ಉಡಾಫೆ ಮಾತು ಯಾವತ್ತಿಗೂ ಸಮರ್ಥನೆ ಅಲ್ಲ
ಜನಾರ್ದನ ಮಿಶ್ರಾ | Screengrab : X
ಜನಪ್ರತಿನಿಧಿಗಳು ಸಾರ್ವಜನಿಕವಾಗಿ ಮಾತನಾಡುವಾಗ, ಬಾಯಿಗೆ ಬಂದಂತೆ ಮಾತನಾಡುವುದು ಈಗೀಗ ಚಾಳಿ ಆಗಿಬಿಟ್ಟಿದೆ. ಮಧ್ಯಪ್ರದೇಶದ ರೇವಾ ಸಂಸದ ಬಿಜೆಪಿಯ ಜನಾರ್ದನ್ ಮಿಶ್ರಾ ಅವರು ಅಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ, ‘‘ಶುದ್ಧ ಪೆಟ್ರೋಲ್ ಏನು ನಿಮ್ಮ ಅಪ್ಪನ ಮನೆಯಿಂದ ಬರುತ್ತದೆಯೆ?’’ ಎಂದು ಕೇಳಿದ್ದಾರಂತೆ. ತಮ್ಮ ಸರಕಾರದ ನಿಲುವನ್ನು ಸಮರ್ಥಿಸಿಕೊಳ್ಳುವ ಹಕ್ಕು ಆಳುವ ಪಕ್ಷದ ಸಂಸದರಿಗಿದೆ. ಆದರೆ, ಉಡಾಫೆ ಮಾತು ಯಾವತ್ತಿಗೂ ಸಮರ್ಥನೆಯಾಗುವುದಿಲ್ಲ.
ಭಾರತದಲ್ಲಿ ಬಳಕೆಯಾಗುವ ಕಚ್ಚಾತೈಲದ ಶೇ. 80 ಭಾಗ ಇತ್ತೀಚಿನ ತನಕವೂ 18,000 ಕಿ.ಮೀ. ದೂರದಲ್ಲಿರುವ ಗಲ್ಫ್ ದೇಶಗಳಿಂದಲೇ ಆಮದಾಗಬೇಕಿತ್ತು. ಇಂತಹ ಸನ್ನಿವೇಶದಲ್ಲಿ ಪ್ರಧಾನಿಯವರು ಶೇ. 20 ಎಥೆನಾಲನ್ನು ಪೆಟ್ರೋಲ್ ಜೊತೆ ಮಿಶ್ರಣ ಮಾಡಲು ಹೇಳಿದರೆ, ಜನ ಅದಕ್ಕೆ ಪ್ರತಿಭಟನೆ ಆರಂಭಿಸಿದ್ದಾರೆ. ಎಥೆನಾಲ್ ವಾಹನಗಳಿಗೆ ಯೋಗ್ಯ ಅಲ್ಲ, ಶುದ್ಧ ಪೆಟ್ರೋಲ್ ಬೇಕು ಎನ್ನುತ್ತಿದ್ದಾರೆ. ‘‘ಪೆಟ್ರೋಲ್ ಏನು ಅವರ ಅಪ್ಪನ ಮನೆಯಿಂದ ಬರುತ್ತದೆಯೆ? ದೇಶದೊಳಗೆ ಪೆಟ್ರೋಲ್ ಇಲ್ಲದಿದ್ದರೆ, ಅದು ಬರುವುದಾದರೂ ಎಲ್ಲಿಂದ? ಬ್ರೆಝಿಲ್‌ನಲ್ಲಿ ಶೇ. 100 ಎಥೆನಾಲ್ ವಾಹನಗಳು ಚಲಿಸುತ್ತಿಲ್ಲವೆ?’’ ಎಂದು ಮಿಶ್ರಾ ಪ್ರಶ್ನಿಸಿದ್ದಾರಂತೆ.
ಇ20 ಬಳಕೆಯಿಂದ ವಾಹನದ ಇಂಜಿನ್‌ಗಳು ಹಾನಿಗೀಡಾಗುತ್ತಿವೆ, ಮೈಲೇಜ್ ಕಡಿಮೆಯಾಗಿದೆ ಎಂಬಿತ್ಯಾದಿ ದೂರುಗಳಿದ್ದು, ಮೊದಲಿಗೆ ಇವನ್ನೆಲ್ಲ ಸಾರಾಸಗಟು ನಿರಾಕರಿಸಿದ್ದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಕೆಲವಂಶಗಳನ್ನು ಈಗ ಒಪ್ಪಿಕೊಂಡಿದ್ದಾರೆ. ಸಣ್ಣ ಸಂಗತಿಗಳನ್ನು ಅನಗತ್ಯ ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂಬುದು ಅವರ ವಾದ. ಅದೇನೇ ಇದ್ದರೂ, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ, ಜನ ತಮ್ಮ ದುಡಿಮೆಯ ಹಣತೆತ್ತು, ಸರಕಾರಕ್ಕೆ ತೆರಿಗೆ ನೀಡಿ ಖರೀದಿಸಿದ ವಾಹನಗಳಲ್ಲಿ ಏನು ಬಳಸಬೇಕು, ಹೇಗೆ ಬಳಸಬೇಕು ಎಂಬುದನ್ನು ಸರಕಾರ ತಾನೇ ಏಕಪಕ್ಷೀಯವಾಗಿ ನಿರ್ಧರಿಸಹೊರಟಿರುವುದರ ಫಲ - ಈ ಗೊಂದಲ.
ದೇಶದಲ್ಲಿಂದು 20 ಕೋಟಿ ದ್ವಿಚಕ್ರ ವಾಹನಗಳು, 3 ಕೋಟಿಗೂ ಮಿಕ್ಕಿ ಕಾರುಗಳು ಎಥೆನಾಲ್ ಬ್ಲೆಂಡ್ ಆಗಿರುವ ಇಂಧನ ಬಳಸಿ ಚಲಾವಣೆಯಲ್ಲಿವೆ. ಸಾಕಷ್ಟು ವೈಜ್ಞಾನಿಕ ವಿಶ್ಲೇಷಣೆಗಳ ಬಳಿಕವೇ ಅವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಎಥೆನಾಲ್ ಬ್ಲೆಂಡ್ ಮಾಡಿದ ಪೆಟ್ರೋಲ್ ಬಳಕೆಯಿಂದ ದೇಶಕ್ಕೆ 1.97 ಲಕ್ಷ ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯ ಆಗಿದೆ, 952 ಲಕ್ಷ ಮೆಟ್ರಿಕ್ ಟನ್ ಅಂಗಾರಾಮ್ಲ ವಾತಾವರಣಕ್ಕೆ ಬಿಡುಗಡೆ ಆಗುವುದು ತಪ್ಪಿದೆ ಹಾಗೂ ಯಾವುದೇ ದೂರುಗಳು ವ್ಯಾಪಕ ಪ್ರಮಾಣದಲ್ಲಿ ಕೇಳಿಬಂದಿಲ್ಲ. ಹಾಗೆಂದು ಸಂಸತ್ತಿನಲ್ಲಿ ಪೆಟ್ರೋಲಿಯಂ ಖಾತೆಯ ರಾಜ್ಯಸಚಿವ ಸುರೇಶ್ ಗೋಪಿ ಹೇಳಿಕೊಂಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳೂ ಒಂದು ವಿಷಯವನ್ನು ಸಾರ್ವಜನಿಕರಿಗೆ ಮನದಟ್ಟು ಮಾಡುವಲ್ಲಿ ವಿಫಲಗೊಂಡಿವೆ. ಅದೇನೆಂದರೆ, ದೇಶ ವಿದ್ಯುತ್ ಚಾಲಿತ ವಾಹನಗಳತ್ತ ಸರಿಯುತ್ತಿರುವ ಈ ಹಂತದಲ್ಲಿ ಏಕಾಏಕಿ ಎಥೆನಾಲ್ ವಿಚಾರ ಏಕೆ ಮುಂಚೂಣಿಗೆ ಬರುತ್ತಿದೆ? 2019ಕ್ಕೆ ಮುನ್ನ ವರ್ಷಕ್ಕೆ ಕೇವಲ 10 ಲಕ್ಷ ಲೀಟರ್ ಎಥೆನಾಲ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದ ಭಾರತದಲ್ಲಿ ಇಂದು ಕೇವಲ 7 ವರ್ಷಗಳಲ್ಲಿ ದಿನಕ್ಕೆ 30 ಲಕ್ಷ ಲೀಟರ್ ಎಥೆನಾಲ್ ಉತ್ಪಾದನೆ ಆರಂಭಗೊಳ್ಳುವುದಕ್ಕೆ ಕಾರಣ ಏನು? ಈ ಪ್ರಶ್ನೆಗಳ ಉತ್ತರದಲ್ಲೇ ಎಥೆನಾಲ್ ಬ್ಲೆಂಡ್ ಮಾಘಸ್ನಾನದ ಗುಟ್ಟು ಅಡಗಿದೆ.
ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ಸ್ವಲ್ಪವೂ ಹಿಂದೆಮುಂದೆ ಯೋಚಿಸದೆ, ಸಿಕ್ಕಾಪಟ್ಟೆ ಎಥೆನಾಲ್ ಉತ್ಪಾದನಾ ಘಟಕಗಳನ್ನು ಆರಂಭಿಸಿ, ತನ್ನ ಆತ್ಮನಿರ್ಭರ ಬೆನ್ನನ್ನು ತಾನೇ ತಟ್ಟಿಕೊಂಡಿದ್ದ ಭಾರತ ಸರಕಾರಕ್ಕೆ, ಸಾಂಕ್ರಾಮಿಕ ಹಿಂಜರಿದ ಬಳಿಕ ದಾಸ್ತಾನು ಉಳಿಯತೊಡಗಿದ ಎಥೆನಾಲ್ ಹೇಗೆ ಬಳಸಬೇಕೆಂಬ ಚಿಂತೆ ಎದುರಾಗಿತ್ತು. ವಿಪತ್ತುಗಳನ್ನು ಅವಕಾಶವಾಗಿ ಮಾಡಿಕೊಳ್ಳುವ ಹೆಸರಿನಲ್ಲಿ ಒಂದು ತಪ್ಪಿಗೆ ಇನ್ನೊಂದು, ಮತ್ತೊಂದು ತಪ್ಪುಗಳನ್ನು ಜೋಡಿಸುತ್ತಾ ಹೊರಟಿರುವ ಭಾರತ ಸರಕಾರ, ಈಗ ಎಥೆನಾಲ್ ಬ್ಲೆಂಡಿಂಗ್‌ನಿಂದ ದೇಶಕ್ಕೆ ಎಂದಿಗಿಂತ 316 ಲಕ್ಷ ಮೆಟ್ರಿಕ್ ಟನ್ ಕಚ್ಚಾತೈಲ ಬಳಕೆ ಉಳಿತಾಯ ಆಗಿದೆ ಮತ್ತು ಎಥೆನಾಲ್‌ಗೆ ಮೂಲವಸ್ತುಗಳನ್ನು ಬೆಳೆದ ರೈತರಿಗೆ 1.66 ಲಕ್ಷ ಕೋಟಿ ರೂ.ಗಳನ್ನು ವರ್ಗಾಯಿಸುವುದು ಸಾಧ್ಯ ಆಗಿದೆ ಎಂದು ಸಂಸತ್‌ನಲ್ಲಿ ಹೇಳಿಕೊಂಡಿದೆ. ಸರಕಾರದ ಈ ತಪ್ಪುಗಳ ಸರಮಾಲೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ.
ದೇಶದಲ್ಲಿಂದು ಬೆಳೆಯಲಾಗುತ್ತಿರುವ ಜೋಳ, ಅಕ್ಕಿ, ಕಬ್ಬು, ಇತ್ಯಾದಿ ಆಹಾರಧಾನ್ಯಗಳು ಎಥೆನಾಲ್ ಉತ್ಪಾದನೆಗೆ ವ್ಯಾಪಕವಾಗಿ ಬಳಕೆ ಆಗತೊಡಗಿವೆ. ಈ ಎಲ್ಲ ಕೃಷಿ ಉತ್ಪನ್ನಗಳು ನೀರಿನ ಮೇಲೆ ಅತಿ ಅವಲಂಬಿತವಾದ ಉತ್ಪನ್ನಗಳಾಗಿವೆ. ಎಲ್ ನಿನೊ ಪರಿಣಾಮ, ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಕೃಷಿಗೆ ಅನಿಶ್ಚಿತತೆ ಕಾಡುತ್ತಿದೆ. ಕೃಷಿ ಉತ್ಪಾದನೆ ಈ ವರ್ಷ ಕೈಕೊಟ್ಟರೆ, ಸರಕಾರದ ಎಥೆನಾಲ್ ನೀತಿ ಗಂಭೀರ ಪರಿಣಾಮಗಳಿಗೆ ಕಾರಣ ಆಗಬಹುದು. ದೇಶದ ಹಲವೆಡೆ ಈಗಾಗಲೇ ಬರ, ಅಕಾಲಿಕ ಮಳೆಗಳು ಸಮಸ್ಯೆ ಉಂಟುಮಾಡಿವೆ. ನಮ್ಮ ಅನ್ನವನ್ನು ಕಸಿದು ಅದನ್ನು ಎಥೆನಾಲ್ ಮಾಡಿ, ಸಕ್ಕರೆ ಲಾಬಿಗೆ ತೈಲ ಲಾಬಿಗೆ ಲಾಭಮಾಡಿಕೊಡುತ್ತಿರುವ ಸರಕಾರ ಬೀಸುವ ದೊಣ್ಣೆ ತಪ್ಪಿದರೆ ಸಾಕು, ಸಮಗ್ರ ಚಿಂತನೆ ಅಗತ್ಯವಿಲ್ಲ ಎಂಬ ತನ್ನ ಯಾವತ್ತಿನ ಮನಸ್ಥಿತಿಯನ್ನು ಮತ್ತೆಮತ್ತೆ ತೋರಿಸುತ್ತಿದೆ.
ಭಾರತ ಸರಕಾರ ತನ್ನ ಕೈಯಾರೆ ತಾನು ಮಾಡಿಕೊಂಡಿರುವ ಈ ನೀತ್ಯಾತ್ಮಕ ಹೇರಾಫೇರಿಗೆ ದೇಶದ ಆಟೊಮೊಬೈಲ್ ಮಾರುಕಟ್ಟೆಯನ್ನೇ ಒತ್ತೆ ಇಟ್ಟು ಮುಂದುವರಿಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಜನ ತಮ್ಮ ಹಣದಿಂದ ಖರೀದಿಸಿದ ವಾಹನಗಳಿಗೆ ಶುದ್ಧ ಪೆಟ್ರೋಲ್ ಕೇಳಿದರೆ ಅದೇನು ನಿಮ್ಮಪ್ಪನ ಮನೆಯಿಂದ ಬರುತ್ತದೆಯೇ ಎಂದು ಕೇಳುವ ಜನಪ್ರತಿನಿಧಿಗಳಿಗೆ, ಅದೇ ಭಾಷೆ ಬಳಸಿ, ಎಥೆನಾಲ್ ಏನು ನಿಮ್ಮ ಅಪ್ಪನ ಮನೆಯಿಂದ ಬರುತ್ತದೆಯೆ? ಎಂದು ಕೇಳಬೇಡವೇ!