×
Ad

ನಗೆಗಡಲಲ್ಲಿ ಬಂಧಿಸುವ ಬೀಳಗಿ ದಂಪತಿ

Update: 2026-07-10 12:14 IST

‘‘ನಾಟಕ ಕಂಪನಿಯಲ್ಲೇ ಲಗ್ನವಾಯ್ತು. ಮೈಸೂರಿನಲ್ಲಿಯೇ ಕ್ಯಾಂಪ್ ಇದ್ದಾಗಲೇ ಬೆಳಗ್ಗೆ ಲಗ್ನ. ಮಧ್ಯಾಹ್ನ ಮೂರು ಗಂಟೆಗೆ ನಾಟಕ ಪ್ರದರ್ಶನವಿತ್ತು. ರಂಗಮಂಟಪದಲ್ಲೇ ರಂಗಿ ಮದುವೆ ಎಂದು ಪತ್ರಿಕೆಗಳು ಬರೆದವು’’ ಎಂದು ನಗುವ ದಯಾನಂದ ಅವರಿಗೆ ಜೋಡಿಯಾದ ಶ್ವೇತಾ ಅವರು ಗುಬ್ಬಿ ವೀರಣ್ಣ ಅವರ ಮರಿಮೊಮ್ಮಗಳು. ಅವರ ತಂದೆ ನಾಗೇಶ್ ಗುಬ್ಬಿ ಹಾಗೂ ತಾಯಿ ಮಂಜಮ್ಮ ರಂಗಭೂಮಿ ಕಲಾವಿದರು.

ನೀವು ಜೇವರ್ಗಿ ರಾಜಣ್ಣ ಅವರು ರಚಿಸಿ, ನಿರ್ದೇಶಿಸಿದ ‘ಕುಂಟ ಕೋಣ ಮೂಕ ಜಾಣ’ ನಾಟಕ ನೋಡಿದ್ದರೆ ಈ ರಂಗದಂಪತಿಯ ಪರಿಚಯ ಇರುತ್ತದೆ. ಇವರು ದಯಾನಂದ ಬೀಳಗಿ ಹಾಗೂ ಶ್ವೇತಾ ಬೀಳಗಿ.

15 ಸಾವಿರಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡ ‘ಕುಂಟ ಕೋಣ ಮೂಕ ಜಾಣ’ ನಾಟಕದಿಂದ ಜನಪ್ರಿಯರಾದ ಈ ಜೋಡಿಯ ಮೋಡಿ ಪ್ರೇಕ್ಷಕರ ಮೇಲೆ ಅಳಿಯದೆ ಅಚ್ಚೊತ್ತಿದೆ. ತಮ್ಮ ಸಂಭಾಷಣೆ, ಆಂಗಿಕ ಅಭಿನಯ, ಹಾಡಿನ ಮೂಲಕ ಪ್ರಸಿದ್ಧರಾದ ದಯಾನಂದ ಅವರ ಅಭಿನಯದ ‘ಕುಂಟ ಕೋಣ ಮೂಕ ಜಾಣ’ ನಾಟಕವು ಈಗ ಯೂಟ್ಯೂಬ್ ಚಾನೆಲ್ ಮೂಲಕವೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಲಾಭ ತರುತ್ತಿದೆ. ಈ ನಾಟಕದ ಮೂಲಕ ರಿಯಾಲಿಟಿ ಷೋಗಳಲ್ಲೂ ದಯಾನಂದ ಬೀಳಗಿ ಮಿಂಚಿದರು. ಇಷ್ಟಾದರೂ ಅವರು ರಂಗಭೂಮಿ ಮರೆತಿಲ್ಲ. ರಾಜ್ಯದ ಯಾವುದೇ ಊರಿಗೆ ಕಾಲಿಟ್ಟರೂ ಅವರನ್ನು ಗುರುತಿಸಿ, ಮೆಚ್ಚಿ ಮಾತನಾಡುವ ದೊಡ್ಡ ಪ್ರೇಕ್ಷಕರ ಸಂಖ್ಯೆಯಿದೆ.

ಕಮಲವ್ವ

ಇಂಥ ದಯಾನಂದ ಬೀಳಗಿ ರಂಗಭೂಮಿಯಲ್ಲಿ ಬೆಳೆಯಲು ಸಾಧ್ಯವಾಗಿದ್ದು ಅವರ ತಂದೆ-ತಾಯಿ ಕೊಡುಗೆ ಕಾರಣ. ಅವರ ತಾಯಿ ಕಮಲವ್ವ ನಾಟಕ ಕಂಪನಿ ಕಲಾವಿದರಾಗಿದ್ದರು. ಅವರ ತಂದೆ ಬೀಳಗಿ ಪೇಂಟರ್ ಎಂದೇ ಪ್ರಸಿದ್ಧರಾಗಿದ್ದ ಚಂದ್ರಶೇಖರ ಬೀಳಗಿ ಅವರು ನಾಟಕ ಕಂಪನಿಗಳಿಗೆ ಸೈನ್ ಬೋರ್ಡ್ ಹಾಗೂ ನಾಟಕಕ್ಕೆ ಅಗತ್ಯವಾದ ಪರದೆಗಳನ್ನು ರಚಿಸುವುದರ ಜೊತೆಗೆ ಕಲಾವಿದರೂ ಆಗಿದ್ದರು. ಆದರೆ ದಯಾನಂದ ನಾಲ್ಕೈದು ವರ್ಷವಿರುವಾಗಲೇ ಅವರ ತಂದೆ ಅವರನ್ನು ಬಿಟ್ಟು ಬೇರೊಂದು ಮದುವೆಯಾದರು. ಆಗ ಅವರನ್ನು ಬೆಳೆಸಿದ್ದು ಅವರ ತಾಯಿ ಕಮಲವ್ವ. ಬಾಗಲಕೋಟೆ ಜಿಲ್ಲೆಯ ಇಲಕಲ್ಲದ ಕಮಲವ್ವ ಅವರು ಬಡತನದ ಕಾರಣಕ್ಕೆ ಓದಲಾಗಲಿಲ್ಲ. ಚಿಕ್ಕ ವಯಸ್ಸಲ್ಲೇ ಬಾಲ್ಯವಿವಾಹವೂ ಆಗಿತ್ತು. ಆದರೆ ಓದಬೇಕೆಂಬ ಹಂಬಲಕ್ಕೆ 14ನೇ ವಯಸ್ಸಿಗೆ ಮನೆ ಬಿಟ್ಟು ಓಡಿ ಹೋಗಿ ಸೇರಿದ್ದು ಗುಡಗೇರಿ ಬಸವರಾಜ ಅವರ ಶ್ರೀ ಸಂಗಮೇಶ್ವರ ನಾಟ್ಯ ಸಂಘ. ಆರಂಭದಲ್ಲಿ ಪಾತ್ರಗಳು ಸಿಕ್ಕಿರಲಿಲ್ಲ. ಒಂದಿನ ‘ಭೂಕೈಲಾಸ’ ನಾಟಕದಲ್ಲಿ ದಾಸಿ ಪಾತ್ರಧಾರಿ ಮಾಡುವಾಕೆ ಇಲ್ಲದಾಗ ಕಮಲವ್ವ ಅವರನ್ನು ರಂಗದ ಮೇಲೆ ತಂದು ನಿಲ್ಲಿಸುತ್ತಾರೆ. ಆಮೇಲೆ ಹುಬ್ಬಳ್ಳಿಯಲ್ಲಿ ಗುಡಗೇರಿ ಕಂಪನಿಯ ‘ವರ ನೋಡಿ ಹೆಣ್ಣು ಕೊಡು’ ನಾಟಕದಲ್ಲಿ ಹಾಸ್ಯ ಪಾತ್ರ ನಿರ್ವಹಿಸಿ ಹೆಸರಾದರು. ಗುಡಗೇರಿ ಬಸವರಾಜ ಅವರ ‘ದುಡ್ಡಿನ ದರ್ಪ’, ‘ಸತ್ಯ ಸತ್ತಿತು’ ನಾಟಕಗಳಲ್ಲಿ ಹಾಸ್ಯ ಪಾತ್ರಗಳಿಗೆ ಬಣ್ಣ ಹಚ್ಚಿ ಪ್ರಸಿದ್ಧರಾದರು. ಎಷ್ಟೆಂದರೆ; ಅವರಿಗೆ ವಯಸ್ಸಾದರೂ ಕಂಪನಿ ಬಿಟ್ಟಿದ್ದರೂ ಆ ನಾಟಕಗಳಲ್ಲಿ ಅವರು ನಿರ್ವಹಿಸಿದ ಪಾತ್ರಗಳಿಗಾಗಿ ರಂಗಕ್ಕೇರುತ್ತಿದ್ದರು. ಆದರೆ ಅವರಿಗೆ ಓದಲು, ಬರೆಯಲು ಬರುತ್ತಿರಲಿಲ್ಲ. ಹೀಗಾಗಿ ಪತ್ರಕರ್ತ ಅಜಿತ್ ಘೋರ್ಪಡೆ ಅಲ್ಲದೆ ಕಂಪನಿ ಕಲಾವಿದರ ಮೂಲಕ ನಾಟಕದ ಚೋಪಡಿ (ಹಸ್ತಪ್ರತಿ) ಓದಿಸಿಕೊಂಡು ಸಂಭಾಷಣೆಗಳನ್ನು ಕಲಿಯುತ್ತಿದ್ದರು. ಅವರು 2018ರಲ್ಲಿ ನಿಧನರಾದಾಗ ಅರುವತ್ತನಾಲ್ಕು ವರ್ಷ ವಯಸ್ಸಾಗಿತ್ತು.

ಇಂಥ ಕಲಾವಿದೆಯ ಮಗನಾದ ದಯಾನಂದ ಬೀಳಗಿ ಹುಟ್ಟಿದ್ದು ಬಾಗಲಕೋಟೆಯಲ್ಲಿ. ಓದಿದ್ದು ಗದಗ-ಬೆಟಗೇರಿಯ ಬಾಸೆಲ್ ಮಿಷನ್ ಶಾಲೆಯಲ್ಲಿ ಎಸೆಸೆಲ್ಸಿವರೆಗೆ ಮಾತ್ರ. ಬಳಿಕ ಕಲಬುರಗಿಯಲ್ಲಿ ಆಟೊ ಓಡಿಸಿಕೊಂಡಿದ್ದರು. ಅವರ ಸೋದರ ಸಿದ್ದು ಬೀಳಗಿ ಆಟೊಮೊಬೈಲ್ ಕೆಲಸ ಕೈಗೊಂಡಿದ್ದರು. ಅಲ್ಲಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನೆಲೆಯೂರಿ ಬಟ್ಟೆ ವ್ಯಾಪಾರ, ಕಟ್ಟಡಗಳಿಗೆ ಪೇಂಟ್ ಮಾಡಿದರು ದಯಾನಂದ. ಆದರೆ ಯಾವುದೂ ಕೈಹಿಡಿಯಲಿಲ್ಲ. ಆಗ ಆರ್.ಡಿ. ಬಾಬು ಅವರ ಆರ್ಕೆಸ್ಟ್ರಾದಲ್ಲಿ ಹಾಡಲು ಅಲೆದಾಡಿದರು. ಆಗ ರಂಗಭೂಮಿ ಕಲಾವಿದೆ, ಪಿ.ಬಿ. ಧುತ್ತರಗಿ ಅವರ ಪತ್ನಿ ಎಚ್.ಬಿ. ಸರೋಜಮ್ಮ ಅವರು ನಾಟಕ ಕಂಪನಿಗೆ ಸೇರು ಎಂದು ಸಲಹೆ ನೀಡಿ ಶೇಕ್ ಮಾಸ್ತರರಿಗೆ ಫೋನ್ ಮಾಡಿ ಅವರ ಬಳಿ ಕಳಿಸಿದರು. 2004ರ ಫೆಬ್ರವರಿ 2ರಂದು ಶೇಕ್ ಮಾಸ್ತರರ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್ಲ ಕಂಪನಿಗೆ ಸೇರಿದರು. ಅದು ತಿಂಥಣಿ ಮೌನೇಶ್ವರ ಜಾತ್ರೆಯಲ್ಲಿ ಮುಕ್ಕಾಂ ಮಾಡಿತ್ತು. ಅಲ್ಲಿಯೇ ಗದುಗಿನ ಶ್ರೀ ಗುರು ಕುಮಾರೇಶ್ವರ ಕೃಪಾ ಪೋಷಿತ ಶ್ರೀ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘವೂ ಇತ್ತು. ಅಲ್ಲಿ ಕಾಂಗೊ ವಾದ್ಯ ನುಡಿಸಲು ದಯಾನಂದ ಆರಂಭಿಸಿದರು. ಅಲ್ಲಿಂದ ಶೇಕ್ ಮಾಸ್ತರರ ಕಂಪನಿ ವಿಜಾಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಮೊಕ್ಕಾಂ ಮಾಡಿದಾಗ ಸಣ್ಣಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚಿದರು. ಅಲ್ಲದೆ ‘ಶ್ರೀ ಕುಮಾರ ಶಿವಯೋಗಿ ಬಾರೈ’ ಎಂಬ ನಾಂದಿ ಹಾಡನ್ನೂ ಹಾಡುತ್ತಿದ್ದರು. ಆಮೇಲೆ ಪ್ರಕಾಶ ಕಡಪಟ್ಟಿ ಅವರ ‘ತವರು ಬಿಟ್ಟ ತಂಗಿ’ ನಾಟಕದಲ್ಲಿ ಕಾಲೇಜು ವಿದ್ಯಾರ್ಥಿ ಪಾತ್ರ ನಿರ್ವಹಿಸಿದರು. ಶೇಕ್ ಮಾಸ್ತರರ ಕಂಪನಿಯ ಸಹಭಾಗಿಗಳೂ ಕಲಾವಿದರೂ ಆದ ಶ್ರೀಧರ ಹೆಗಡೆ ಅವರು ನಿರ್ದೇಶನ ನೀಡಿದರು. ಅಲ್ಲಿಂದ ಶೇಕ್ ಮಾಸ್ತರರ ಇನ್ನೊಂದು ಕಂಪನಿಗೆ ತೆರಳಿ ಹಿನ್ನೆಲೆಯಾಗಿ ಹಾಡುವುದರ ಜೊತೆಗೆ ನಟಿಸಿದರು. ಕಡಪಟ್ಟಿ ಪ್ರಕಾಶ ಅವರ ‘ಭೂಮಿ ತೂಕದ ಹೆಣ್ಣು’ ನಾಟಕದಲ್ಲಿ ಶಿವಲಿಂಗು ಎಂಬ ಹಾಸ್ಯ ಪಾತ್ರದ ಮೂಲಕ ದೊಡ್ಡ ಪಾತ್ರಗಳಲ್ಲಿ ಅಭಿನಯಿಸಿದರು. ಹೀಗೆ ಶೇಕ್ ಮಾಸ್ತರ ಕಂಪನಿ ಪ್ರದರ್ಶಿಸಿದ 46 ನಾಟಕಗಳಿಗೆ ಬಣ್ಣ ಹಚ್ಚಿದರು. ಅಲ್ಲಿಂದ ಜೇವರ್ಗಿ ರಾಜಣ್ಣ ಅವರ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘಕ್ಕೆ ಸೇರಿದರು. ನಾರಾಯಣಪುರದಲ್ಲಿ ಕ್ಯಾಂಪು ಆರಂಭವಾದಾಗ ಎನ್.ಎಸ್.ಜೋಶಿ ಅವರ ‘ಕಳ್ಳ ಗುರು ಸುಳ್ಳು ಶಿಷ್ಯ’ ನಾಟಕದಲ್ಲಿ ಗುರು ಪಾತ್ರಕ್ಕೆ ಬಣ್ಣ ಹಚ್ಚಿದರೆ, ಹರೀಶ್ ಹಿರಿಯೂರು ಅವರು ಶಿಷ್ಯನ ಪಾತ್ರ ನಿರ್ವಹಿಸಿದರು. ನಂತರ ಜೇವರ್ಗಿ ರಾಜಣ್ಣ ಅವರ ‘ಕುಂಟ ಕೋಣ ಮೂಕ ಜಾಣ’ ನಾಟಕದಲ್ಲಿ ಕುರುಡ ಅಂದಾನಪ್ಪ ಪಾತ್ರದ ಮೂಲಕ ದಯಾನಂದ ಪ್ರಸಿದ್ಧರಾದರು. ಅವರ ಪಾತ್ರವನ್ನು ಕಂಡ ಗುಡಗೇರಿ ಬಸವರಾಜ ಅವರು ಮೆಚ್ಚಿ, ಆಶೀರ್ವದಿಸಿದರು. ಈ ನಾಟಕದಲ್ಲಿ ದಯಾನಂದ ಅವರ ಹೆಂಡತಿ ರಂಗಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದ ಶ್ವೇತಾ ಅವರನ್ನು ಪ್ರೀತಿಸಿ, ಮದುವೆಯಾದರು. ‘‘ನಾಟಕ ಕಂಪನಿಯಲ್ಲೇ ಲಗ್ನವಾಯ್ತು. ಮೈಸೂರಿನಲ್ಲಿಯೇ ಕ್ಯಾಂಪ್ ಇದ್ದಾಗಲೇ ಬೆಳಗ್ಗೆ ಲಗ್ನ. ಮಧ್ಯಾಹ್ನ ಮೂರು ಗಂಟೆಗೆ ನಾಟಕ ಪ್ರದರ್ಶನವಿತ್ತು. ರಂಗಮಂಟಪದಲ್ಲೇ ರಂಗಿ ಮದುವೆ ಎಂದು ಪತ್ರಿಕೆಗಳು ಬರೆದವು’’ ಎಂದು ನಗುವ ದಯಾನಂದ ಅವರಿಗೆ ಜೋಡಿಯಾದ ಶ್ವೇತಾ ಅವರು ಗುಬ್ಬಿ ವೀರಣ್ಣ ಅವರ ಮರಿಮೊಮ್ಮಗಳು. ಅವರ ತಂದೆ ನಾಗೇಶ್ ಗುಬ್ಬಿ ಹಾಗೂ ತಾಯಿ ಮಂಜಮ್ಮ ರಂಗಭೂಮಿ ಕಲಾವಿದರು.

ಶ್ವೇತಾ ಅವರು ಓದಿದ್ದು ಏಳನೆಯ ತರಗತಿ ಮಾತ್ರ. ಆದರೆ ಬಾಲ್ಯದಿಂದಲೇ ಬಣ್ಣದ ನಂಟಿನಿಂದ ನಾಟಕ ಕಂಪನಿಗಳಿಗೆ ಕಾಲಿಟ್ಟರು. ಈ ದಂಪತಿಗೆ ಪೂರ್ವ ಎಂಬ ಮಗಳು ಎಸೆಸೆಲ್ಸಿ ಓದುತ್ತಿದ್ದರೆ, ಮಗ ಪ್ರಜ್ವಲ್ ಏಳನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಈ ಇಬ್ಬರೂ ಧಾರವಾಡದ ವಸತಿಸಹಿತ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ‘‘ನಮ್ಮದು ಅಲೆದಾಟದ ಜೀವನ. ನಮ್ಮಿಂದ ಮಕ್ಕಳ ಓದಿಗೆ ಅಡ್ಡಿಯಾಗಬಾರದಂತ ಹಾಸ್ಟೆಲಿಗೆ ಹಾಕೀವ್ರಿ’’ ಎನ್ನುವ ಶ್ವೇತಾ ಹಾಗೂ ದಯಾನಂದ ಅವರು ನೆಲೆ ನಿಂತಿದ್ದು ಗದಗದಲ್ಲಿ.

‘‘ಕುಂಟ ಕೋಣ ಮೂಕ ಜಾಣ ನಾಟಕವೇ ಅದ್ಭುತ. ಇದು ಜೇವರ್ಗಿ ರಾಜಣ್ಣ ಅವರ ರಚನೆ ಹಾಗೂ ನಿರ್ದೇಶನ. ಇದರೊಂದಿಗೆ ಎಲ್ಲರೂ ಕೂಡಿ ಹತ್ತು ವರ್ಷದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳಾಗಲು ಸಾಧ್ಯವಾಯಿತು. ಇದರಲ್ಲಿ ನಮ್ಮೊಂದಿಗೆ ಹರೀಶ್ ಹಿರಿಯೂರು, ಪ್ರಿಯಾ ಹಿರಿಯೂರು, ಪಾಪು ಕಲ್ಲೂರು, ಕುಮಾರ್ ಹಿರಿಯೂರು, ವೀರೇಶ ಬನ್ನೂರು, ಕವಿತಾ, ಬಾಬಣ್ಣ ಬನ್ನೂರು, ಎಚ್.ಪಿ.ಮಲ್ಲಿಕಾರ್ಜುನ, ಸುಜಾತಾ ಗುಬ್ಬಿ, ಆನಂದ ಮುಧೋಳ, ಚಿಕ್ಕೇಶ ಕಲ್ಲೂರು ಇವರೆಲ್ಲರಿಂದ ನಾಟಕ ಯಶಸ್ವಿಯಾಯಿತು.

ನಮ್ಮ ಹಿರಿಯ ಕಲಾವಿದರಿಗೆ ಹೋಲಿಸಿದರೆ ನಾವೇನೂ ಅಲ್ಲ. ನಾಟಕವಲ್ಲದೆ ಯೂಟ್ಯೂಬ್, ರಿಯಾಲಿಟಿ ಷೋ ಮೂಲಕ ಪ್ರಸಿದ್ಧರಾದೆವು. ನಮ್ಮ ಹಿರಿಯ ಕಲಾವಿದರಿಗೆ ಸರಿಯಾದ ಪ್ರಚಾರ, ಪ್ರಸಿದ್ಧಿ, ಪ್ರಶಸ್ತಿಗೆ ಸಿಗಲಿಲ್ಲ. ರಂಗಭೂಮಿಯಲ್ಲಿ ಹೆಸರು, ಸ್ಥಾನ ಸಿಕ್ಕಿದ್ದನ್ನು ಮರೆಯಲಾಗದು. ನಮಗಿಂತಲೂ ಪ್ರತಿಭಾವಂತರಿದ್ದಾರೆ. ಅವರಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ನಾವು ನಮ್ಮ ತಂದೆತಾಯಿ ಬಿಟ್ಟು ಹೋದ ಬುತ್ತಿ ಉಣ್ಣುತ್ತಿದ್ದೇವೆ. ಅವರ ಪಟ್ಟ ಕಷ್ಟವೇ ನಮಗೆ ಸುಖ ಸಿಗುತ್ತಿದೆ’’ ಎನ್ನುವ ವಿನಯದ ಮಾತು ದಯಾನಂದ ಅವರದು.

‘‘ನಮ್ಮ ಗುರುಗಳಾದ ಶ್ರೀಧರ ಹೆಗಡೆ ಅವರು ಯಾವಾಗ್ಲೂ ಹೇಳ್ತಾರ- ಮೊದಲಿನ ಕಲಾವಿದರಲ್ಲಿ ಕಲೆ ಬಿಟ್ಟು ಬೇರೇನೂ ಇರುತ್ತಿರಲಿಲ್ಲ. ಈಗಿನ ಕಲಾವಿದರಲ್ಲಿ ಕಲೆ ಬಿಟ್ಟು ಎಲ್ಲವೂ ಇದೆ. ಇದನ್ನು ಯಾವಾಗಲೂ ನೆನಪಿಟ್ಟುಕೊಂಡಿರುತ್ತೇನೆ’’ ಎನ್ನುವ ದಯಾನಂದ ಅವರಿಗೆ 47 ವರ್ಷ ವಯಸ್ಸು. ಅವರು ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಅವರು ನೀಡುವ ಎಸ್.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ಕಳೆದ ವರ್ಷ ಭಾಜನರಾಗಿದ್ದರು. ‘‘ಯಾವುದೇ ಪ್ರಶಸ್ತಿಗಿಂತ ಪ್ರೇಕ್ಷಕರ ಚಪ್ಪಾಳೆ, ಭೇಟಿಯಾದಾಗ ಮಾತನಾಡಿ ಖುಷಿಪಡ್ತಾರಲ್ಲ ಅದರಂಥ ಪ್ರಶಸ್ತಿ ಮತ್ತೊಂದಿಲ್ಲ’’ ಎನ್ನುತ್ತಾರೆ ದಯಾನಂದ.

ಸದ್ಯ ಹಿರಿಯ ರಂಗಭೂಮಿ ಕಲಾವಿದೆ ಪ್ರೇಮಾ ಗುಳೇದಗುಡ್ಡ ಅವರ ಶ್ರೀ ಸಂಗಮೇಶ್ವರ ನಾಟ್ಯ ಸಂಘ, ಆಶಾಪುರ ಕಂಪನಿಯನ್ನು ಅವರ ಸೋದರ ಸಿದ್ದು ಬೀಳಗಿ ವಹಿಸಿಕೊಂಡಿದ್ದಾರೆ. ಸಿದ್ದು ಅವರು ಜೂನಿಯರ್ ರವಿಚಂದ್ರನ್ ಎಂದೇ ಪ್ರಸಿದ್ಧರು. ಕೊಪ್ಪಳ ಜಿಲ್ಲೆಯ ಕಾರಟಯಲ್ಲಿ ಜುಲೈ 12ರಿಂದ ಎನ್.ಎಸ್.ಜೋಶಿ ಅವರ ‘ಬಂಜೆ ತೊಟ್ಟಿಲು’ ನಾಟಕದ ಹೆಸರು ಬದಲಾಯಿಸಿ ‘ಸಂದಿಮನಿ ಸಂಗವ್ವ’ ಎಂದು ಪ್ರದರ್ಶಿಸಲಿದ್ದಾರೆ. ಇದರಲ್ಲಿ ಗಂಡಹೆಂಡತಿ ಪಾತ್ರಗಳಿಗೆ ದಯಾನಂದ ಹಾಗೂ ಶ್ವೇತಾ ಜೀವ ತುಂಬಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಗಣೇಶ ಅಮೀನಗಡ

contributor

Similar News