ರಾಜ್ಯದಲ್ಲಿ ಎಸ್‌ಐಆರ್: ಗೊಂದಲದ ಗೂಡು

Update: 2026-08-10 09:00 IST

ಕರ್ನಾಟಕದಲ್ಲಿನ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಒಂದು ಕೋಟಿಗೂ ಹೆಚ್ಚು ಮತದಾರರನ್ನು ಮತ್ತು ಬೆಂಗಳೂರಿನಲ್ಲಿ ಅರ್ಧಕ್ಕರ್ಧ ಮತದಾರರನ್ನು ಪಟ್ಟಿಯಿಂದ ಹೊರಗಿಡಲು ತಯಾರಿ ನಡೆದಿದೆ. ಮೊದಲ ಕರಡುಪಟ್ಟಿಯಿಂದ ಹೊರಗಿಡಲು ಗುರುತಿಸಿರುವ ಮತದಾರರನ್ನು, ಬಂಗಾಳದಲ್ಲಿನ ಎಸ್‌ಐಆರ್ ಹೊತ್ತಲ್ಲಿ ಮೊದಲ ಬಾರಿಗೆ ಬಳಸಲಾದ ತಾರ್ಕಿಕ ವ್ಯತ್ಯಾಸ (logical discrepancy) ಎಂಬ ವರ್ಗದ ಬದಲು, ಂSಆಆಔ (ಅಂದರೆ ಅಬ್ಸೆಂಟ್, ಶಾಶ್ವತ ಸ್ಥಳಾಂತರ, ಮೃತ, ನಕಲಿ ಮತ್ತು ಇತರ) ಎಂಬ ವರ್ಗದಡಿ ಇರಿಸಲಾಗಿದೆ. ಈ ಪಟ್ಟಿಗೆ ತಪ್ಪಾಗಿ ಸೇರ್ಪಡೆಯಾದವರು ದಾಖಲೆ ನೀಡುವ ಮೂಲಕ ಪಟ್ಟಿಯಲ್ಲಿ ಉಳಿದುಕೊಳ್ಳಲು ಅವಕಾಶ ವಿಸ್ತರಿಸಲಾಗಿದ್ದು, ಆಗಸ್ಟ್ 17ಕ್ಕೆ ಪ್ರಕಟವಾಗಬೇಕಿದ್ದ ಕರಡು ಮತದಾರರ ಪಟ್ಟಿ ಆಗಸ್ಟ್ 24ಕ್ಕೆ ಪ್ರಕಟವಾಗಲಿದೆ.

ರಾಜ್ಯದ 5.54 ಕೋಟಿ ಮತದಾರರಲ್ಲಿ 1.11 ಕೋಟಿ ಮತದಾರರನ್ನು ಎಎಸ್‌ಡಿಡಿಒ ಎಂದು ವರ್ಗೀಕರಿಸಲಾಗಿದೆ. ಬೆಂಗಳೂರಿನಲ್ಲಂತೂ 1.03 ಕೋಟಿ ನೋಂದಾಯಿತ ಮತದಾರರಲ್ಲಿ 49.42 ಲಕ್ಷ, ಅಂದರೆ ಅರ್ಧಕ್ಕರ್ಧ ಮತದಾರರನ್ನು ಎಎಸ್‌ಡಿಡಿಒ ವರ್ಗದಲ್ಲಿ ಇರಿಸಲಾಗಿದೆ. ಆದರೆ ಈ ವರ್ಗದಲ್ಲಿ ತಪ್ಪಾಗಿ ಸಾಕಷ್ಟು ಹೆಸರುಗಳು ಸೇರಿರುವುದರ ಬಗ್ಗೆ ರಾಜ್ಯಾದ್ಯಂತದಿಂದ ದೂರುಗಳು ಬರುತ್ತಿವೆ. ಈಗ ಎದ್ದಿರುವ ತಕರಾರುಗಳ ಪ್ರಕಾರ, ಹೊಸದಾಗಿ ಮದುವೆಯಾದ ಮಹಿಳೆಯರು ಹಾಗೂ ವಾಸಸ್ಥಳ ಬದಲಿಸಿದ ಹಲವರ ಹೆಸರುಗಳನ್ನು ಯಾವುದೇ ನೋಟಿಸ್ ನೀಡದೆ, ಸ್ಥಳಾಂತರ ಎಂದು ತಪ್ಪಾಗಿ ಗುರುತಿಸಲಾಗಿದೆ. ಬಂಗಾಳದಲ್ಲಿ ಕಾಗುಣಿತ ದೋಷಗಳನ್ನೆಲ್ಲ ಉಲ್ಲೇಖಿಸಿ ಮತದಾರರನ್ನು ಹೊರಗಿಡಲಾಗಿತ್ತು. ಮತ್ತದು ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಆದರೆ ಇಲ್ಲಿ ಅಬ್ಸೆಂಟ್, ಸ್ಥಳಾಂತರ ಮತ್ತು ಇತರ ಎಂದು ಉಲ್ಲೇಖಿಸಿರುವಲ್ಲಿ ಆಯೋಗದ ಜಾಣತನ ಇರುವಂತಿದೆ. ಅಲ್ಲದೆ, ಜಾರಿಕೊಳ್ಳಲು ಅನುಕೂಲವಾಗುವ ಅಸ್ಪಷ್ಟತೆಯೂ ಇದೆ. ಎಸ್‌ಐಆರ್ ಪ್ರಕ್ರಿಯೆಯೇ ಗೊಂದಲದ ಗೂಡು ಎನ್ನುವುದಕ್ಕಿಂತ, ಗೊಂದಲ ಸೃಷ್ಟಿಸುವುದಕ್ಕಾಗಿಯೇ ಇದನ್ನು ತರಲಾಗಿದೆ ಎಂಬುದು ಗೋಚರಿಸುತ್ತದೆ. ಎನ್ಯುಮರೇಷನ್ ಫಾರಂಗಳಲ್ಲಿನ ಕಾಲಂಗಳ ಅಸ್ಪಷ್ಟತೆ ಮತ್ತು ಅವನ್ನು ಭರ್ತಿ ಮಾಡುವುದರ ಬಗ್ಗೆ ಆಯೋಗವು ಕೂಡ ಸಮರ್ಪಕ ಮಾಹಿತಿ ನೀಡದೇ ಇದ್ದಲ್ಲಿಂದ ಹಿಡಿದು, ಈಗಿನ ಎಎಸ್‌ಡಿಡಿಒ ವರ್ಗೀಕರಣದವರೆಗೂ ಈ ಗೊಂದಲ ಕಾಣಿಸುತ್ತಿದೆ. 2002ರ ಎಸ್‌ಐಆರ್ ಬಗ್ಗೆ ಮಾಹಿತಿ ಕೇಳಲಾದ ಈ ಪ್ರಕ್ರಿಯೆಯ ಒಂದು ಹಂತದಲ್ಲಿ, ಅದರ ಹೊರತಾದ ಮಾಹಿತಿಯನ್ನಷ್ಟೇ ಭರ್ತಿ ಮಾಡಿದರೂ ಸಾಕು ಎಂದು ಹೇಳಲಾಯಿತು. ಕಳೆದ ಚುನಾವಣೆಗಳಲ್ಲಿ ಇದೇ ಮತದಾರರ ಮತಗಳು ಅರ್ಹವಾಗಿದ್ದವು ಎಂದಾದರೆ, 24 ವರ್ಷಗಳ ಹಿಂದಿನ ಎಸ್‌ಐಆರ್ ಬಗೆಗಿನ ಮಾಹಿತಿ ಕೇಳಿ ಅವಾಂತರ ಎಬ್ಬಿಸಬೇಕಿರಲಿಲ್ಲ. ನಕಲಿ ಮತದಾರರು ಮತ್ತು ಮೃತರನ್ನು ಪಟ್ಟಿಯಿಂದ ತೆಗೆಯುವುದೇ ಕಾಳಜಿಯಾಗಿದ್ದರೆ, ಆಯೋಗವು ಬೇರೆಯೇ ಸರಳ ವಿಧಾನವನ್ನು ಬಳಸಬಹುದಿತ್ತು. ಈಗ ಎಸ್‌ಐಆರ್ ಮೂಲಕ ಅರ್ಹರನ್ನು ಹೊರಗಿಟ್ಟು, ಅವರು ತಮ್ಮ ಅರ್ಹತೆಯನ್ನು ಸಾಬೀತುಪಡಿಸಿಕೊಳ್ಳಬೇಕಾದ ಅನಿವಾರ್ಯತೆಗೆ ತಳ್ಳಿರುವುದೇ ವಿಚಿತ್ರ ಮತ್ತು ಸ್ಪಷ್ಟವಾಗಿ, ರಾಜಕೀಯ ಆಟ.

ಬಿಹಾರ, ಬಂಗಾಳಕ್ಕೆ ಹೋಲಿಸಿದರೆ, ಕರ್ನಾಟಕದಲ್ಲಿ ಯಾವುದೇ ವಿರೋಧವಿಲ್ಲದೆ ಎಸ್‌ಐಆರ್ ಪ್ರಕ್ರಿಯೆಗೆ ಅವಕಾಶ ಮಾಡಿಕೊಡಲಾಗಿತ್ತು. ಕಾಂಗ್ರೆಸ್ ಸರಕಾರ ಇರುವುದರಿಂದ ಕರ್ನಾಟಕದಲ್ಲಿ ಎಸ್‌ಐಆರ್‌ಗೆ ತೀವ್ರ ವಿರೋಧ ವ್ಯಕ್ತವಾಗಬಹುದು ಎಂಬ ನಿರೀಕ್ಷೆ ಅಥವಾ ಆಗಬೇಕು ಎಂಬ ಬಯಕೆ ಎಸ್‌ಐಆರ್ ಹಿಂದಿರುವವರಲ್ಲಿ ಇದ್ದಿದ್ದಿರಬಹುದು. ಆದರೆ ಸರಕಾರ ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸಲು ಜನರನ್ನು ಕೇಳಿತು. ಕಾಂಗ್ರೆಸ್ ವಿರೋಧವನ್ನು ನಿರೀಕ್ಷಿಸಿದ್ದ ಬಿಜೆಪಿ ಕಡೆಗೆ ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಸ್ವತಃ ದೂರು ಕೊಡುವಂತಾದದ್ದು ತಮಾಷೆ. ಬಿಎಲ್‌ಒಗಳು ನಿಯಮ ಉಲ್ಲಂಘಿಸಿ, ಮನೆ ಮನೆ ಸಮೀಕ್ಷೆ ನಡೆಸದೆ ಎಲ್ಲೋ ಒಂದೆಡೆ ಕುಳಿತು ಸಾಮೂಹಿಕವಾಗಿ ಫಾರಂ ಭರ್ತಿ ಮಾಡಿಸುತ್ತಿದ್ದಾರೆ ಎಂಬ ದೂರುಗಳು ಆರಂಭದಿಂದಲೂ ಇದ್ದವು. ಹೇಗೆ ಫಾರಂ ಭರ್ತಿ ಮಾಡಬೇಕೆಂಬುದರ ಬಗ್ಗೆ ಆಯೋಗದಿಂದ ಸರಿಯಾದ ಮಾರ್ಗದರ್ಶನ ಇಲ್ಲವೆಂದು ಆರೋಪಿಸಿ ಕೆಲವೆಡೆ ಪ್ರತಿಭಟನೆಗಳೂ ನಡೆದಿದ್ದವು. ಈಗ ಅರ್ಹ ಮತದಾರರನ್ನೇ ಹೊರಗಿಡಲಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ನಿಯಮಾವಳಿಗಳನ್ನು ಪಾಲಿಸದೆ ನೇರವಾಗಿ ಕರಡು ಪಟ್ಟಿಯಿಂದ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವುದಕ್ಕೆ ಆಕ್ಷೇಪವಿದೆ.

ಸ್ಥಳಾಂತರಗೊಂಡವರು ಎಂದು ಗುರುತಿಸಲಾಗಿದ್ದರೆ ಫಾರಂ 6ರ ಮೂಲಕ ಹೊಸದಾಗಿ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು ಎಂದು ಆಯೋಗ ಹೇಳುತ್ತಿದೆ. ಆದರೆ ಅದು ಕಾನೂನುಬಾಹಿರ. ಸ್ಥಳಾಂತರಗೊಂಡಿದ್ದರೆ, ಫಾರಂ 8ರ ಮೂಲಕ ವಿಳಾಸವನ್ನು ಬದಲಿಸುವುದು ಸರಿಯಾದ ಹಾದಿ. ಅಲ್ಲದೆ, ನೋಟಿಸ್ ನೀಡದೆ ಹೆಸರುಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಪರಿಣಿತರು ಹೇಳುತ್ತಿದ್ದಾರೆ. ಸ್ಥಳಾಂತರಗೊಂಡವರು ನಿವಾಸದ ಪುರಾವೆ ಪಡೆಯುವುದು ಸುಲಭವಲ್ಲವಾದ್ದರಿಂದ, ಹೊಸದಾಗಿ ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸುವುದು ಹೇಳುವಷ್ಟು ಸಲೀಸಲ್ಲ ಎಂಬ ಅಭಿಪ್ರಾಯಗಳೂ ಇವೆ. ಸಮಯದ ಮಿತಿ ಮತ್ತು ಬಿಎಲ್‌ಒಗಳ ಮೇಲಿನ ಅನಗತ್ಯ ಒತ್ತಡದಿಂದಾಗಿ ಅರ್ಹ ಮತದಾರರನ್ನು ಹೊರಗಿಡಲಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಎಎಸ್‌ಡಿಡಿಒ ಸಂಖ್ಯೆಗಳನ್ನು ಹೇಗೆ ಪಡೆಯಲಾಗಿದೆ ಎಂಬುದರ ಬಗ್ಗೆ ಚುನಾವಣಾಧಿಕಾರಿಗಳು ವಿವರಗಳನ್ನು ಕೊಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಈ ನಡುವೆ, ಎಸ್‌ಐಆರ್ ಜಾರಿಗೊಳಿಸುವುದು ಸ್ವತಃ ಚುನಾವಣಾ ಆಯೋಗವೇ ತೆಗೆದುಕೊಂಡ ನಿರ್ಧಾರವಲ್ಲ ಎಂದು ಆಯೋಗದ ಉನ್ನತ ಅಧಿಕಾರಿಯೇ ಲಿಖಿತವಾಗಿ ಒಪ್ಪಿಕೊಂಡಿರುವ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ದಿಲ್ಲಿಯಲ್ಲಿ ನೀಡಿರುವ ಹೇಳಿಕೆ ಮಹತ್ವ ಪಡೆದಿದೆ. ಆಯೋಗದ ತೀರ್ಮಾನವಲ್ಲವೆಂದಾದರೆ, ನೂರು ಕೋಟಿ ಭಾರತೀಯರ ಭವಿಷ್ಯವನ್ನು ನಿರ್ಣಯಿಸುವ ಈ ತೀರ್ಮಾನವನ್ನು ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ತೆಗೆದುಕೊಳ್ಳಲಾಯಿತೇ ಅಥವಾ ಗೃಹ ಸಚಿವಾಲಯದಲ್ಲಿ ತೆಗೆದುಕೊಳ್ಳಲಾಯಿತೇ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಎಸ್‌ಐಆರ್ ಹಿಂದೆ ಇರುವುದು ಯಾರ ಕೈ ಎಂಬುದು ರಹಸ್ಯವಲ್ಲವಾದರೂ, ಈಗ ಆಯೋಗದೊಳಗಿನವರೇ ಒಪ್ಪಿಕೊಂಡಿರುವುದರಿಂದ, ಈಗಾಗಲೇ ಆಯೋಗಕ್ಕೆ ಮೆತ್ತಿಕೊಂಡಿರುವ ಮಸಿ ಇನ್ನೂ ಢಾಳಾಗಿ ಕಾಣುವಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News