವಿಕೆಯ ‘ಅಗ್ನಿ ಮತ್ತು ಮಳೆ’
ನಾಟಕ: ಅಗ್ನಿ ಮತ್ತು ಮಳೆ
ರಚನೆ: ಗಿರೀಶ್ ಕಾರ್ನಾಡ್
ರಂಗ ವಿನ್ಯಾಸ: ಸತೀಶ್ ತಿಪಟೂರು
ಸಂಗೀತ: ಧನಂಜಯ್ ಆರ್.ಸಿ., ಕೃಷ್ಣಚೈತನ್ಯ
ವಸ್ತ್ರವಿನ್ಯಾಸ: ಶ್ರುತಿ ವಿ.
ಬೆಳಕಿನ ವಿನ್ಯಾಸ: ಮಹೇಶ್ ಕಲ್ಲತ್ತಿ
ಪ್ರಚಾರ ಕಲೆ: ನವೀನ್ ಭೂಮಿ
ನಿರ್ದೇಶನ: ಸಾಲಿಯಾನ್ ಉಮೇಶ್ ನಾರಾಯಣ
ತಂಡ: ಮೈಸೂರು ರಂಗಾಯಣ ರೆಪರ್ಟರಿ
ರಂಗದ ಮೇಲೆ:
ರಘು ರಾಜಕುಮಾರ್, ಕಿರಣ್ ಕೆ., ಮೀನಾಕ್ಷಿ ವಗದಾಳೆ, ರಕ್ಷಿತಾ ಟಿ.ಎಲ್., ಪುನೀತ್ ಕುಮಾರ್, ಕೌಶಿಕ್, ಕಾರ್ತಿಕ್ ಕಲ್ಲುಕುಟಿಕರ್, ಭಾಗ್ಯಲಕ್ಷ್ಮಿ ಕಾಳೆ, ಶರತ್ ಕುಮಾರ್, ಅಮೋಘ ಭಾರ್ಗವ, ಕಿರಣ್, ಪುನೀತ್, ಶಿವಕಬೀರ್, ಧ್ವನಿ, ನಿನಾದ ಮೌರ್ಯ ದೆಂಗೋಡಿ, ನಿತಿನ್ ದೆಂಗೋಡಿ, ಕವಿತಾ ಚಿಕ್ಕಮನಿ, ಯತೀಶ್ ಎನ್. ಕೊಳ್ಳೇಗಾಲ, ಕಮಲಾಕರ, ಲೋಹಿತ್ ರವಿಕುಮಾರ್.
ಒಂದೆರಡು ತಿಂಗಳ ಹಿಂದೆ ಸಂಸರ ‘ವಿಗಡವಿಕ್ರಮರಾಯ’ ನಾಟಕವನ್ನು ಮೈಸೂರು ರಂಗಾಯಣದ ವಿದ್ಯಾರ್ಥಿಗಳಿಗೆ ನಿರ್ದೇಶಿಸಿದ್ದ ಅಲ್ಲಿನ ರಂಗಶಿಕ್ಷಕ ಸಾಲಿಯಾನ್ ಉಮೇಶ್ ನಾರಾಯಣ ಸಮರ್ಥವಾಗಿ ರಂಗದ ಮೇಲೆ ತಂದಿದ್ದರು. ಈಗ ಮೈಸೂರು ರೆಪರ್ಟರಿ ಕಲಾವಿದರಿಗೆ ಗಿರೀಶ್ ಕಾರ್ನಾಡ್ ಅವರ ‘ಅಗ್ನಿ ಮತ್ತು ಮಳೆ’ ನಾಟಕವನ್ನು ಸೊಗಸಾಗಿ ಕಟ್ಟಿ ಕೊಟ್ಟಿದ್ದಾರೆ. ಮೂರು ತಾಸಿನ ಈ ನಾಟಕ ನೋಡಲು ತಾಳ್ಮೆ ಬೇಕು. ಆದರೆ ತಾಳ್ಮೆಗೆಡಿಸದ ನಾಟಕ ಲವಲವಿಕೆಯಿಂದ ಕೂಡಿದೆ.
ನಾಟಕದ ಕುರಿತು; ಹತ್ತು ವರ್ಷಗಳ ಕಾಲ ಇಂದ್ರನ ಕುರಿತು ತಪಸ್ಸು ಮಾಡಿ ಸಿದ್ಧಿ ಪಡೆದುಕೊಂಡು ಬಂದ ಯವಕ್ರೀತ, ತಪಸ್ಸಿಗೆ ಹೋಗುವ ಮುನ್ನ ಪ್ರೀತಿಸಿದ ವಿಶಾಖಳನ್ನು ಮಾತಿನ ಮೋಡಿಯಿಂದ ಮರಳು ಮಾಡಿ, ತನ್ನ ದೊಡ್ಡಪ್ಪ ರೈಭ್ಯ ಹಾಗೂ ಅವನ ಮಗನಾದ ಪರಾವಸುವಿನ ವಿರುದ್ಧ ಸೇಡಿನ ಬಲೆ ನೇಯ್ದು, ಅದರಲ್ಲಿ ತಾನೇ ಸಿಕ್ಕಿಬಿದ್ದು ಅಂತ್ಯ ಕಾಣುತ್ತಾನೆ.
ಅತ್ತ ನಾಡಿನಲ್ಲಿ ಮಳೆಯಾಗದ ಕಾರಣ ದೀರ್ಘ ಕಾಲದಿಂದ ನಡೆಯುತ್ತಿರುವ ಯಜ್ಞಕ್ಕೆ ಅಧ್ವರ್ಯುವಾದ ಪರಾವಸುವಿಗೆ ಪ್ರೀತಿ ಕೂಡಾ ಲೆಕ್ಕಾಚಾರವೆ. ತನ್ನ ಸಾಧನೆಗಾಗಿ ತನ್ನ ಹೆಂಡತಿ ವಿಶಾಖಳ ಪಾಲಿಗೆ ಕೊರಡಾಗುತ್ತಾನೆ. ಆದರೆ ಅವನ ತಮ್ಮ ಅರವಸು ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುವ ತರುಣ. ಮಣ್ಣಿಗೆ ಹತ್ತಿರವಾಗಿ ಬದುಕುವವನು. ನಾಟಕದವರೊಡನೆ ಅವನ ಒಡನಾಟ. ನಾಟಕ, ಕುಣಿತಗಳಲ್ಲಿ ಮೈಮರೆಯುವವನು. ನೀಲಗಾರರ ಹುಡುಗಿ ನಿತ್ತಿಲೆಯನ್ನು ಪ್ರೀತಿಸುವ ಅರವಸುವಿಗೆ ಯವಕ್ರೀತನ ಸಾವು ಮದುವೆಯಾಗದಂತೆ ತಡೆಯಾಗುತ್ತದೆ. ಮುಂದೆ ಅಣ್ಣ ಪರಾವಸು ಮತ್ತು ಊರಿನಿಂದ ಬಹಿಷ್ಕಾರಕ್ಕೆ ಒಳಗಾದ ಅವನು ನಾಟಕದವರ ಸಹವಾಸದಿಂದ ಹೊಸ ಮನುಷ್ಯನಾಗುತ್ತಾನೆ. ಅಲ್ಲದೆ ಅವನ ಅಣ್ಣ ನಡೆಸುವ ಯಾಗದ ಸಮ್ಮುಖದಲ್ಲಿ ನಾಟಕದ ಪಾತ್ರದ ಮೂಲಕ, ತನ್ನ ಅಣ್ಣನನ್ನು ಎದುರಿಸಲು ನಿರ್ಧರಿಸುತ್ತಾನೆ. ಇದಕ್ಕಾಗಿ ವ್ರತಾಸುರನ ಪಾತ್ರ ಮಾಡುತ್ತ, ಆ ಪಾತ್ರವೇ ತಾನಾಗಿ ಯಜ್ಞ ಭಂಗಗೊಳಿಸುತ್ತಾನೆ. ಇದೇ ಸಂದರ್ಭದಲ್ಲಿ ನಿತ್ತಿಲೆ ತನ್ನ ಅಣ್ಣ ಮತ್ತು ಗಂಡನಿಂದ ಕೊಲೆಯಾಗುತ್ತಾಳೆ. ಅವಳಿಗಾಗಿ ಮರುಗುವ ಅರವಸುವಿನ ಮುಂದೆ ನಿಜವಾದ ಇಂದ್ರ ಪ್ರತ್ಯಕ್ಷನಾಗಿ ವರ ಕೋರಲು ಕೇಳಿದಾಗ ನಿತ್ತಿಲೆಯನ್ನು ಮತ್ತೆ ಬದುಕಿಸಲು ಬೇಡುತ್ತಾನೆ. ಆದರೆ ಕಾಲವನ್ನು ಹಿಂದೆ ತಿರುಗಿಸಲು ಅಸಾಧ್ಯವೆನ್ನುತ್ತಾನೆ ಇಂದ್ರ. ಕೊನೆಗೆ ನಿತ್ತಿಲೆ ದಕ್ಕದಿದ್ದರೂ ಊರಿಗೆ ಮಳೆಯಾಗಿ ಬರಗಾಲ ಕೊನೆಯಾಗುತ್ತದೆ.
ಈ ನಾಟಕದ ರಂಗವಿನ್ಯಾಸಗೊಳಿಸಿದ ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅವರು ರಂಗದ ಮೇಲೆ ಋಷಿಮುನಿಗಳು ಬಳಸುವ ಕೃಷ್ಣಜಿನ ಹಾಕಿ ವಿನ್ಯಾಸಗೊಳಿಸಿದ್ದು ಚೆನ್ನಾಗಿದೆ. ಈ ನಾಟಕದಲ್ಲಿ ಅಗ್ನಿ ಪೂಜೆ ಮಾಡುವವರದು ಒಂದು ಲೋಕ. ಇನ್ನೊಂದು ಕಾಡುಜನರದು. ಅವರದು ನೀರಿಗೆ ಸಂಬಂಧಿಸಿದುದು. ಅಗ್ನಿ ಪೂಜೆ ಮಾಡುವ ಪೈಕಿ ಅರವಸು, ಬುಡಕಟ್ಟು ಜನಾಂಗದ ನಿತ್ತಿಲೆ ಅಂದರೆ ಬ್ರಾಹ್ಮಣ ಹುಡುಗ ಹಾಗೂ ಬುಡಕಟ್ಟು ಹುಡುಗಿ ಮದುವೆಯಾಗುವುದನ್ನು ಸಹಿಸದವರು ಆಕೆಯನ್ನು ಕೊಲ್ಲುತ್ತಾರೆ. ಇದು ಈಗಿನ ಮರ್ಯಾದೆಗೇಡುಹತ್ಯೆಯ ಪೈಕಿಯದು. ಇನ್ನೊಂದೆಡೆ ಯವಕ್ರೀತ ಹಾಗೂ ವಿಶಾಖಳ ನಡುವೆ ಪ್ರೀತಿ ಇರುತ್ತದೆ. ಇವರ ನಡುವಿನ ಸಂಭಾಷಣೆ ಚೆನ್ನಾಗಿದೆ. ಯವಕ್ರೀತನು ವಿಶಾಖಳನ್ನು ಭೇಟಿಯಾದಾಗ ಹಳೆಯ ದಿನಗಳು ನೆನಪಾಗುತ್ತವೆ. ಆಕೆಯ ಮೂಲಕ ರೈಭ್ಯ ಮತ್ತು ಪರಾವಸುಗೆ ಬುದ್ಧಿ ಕಲಿಸಬೇಕೆಂದು ಹಳೆಯ ಪ್ರೀತಿ ಒಡ್ಡಿ, ಆ ಭಾವನೆ ಜಾಗೃತಗೊಳಿಸಿ ಅವಳೊಂದಿಗೆ ಕೂಡುತ್ತಾನೆ. ಆಗ ಆಕೆಯ ಮೂಲಕ ಸೇಡು ತೀರಿಸಿಕೊಳ್ಳಬೇಕೆಂಬ ಅವನ ಉದ್ದೇಶವನ್ನು ವಿಶಾಖ ಅರಿಯುತ್ತಾಳೆ. ಜ್ಞಾನದ ಜೊತೆಗೆ ವಿವೇಕ ಇಲ್ಲದಿದ್ದರೆ ಅನಾಹುತವಾಗುತ್ತದೆ ಎನ್ನುವುದಕ್ಕೆ ರೈಭ್ಯ, ಪರಾವಸು ಹಾಗೂ ಯವಕ್ರೀತ ಉದಾಹರಣೆ. ಸ್ವಲ್ಪ ದಿನಗಳಲ್ಲೇ ಯಾಗ ಮುಗಿಯುತ್ತಿದ್ದರೂ ಅದನ್ನು ಬಿಟ್ಟು ಪರಾವಸು ಬರುತ್ತಾನೆ. ತನ್ನ ಹೆಂಡತಿ ವಿಶಾಖಳು ಯವಕ್ರೀತನ ಜೊತೆ ಸಂಬಂಧ ಬೆಳೆಸಿದರೂ ಲೆಕ್ಕಕ್ಕೆ ತೆಗೆದುಕೊಳ್ಳದೆ ತನ್ನ ಅಪ್ಪನನ್ನು ಮುಗಿಸಬೇಕೆಂಬ ಹಟದಿಂದ ಬರುತ್ತಾನೆ. ಏಕೆಂದರೆ ಅವನ ಅಪ್ಪ ವಿಶಾಖಳ ಮೇಲೆ ದೌರ್ಜನ್ಯ ಎಸಗಿರುತ್ತಾನೆ. ವಜ್ರಮಾನಸನಾದ ಪರಾವಸುಗೆ ಯಾವ ಬಂಧನ, ಯಾವ ಸಂಬಂಧಗಳೂ ಬೇಡ. ಒಂಟಿಯಾಗಿ ಸಾಧನೆ ಮಾಡಬೇಕು ಎನ್ನುವ ತುಡಿತ.
ನಾಟಕದ ಆರಂಭಕ್ಕೆ ಹಾಗೂ ಕೊನೆಗೆ ಜಾತಿಗಾರರನ್ನು ಕಾರ್ನಾಡರೇ ತರುತ್ತಾರೆ. ಅಂದರೆ ಊರಿಂದ ಊರಿಗೆ ನಾಟಕ ಆಡುವವರು. ಅವರ ಕೈಗೆ ಪರಾವಸು ಸಿಗುತ್ತಾನೆ. ಇದರಿಂದ ನಾಟಕದೊಳಗೆ ನಾಟಕ ನಡೆಯುತ್ತದೆ. ನಿತ್ತಿಲೆಯು ಪರಾವಸುಗೆ ತಿಳಿಹೇಳುತ್ತಾಳೆ- ‘‘ದ್ವೇಷ ಸಾಧಿಸಬೇಡ, ನಿನ್ನ ಅಣ್ಣನನ್ನು ಕೊಲ್ಲಬೇಡ’’ ಎಂದು. ಹೀಗೆ ನಾಟಕದವರು ಆಡುವ ದೃಶ್ಯಗಳೆಲ್ಲ ದೊಡ್ಡಾಟ, ಸಣ್ಣಾಟದ ಪ್ರಕಾರವನ್ನು ಬಳಸಿದ್ದು ಚೆನ್ನಾಗಿದೆ. ಹಾಗೆಯೇ ಕಡಕೋಳ ಮಡಿವಾಳಪ್ಪ ತತ್ವಪದಗಳನ್ನು ಬಳಸಿದ್ದೂ ಚೆನ್ನಾಗಿದೆ. ಎಲ್ಲೂ ಬೋರಾಗದ ಹಾಗೆ ನಾಟಕ ಸಾಗುತ್ತದೆ.
ಯವಕ್ರೀತನಾಗಿ ಯತೀಶ್ ಕೊಳ್ಳೇಗಾಲ, ನಿತ್ತಿಲೆಯಾಗಿ ಕವಿತಾ ಚಿಕ್ಕಮನಿ, ಅರವಸುನಾಗಿ ನಿತಿನ್ ದೆಂಗೋಡಿ, ಪರಾವಸುನಾಗಿ ರಘು ರಾಜಕುಮಾರ್ ಜೊತೆಗೆ ಎಲ್ಲ ಕಲಾವಿದರ ಅಭಿನಯ ಅಚ್ಚುಕಟ್ಟಾಗಿತ್ತು. ಇಲ್ಲಿನ ಕಲಾವಿದರ ಮಕ್ಕಳು ನಾಟಕದ ಬಳಗದಲ್ಲಿದ್ದುದು ಚೆನ್ನಾಗಿತ್ತು. ಆರ್.ಸಿ.ಧನಂಜಯ ಹಾಗೂ ಕೃಷ್ಣಚೈತನ್ಯ ಅವರ ಸಂಗೀತ, ಮಹೇಶ್ ಕಲ್ಲತ್ತಿ ಅವರ ಬೆಳಕು ನಾಟಕವನ್ನು ಯಶಸ್ವಿಗೊಳಿಸಿದವು.
ಪುರಾಣದ ಕಥೆಯಾದರೂ ಸಮಕಾಲೀನವಾಗುತ್ತದೆ ಈ ನಾಟಕ. ಇದು ಕಾರ್ನಾಡರ ನಾಟಕದ ವಿಶೇಷ. ಇದನ್ನು ಯಶಸ್ವಿಗೊಳಿಸುವಲ್ಲಿ ಕಲಾವಿದರನ್ನು ದುಡಿಸಿಕೊಂಡ ಸಾಲಿಯಾನ್ ಉಮೇಶ್ ಅವರಿಗೆ ಅಭಿನಂದನೆಗಳು. ಇದೇ ನಾಟಕ ಜೂನ್ 13ರಂದು ಸಂಜೆ ಆರೂವರೆಗೆ ಬೆಂಗಳೂರಿನ ನಿಂಬೆಕಾಯಿಪುರದ ಜನಪದರು ರಂಗಮಂದಿರದಲ್ಲಿದ್ದರೆ, 14, 21 ಹಾಗೂ 28ರಂದು ಮೈಸೂರಿನ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.